ಹೊಸಪೇಟೆ: ‘ಇನ್ಫೊಸಿಸ್ ಸಂಸ್ಥಾಪಕರಲ್ಲಿ ಒಬ್ಬರಾದ ನಾರಾಯಣಮೂರ್ತಿ ಅವರಿಗೆ ಹಸಿವು ಅಂದರೇನು ಅಂತ ಗೊತ್ತಿಲ್ಲ. ಅದಕ್ಕಾಗಿಯೇ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಿದ್ದಾರೆ’ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ಕರ್ನಾಟಕ ರಾಜ್ಯ ಚಲವಾದಿ ಮಹಾಸಭಾ ವತಿಯಿಂದ ಭಾನುವಾರ ಇಲ್ಲಿ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸಮಾನತೆ, ಸಮಾನ ಅವಕಾಶ, ಸಾಮಾಜಿಕ ನ್ಯಾಯ, ಸಂವಿಧಾನದ ಆಶಯಗಳ ಬಗ್ಗೆ ಗೊತ್ತಿರುವ ಹಾಗೆ ಮಾತನಾಡುತ್ತಾರೆ. ಅವರಿಗೆ ಸಂವಿಧಾನ ಅರ್ಥವೇ ಆಗಿಲ್ಲ. ಇವರು ಮಾತ್ರ ಇದ್ದ ಜಮೀನನ್ನು ಕಡಿಮೆ ದುಡ್ಡಿಗೆ ಅಥವಾ ದುಡ್ಡು ಕೊಡದೆ ಹೊಡ್ಕೊಂಡ್ರು, ಬಡವರಿಗೆ ಮಾತ್ರ ಏನೂ ಕೊಡಬೇಡಿ ಅಂತಾರೆ’ ಎಂದು ಖಾರವಾಗಿ ನುಡಿದರು.
‘ಉದ್ಯಮಿಗಳಿಗೆ ಒಂದು ಲಕ್ಷ ಕೋಟಿ ರೂಪಾಯಿ ಸಾಲ ಮನ್ನಾ ಮಾಡುವಾಗ ಮಾತನಾಡದ ಇವರಿಗೆ ಈ ಗ್ಯಾರಂಟಿ ಕೊಡುವಾಗ ಏಕೆ ಇಷ್ಟು ಕಣ್ಣುರಿ? ಎಷ್ಟೇ ಟೀಕೆ ಬರಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸರ್ಕಾರ ಇದ್ಯಾವುದಕ್ಕೂ ಸೊಪ್ಪು ಹಾಕುವುದಿಲ್ಲ’ ಎಂದು ಮಹದೇವಪ್ಪ ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.