ADVERTISEMENT

ಹೂವಿನಹಡಗಲಿ: ಕಲ್ಯಾಣಿ ಚಾಲುಕ್ಯರ ಶಾಸನ ಪತ್ತೆ

ಸಂಶೋಧಕಿ ಎಂ.ಪಿ.ವೀಣಾ ಮಹಾಂತೇಶ ತಂಡದಿಂದ ಪತ್ತೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2024, 5:01 IST
Last Updated 15 ನವೆಂಬರ್ 2024, 5:01 IST
<div class="paragraphs"><p>ಹೂವಿನಹಡಗಲಿ ಪಟ್ಟಣದ ಗವಿಮಠ ಎದುರಿನ ಪುಷ್ಕರಣಿ ಬಳಿ ಪತ್ತೆಯಾಗಿರುವ ತುಂಡಾದ ಶಾಸನ</p></div>

ಹೂವಿನಹಡಗಲಿ ಪಟ್ಟಣದ ಗವಿಮಠ ಎದುರಿನ ಪುಷ್ಕರಣಿ ಬಳಿ ಪತ್ತೆಯಾಗಿರುವ ತುಂಡಾದ ಶಾಸನ

   

ಹೂವಿನಹಡಗಲಿ (ವಿಜಯನಗರ ಜಿಲ್ಲೆ): ಪಟ್ಟಣದ ಹಂಪಸಾಗರ ರಸ್ತೆಯ ಶಿವಶಾಂತವೀರ ಸಮುದಾಯ ಭವನ ಎದುರು ಇರುವ ಪುರಾತನ ಪುಷ್ಕರಣಿಯಲ್ಲಿ ಕಲ್ಯಾಣಿಯ ಚಾಲುಕ್ಯರ ಕಾಲದ ಶಿಲಾ ಶಾಸನ ಪತ್ತೆಯಾಗಿದೆ. ಸಂಶೋಧಕಿ ಎಂ.ಪಿ.ವೀಣಾ ಮಹಾಂತೇಶ ತಂಡ ಸಂಶೋಧನೆ ನಡೆಸುತ್ತಿದ್ದ ವೇಳೆ ಪತ್ತೆಯಾಗಿದೆ.

‘18 ಸಾಲುಗಳು ಇರುವ ತುಂಡಾದ ಶಾಸನದಲ್ಲಿ ಕಾಲ, ಊರು, ಸಾಮಂತರ ವಿವರಣೆ ಅಸ್ಪಷ್ಟವಾಗಿವೆ. ಲಿಪಿಯ ಶೈಲಿ, ಭಾಷೆ, ಸಾಹಿತ್ಯ ಮತ್ತು ಶಾಸನ ಕೆತ್ತನೆಗೆ ಬಳಸಿದ ಶಿಲೆ ಗಮನಿಸಿದಾಗ ಚಾಲುಕ್ಯರ ಶಿಲಾ ಶಾಸನವೆಂದು ಗುರುತಿಸಬಹುದು’ ಎಂದು ವೀಣಾ ತಿಳಿಸಿದರು.

ADVERTISEMENT

‘ಶಾಸನದ ಶೇ 25ರಷ್ಟು ತುಂಡು ಮಾತ್ರ ಪತ್ತೆಯಾಗಿದೆ. ಮೇಲ್ಭಾಗ, ಕೆಳಭಾಗದ ಸಾಲುಗಳು ನಾಶವಾಗಿವೆ. ಮೂರನೇ ಸಾಲಿನಲ್ಲಿ ಯೋಗಿಯೊಬ್ಬರ ಉಲ್ಲೇಖವಿದೆ. ಯೋಗಿಯ ಹೆಸರು ಇರುವಲ್ಲೇ ಶಿಲೆ ತುಂಡಾಗಿ ಹೋಗಿದೆ. ಇದನ್ನು ಕ್ರಿ.ಶ. 1109ರಲ್ಲಿ ರಚಿಸಿರುವ ಸಾಧ್ಯತೆ ಇದೆ. ಶಾಸನದ ಕೊನೆಯಲ್ಲಿ ಚಂದ್ರ ತಾರೆಯರು ಇರುವವರೆಗೂ ಧರ್ಮ ಪಾಲಿಸಬೇಕೆಂದು ಶಾಪಾಶಯ ರಚಿಸಿದ್ದಾರೆ. ಶಾಸನದ ಉಳಿದ ಭಾಗ ದೊರೆತರೆ ಕಲ್ಯಾಣಿ ಚಾಲುಕ್ಯರ ಇತಿಹಾಸ, ಮಾಂಡಲಿಕರು, ಧರ್ಮಗುರು, ಧಾರ್ಮಿಕ ಚಟುವಟಿಕೆಗಳ ಮಾಹಿತಿ ದೊರೆಯಬಹುದು’ ಎಂದು ಅವರು ಹೇಳಿದರು.

‘ಈ ಶಾಸನದ ಲಿಪಿಗೂ ಪಾಂಡುರಂಗ ದೇವಸ್ಥಾನ ಬಳಿ ದೊರೆತ ಶಾಸನದ ವಿವರಣೆಗೂ ಸಾಮ್ಯತೆ ಇದೆ. ಅಧ್ಯಯನಕಾರ ಡಾ. ಕೆ.ರವಿಕುಮಾರ್ ನವಲಗುಂದ ಶಾಸನದ ಲಿಪಿ ಓದಿ ಅರ್ಥೈಸಿದ್ದಾರೆ. ಹಂಪಿ ಕನ್ನಡ ವಿವಿಯ ಸಂಶೋಧನಾ ವಿದ್ಯಾರ್ಥಿ ವೀರೇಶ ನೆರವಾಗಿದ್ದಾರೆ’ ಎಂದರು.

ಹೂವಿನಹಡಗಲಿ ಪಟ್ಟಣದ ಗವಿಮಠ ಎದುರಿಗಿರುವ ಪುಷ್ಕರಣಿ ಮತ್ತು ಈಶ್ವರ ದೇವಸ್ಥಾನ

ಚರಿತ್ರೆಯ ಮೇಲೆ ಬೆಳಕು ಸಾಧ್ಯತೆ

‘ವಿಜಯನಗರ ಕಾಲದ ವಾಸ್ತುಶೈಲಿಯ ಈ ಪುಷ್ಕರಣಿಯಲ್ಲಿ ಪೂರ್ವಾಭಿಮುಖವಾಗಿ ಎರಡು ದೇವಸ್ಥಾನಗಳಿವೆ. ಒಂದು ಗರ್ಭಗುಡಿಯಲ್ಲಿ ಶಿವಲಿಂಗ ನಂದಿ ವಿಗ್ರಹಗಳಿವೆ. ಪುಷ್ಕರಣಿಯ ಮೂರು ಭಾಗಗಳಲ್ಲಿ ದೇವಕೋಷ್ಠಕಗಳಿವೆ. ಪಟ್ಟಣದಲ್ಲಿ ರಾಷ್ಟ್ರಕೂಟ ಕಲ್ಯಾಣಿ ಚಾಲುಕ್ಯ ವಿಜಯನಗರ ಅರಸರ ಕಾಲಕ್ಕೆ ಸಂಬಂಧಿಸಿದ ದೇವಸ್ಥಾನಗಳು ಶಾಸನಗಳು ವೀರಗಲ್ಲುಗಳು ಇವೆ. ಅಪ್ರಕಟಿತ ಶಾಸನಗಳು ಸಾಕಷ್ಟಿವೆ. ಇವುಗಳ ಸಂಶೋಧನೆ ಅಧ್ಯಯನದಿಂದ ಪಟ್ಟಣದ ಚರಿತ್ರೆಯನ್ನು ಕಟ್ಟಿಕೊಡಬಹುದಾಗಿದೆ’ ಎಂದು ಎಂ.ಪಿ.ವೀಣಾ ಮಹಾಂತೇಶ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.