ADVERTISEMENT

ವಿಜಯನಗರ | ಮಾನಸಿಕ ಕಾಯಿಲೆ ಹೆಚ್ಚುತ್ತಿದೆ; ಯೋಗವೇ ಪರಿಹಾರ: ದಿವಾಕರ್

​ಪ್ರಜಾವಾಣಿ ವಾರ್ತೆ
Published 21 ಜೂನ್ 2024, 2:30 IST
Last Updated 21 ಜೂನ್ 2024, 2:30 IST
   

ಹೊಸಪೇಟೆ (ವಿಜಯನಗರ): ಹಿಂದೆ ದಕ್ಷಿಣ ಭಾರತಕ್ಕೆ ಒಂದೇ ಒಂದು ಮಾನಸಿಕ ಆರೋಗ್ಯ ಕೇಂದ್ರ ಇತ್ತ, ಬಳಿಕ ರಾಜ್ಯಕ್ಕೆ ಒಂದು ಮಾನಸಿಕ ಕೇಂದ್ರ ಬಂತು. ಇಂದು ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಾನಸಿಕ ಕಾಯಿಲೆಗೆ ಗುಳಿಗೆ ಕೊಡಲಾಗುತ್ತಿದೆ. ಇದು ಮಾನಸಿಕ ಕಾಯಿಲೆ ಹೆಚ್ಚಿದ್ದರ ಸೂಚನೆ. ಇದಕ್ಕೆ ಯೋಗವೇ ಪರಿಹಾರ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಹೇಳಿದರು.

ಆಯುಷ್, ಜಿಲ್ಲಾಡಳಿತ ಸಹಿತ ವಿವಿಧ ಇಲಾಖೆಗಳ ವತಿಯಿಂದ ಶುಕ್ರವಾರ ಬೆಳಿಗ್ಗೆ ಇಲ್ಲಿನ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ಜಿಲ್ಲಾ ಮಟ್ಟದ 10ನೇ ಅಂತರರಾಷ್ಟ್ರೀಯ ಯೋಗ ದಿನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮಾನಸಿಕ ಅನಾರೋಗ್ಯ ಇಂದು ಮನೆ ಮನೆಗೂ ವ್ಯಾಪಿಸಿದೆ, ಪ್ರತಿ ಮನೆಯಲ್ಲೂ ಒಂದು ರೀತಿಯ ಅರೆಹುಚ್ಚರು ಇದ್ದಂತಿದೆ. ಇದನ್ನು ಕಡೆಗಣಿಸಿದರೆ ಮುಂದೆ ಬಹಳ ಅಪಾಯ ಇದೆ. ಹೀಗಾಗಿ ಯೋಗ ಅಭ್ಯಾಸದಿಂದ ಒತ್ತಡದಿಂದ ಬರುವ ನಮ್ಮ ಮಾನಸಿಕ ಕಾಯಿಲೆ ದೂರಮಾಡಬಹುದು ಎಂದರು.

ADVERTISEMENT

ಯೋಗ ದಿನಚರಿಯ ಒಂದು ಭಾಗವಾಗಬೇಕು ಎಂದ ಜಿಲ್ಲಾಧಿಕಾರಿ, ವಿದ್ಯಾರ್ಥಿಗಳು, ಯುವಜನತೆ ಇದರತ್ತ ಇನ್ನಷ್ಟು ಆಕರ್ಷಿತರಾದರೆ ಉತ್ತಮ ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಸದಾಶಿವ ಪ್ರಭು ಬಿ. ಮಾತನಾಡಿ, ಒತ್ತಡ ನಿರ್ವಹಿಸಲು ಯೋಗ ಪರಿಣಾಮಕಾರಿ ಎಂಬುದು ಈಗಾಗಲೇ ಸಾಬೀತಾಗಿದೆ, ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಆಯುಷ್ ಇಲಾಖೆಯ ಡಾ.ಮುನಿವಾಸುದೇವ ರೆಡ್ಡಿ, ಡಾ.ಗುರುಬಸವರಾಜ್, ಪತಂಜಲಿ ಯೋಗ ಸಮಿತಿಯ ದಕ್ಷಿಣ ಭಾರತದ ವರಿಷ್ಠರು ಹಾಗೂ ರಾಜ್ಯ ಪ್ರಭಾರಿ ಭವರಲಾಲ್ ಆರ್ಯ, ಪ್ರಜಾಪಿತ ಬ್ರಹ್ಮಕುನಾರಿ ಈಶ್ವರೀಯ ವಿಶ್ವವಿದ್ಯಾಲಯದ ಮಾನಸ ಇತರರು ಪಾಲ್ಗೊಂಡಿದ್ದರು.

ಬಳಿಕ ನಡೆದ ಸಾಮೂಹಿಕ ಯೋಗ ಶಿಬಿರಕ್ಕೆ ಭವರಲಾಲ್ ಆರ್ಯ ಮಾರ್ಗದರ್ಶನ ನೀಡಿದರು. ಯುವ ಭಾರತ ರಾಜ್ಯ ಪ್ರಭಾರಿ ಕಿರಣ್ ಕುಮಾರ್, ಯೋಗ ಸಾಧಕ ಬಾಲಚಂದ್ರ ಶರ್ಮಾ, ಯೋಗ ಸಾಧಕಿಯರಾದ ಪೂಜಾ ಐಲಿ, ನೇತ್ರಾವತಿ, ಸುಶೀಲಾ ಅವರು ಸಹ ಮಾರ್ಗದರ್ಶನ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.