ADVERTISEMENT

ಹೊಸಪೇಟೆ: ಜೆನ್ನಿಮಿಲ್ಕ್‌ ಪ್ರಕರಣ; ಸಿಐಡಿ ತನಿಖೆ ಆರಂಭ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2024, 10:45 IST
Last Updated 14 ನವೆಂಬರ್ 2024, 10:45 IST
   

ಹೊಸಪೇಟೆ (ವಿಜಯನಗರ): ಕತ್ತೆ ನೀಡಿ ಹಾಲು ಖರೀದಿಸುವ ವ್ಯವಹಾರದಲ್ಲಿ ತೊಡಗಿದ್ದ ಜೆನ್ನಿ ಮಿಲ್ಕ್ ಕಂಪನಿಯಿಂದ ರೈತರಿಗೆ ಆಗಿರುವ ಕೋಟ್ಯಂತರ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿಯಿಂದ ಗುರುವಾರ ತನಿಖೆ ಆರಂಭವಾಗಿದೆ.

ಸಿಐಡಿ ಕಲಬುರ್ಗಿ ವಿಭಾಗದ ಡಿವೈಎಸ್‌ಪಿ ಅಸ್ಲಂ ಪಾಷಾ ನೇತೃತ್ವದ ಒಟ್ಟು ಎಂಟು ಮಂದಿಯ ತಂಡ ಬುಧವಾರ ರಾತ್ರಿ ನಗರಕ್ಕೆ ಆಗಮಿಸಿತ್ತು. ಗುರುವಾರ ಬೆಳಿಗ್ಗೆಯಿಂದಲೇ ವಿವಿಧೆಡೆಗೆ ತೆರಳಿ ಮಾಹಿತಿ ಸಂಗ್ರಹಿಸುವ ಕೆಲಸ ನಡೆಸಿತು.

ತಾಲ್ಲೂಕಿನ ಗಾಳೆಮ್ಮನಗುಡಿ ಭಾಗದಲ್ಲಿ ಕತ್ತೆಗಳನ್ನು ಕೂಡಿಡುವ ಸ್ಥಳ ಇದ್ದು, ಅಲ್ಲಿಗೆ ತೆರಳಿದ ತಂಡ ಪರಿಶೀಲನೆ ನಡೆಸಿತು. ಅಲ್ಲಿಗೆ ಐದಾರು ಹೂಡಿಕೆದಾರ ರೈತರನ್ನು ಕರೆಸಿಕೊಂಡು ಮಾಹಿತಿ ಪಡೆಯಿತು. ಬಳಿಕ ನಗರ ಠಾಣೆಯಲ್ಲೂ ಕೆಲವು ರೈತರನ್ನು ಭೇಟಿ ಮಾಡಿ ಮಾಹಿತಿ ಪಡೆಯಿತು. 

ADVERTISEMENT

ಎಸ್‌ಪಿ ಶ್ರೀಹರಿಬಾಬು ಬಿ.ಎಲ್‌.ಅವರನ್ನು ಸಹ ಭೇಟಿ ಮಾಡಿ ಪ್ರಕರಣದ ಬಗ್ಗೆ ಮಾಹಿತಿ ಪಡೆದುಕೊಂಡ ತಂಡ ಬಳಿಕ ಹಂಪಿ ರಸ್ತೆಯಲ್ಲಿರುವ ಜೆನ್ನಿಮಿಲ್ಕ್‌ ಕಂಪನಿಯ ಕಚೇರಿಗೆ ತೆರಳಿ ಪರಿಶೀಲನೆ ನಡಸಿತು.

ತಂಡದಲ್ಲಿ ಡಿವೈಎಸ್‌ಪಿ ಅಸ್ಲಂ ಬಾಷಾ ಅವರಲ್ಲದೆ, ಒಬ್ಬರು ಎಎಸ್‌ಐ ಮತ್ತು ಆರು ಮಂದಿ ಪೊಲೀಸ್‌ ಕಾನ್‌ಸ್ಟೆಬಲ್‌ಗಳಿದ್ದಾರೆ. ನಗರ ಠಾಣೆ ಇನ್‌ಸ್ಪೆಕ್ಟರ್‌ ಲಖನ್‌ ಮಸಗುಪ್ಪಿ ಸಹಿತ ಇತರ ಅಧಿಕಾರಿಗಳು ತಂಡಕ್ಕೆ ಪೂರಕ ಮಾಹಿತಿ ನೀಡಿದರು. ಸುಮಾರು ಒಂದು ವಾರ ಕಾಲ ತಂಡ ನಗರದಲ್ಲಿ ಬೀಡು ಬಿಟ್ಟು ತನಿಖೆ ನಡೆಸುವ ನಿರೀಕ್ಷೆ ಇದೆ.

ಹಿನ್ನೆಲೆ: ಕಂಪನಿಯಿಂದ ವಂಚನೆಯಾಗಿರುವ ಬಗ್ಗೆ 318 ಮಂದಿ ನಗರ ಠಾಣೆಗೆ ದೂರು ಸಲ್ಲಿಸಿದ್ದರು. ಪ್ರತಿ ಮೂರು ಕತ್ತೆಗಳಿಗೆ ಒಂದು ಯುನಿಟ್‌ ಎಂದು ನಿಗದಿಯಾಗಿದ್ದು, ಒಟ್ಟು 484 ಯುನಿಟ್‌ಗಳನ್ನು ಈ 318 ಮಂದಿ ಕಂಪನಿಯಿಂದ ಪಡೆದಿದ್ದರು. ಹೀಗಾಗಿ ವಂಚನೆಯ ಮೊತ್ತ ₹13 ಕೋಟಿಗೂ ಹೆಚ್ಚಿದೆ ಎಂದು ಹೇಳಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ತಿಂಗಳು ಒಟ್ಟು ಐವರನ್ನು ಬಂಧಿಸಲಾಗಿದೆ. ವ್ಯವಹಾರದ ಬಗ್ಗೆ ರೈತಸಂಘದವರು ಜಿಲ್ಲಾಧಿಕಾರಿ ಅವರಿಗೆ ದೂರು ನೀಡಿದ ಬಳಿಕ ತನಿಖೆ ನಡೆಸಿದಾಗ ಕಂಪನಿ ವ್ಯಾಪಾರ ಪರವಾನಗಿ ಪಡೆಯದೆ ಕಚೇರಿ ನಡೆಸಿದ್ದು ಕಂಡುಬಂದಿತ್ತು. ಹೀಗಾಗಿ ಸೆ.17ರಂದು ನಗರದ ಹಂಪಿ ರಸ್ತೆಯಲ್ಲಿರುವ ಕಚೇರಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು. ಬಳಿಕ ರಾಜ್ಯದ ನಾನಾ ಭಾಗಳಿಂದ ನೂರಾರು ಸಂಖ್ಯೆಯಲ್ಲಿ ಠಾಣೆಗೆ ಬಂದಿದ್ದ ರೈತರು ತಮಗೆ ಕಂಪನಿಯಿಂದ ವಂಚನೆಯಾಗಿದೆ ಎಂದು ದೂರು ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.