ಹೊಸಪೇಟೆ (ವಿಜಯನಗರ): ರೈತರಿಗೆ ಕತ್ತೆ ನೀಡಿ, ಹಾಲು ಖರೀದಿಸುವ ವ್ಯವಹಾರದಲ್ಲಿ ತೊಡಗಿದ್ದ ‘ಜೆನ್ನಿ ಮಿಲ್ಕ್’ ಸ್ಟಾರ್ಟ್‌ಅಪ್ ಕಂಪನಿಯ ಇಲ್ಲಿಯ ಕಚೇರಿಯನ್ನು ಮಂಗಳವಾರ ನಗರಸಭೆ ಅಧಿಕಾರಿಗಳು ಮುಚ್ಚಿಸಿದ್ದಾರೆ.
ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮನೋಹರ್, ನಗರಸಭೆ ಪೌರಾಯುಕ್ತ ಚಂದ್ರಪ್ಪ ಅವರ ನೇತೃತ್ವದಲ್ಲಿ ಪರಿಶೀಲನೆ ನಡೆಸಿದ ಅಧಿಕಾರಿಗಳು, ವ್ಯಾಪಾರ ಪರವಾನಗಿ ಪಡೆಯುವ ತನಕ ಕಚೇರಿ ತೆರಯುವಂತಿಲ್ಲ ಎಂಬ ಸೂಚನೆ ನೀಡಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಚಂದ್ರಪ್ಪ, ‘ಈ ಕಂಪನಿ ಇಲ್ಲಿ ವ್ಯವಹಾರ ನಡೆಸುವುದಕ್ಕೆ ಮೊದಲಾಗಿ ವ್ಯಾಪಾರ ಪರವಾನಗಿ ಪಡೆದಿಲ್ಲ, ಕತ್ತೆ ಹಾಲು ಸಾಮಾಜಿಕವಾಗಿ ಪರಿಗಣಿಸುವಂತಹ ಹಾಲು ಅಲ್ಲ. ಹೀಗಾಗಿ ಸಂಬಂಧಪಟ್ಟ ಇಲಾಖೆಗಳಿಂದ ಸೂಕ್ತ ಪರವಾನಗಿ ಪಡೆದುಕೊಂಡು ಬಂದ ಬಳಿಕ ನಗರಸಭೆ ವತಿಯಿಂದ ವ್ಯಾಪಾರ ಪರವಾನಗಿ ನೀಡುವುದಕ್ಕೆ ಪರಿಶೀಲನೆ ನಡೆಸಲಾಗುವುದು, ಅಲ್ಲಿಯವರೆಗೆ ಕಚೇರಿಯನ್ನು ತೆರೆಯುವಂತಿಲ್ಲ’ ಎಂದರು.
‘ಕತ್ತೆ ಹಾಲು ಪುಷ್ಟಿದಾಯಕ, ಶಕ್ತಿದಾಯಕ ಎಂದು ಹೇಳಬಹುದು, ಅದರೆ ಅದಕ್ಕೆ ಸರಿಯಾದ ಆಧಾರ ನೀಡಬೇಕು, ದಾಖಲೆಗಳು ಬೇಕು. ಅಂತಹ ದಾಖಲೆಗಳನ್ನು ಇವರು ಇಟ್ಟುಕೊಂಡಿಲ್ಲ. ಜನರು ಮೋಸ ಹೋಗುವ ಸಾಧ್ಯತೆ ಇದೆ ಎಂಬ ದೂರು ಸಹ ಬಂದಿದೆ. ಹೀಗಾಗಿ ಸಂಬಂಧಪಟ್ಟ ಇಲಾಖೆಗಳ ಅನುಮತಿಯೊಂದಿಗೆ ವ್ಯಾಪಾರ ಪರವಾನಗಿ ಪಡೆಯುವ ತನಕ ಕಚೇರಿ ಬಂದ್ ಆಗಿರಬೇಕೆಂದು ತಿಳಿಸಲಾಗಿದೆ’ ಎಂದರು.
‘ಕಂಪನಿಯಿಂದ ಮೋಸ ಹೋಗಿರುವ ಬಗ್ಗೆ ಯಾರೂ ಇದುವರೆಗೆ ದೂರು ಕೊಟ್ಟಿಲ್ಲ. ಆ ನಿಟ್ಟಿನಲ್ಲಿ ದೂರು ಬಂದರೆ ಅದರ ಬಗ್ಗೆಯೂ ಗಮನ ಹರಿಸಬೇಕಾಗುತ್ತದೆ. ಅದಕ್ಕೆ ಮೊದಲಾಗಿ ಕಂಪನಿ ಸೂಕ್ತ ಪರವಾನಗಿ ಪಡೆದೇ ಕಚೇರಿ ತೆರೆಯಬೇಕು. ಆ ಕೆಲಸ ಮೊದಲು ಮಾಡಲಿ’ ಎಂದು ಅವರು ಹೇಳಿದರು.
ಕಂಪನಿ ಈಗಾಗಲೇ ನೀಡಿರುವ ಮಾಹಿತಿಯಂತೆ ರಾಜ್ಯದ 200ಕ್ಕೂ ಅಧಿಕ ರೈತರು ಈ ಕಂಪನಿಗೆ ತಲಾ ₹3 ಲಕ್ಷ ಪಾವತಿಸಿ 600ಕ್ಕೂ ಅಧಿಕ ಹಾಲು ಕರೆಯುವ ಕತ್ತೆಗಳನ್ನು ಪಡೆದುಕೊಂಡಿದ್ದಾರೆ. ಕಂಪನಿಯ ಮುಖ್ಯ ಕಚೇರಿ ಆಂಧ್ರಪ್ರದೇಶದ ಅನಂತಪುರದಲ್ಲಿದ್ದು, ಅಲ್ಲಿ ಹಾಲಿನ ಸಂಸ್ಕರಣಾ ಘಟಕ ಸ್ಥಾಪಿಸುವ ಕೆಲಸ ನಡೆದಿದೆ ಎಂದು ಹೇಳಲಾಗಿದೆ.
ಮೂರು ದಾಖಲೆ ಕೊಟ್ಟಿದ್ದಾರೆ: ‘ಐಎಸ್‌ಒ ಪ್ರಮಾಣಪತ್ರ, ರಫ್ತು ಪ್ರಮಾಣಪತ್ರ ಸಹಿತ ಮೂರು ದಾಖಲೆಗಳನ್ನು ಕಂಪನಿಯವರು ನೀಡಿದ್ದಾರೆ. ಅದರ ನಿಖರತೆಯ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ. ಸದ್ಯ ಕಂಪನಿಯನ್ನು ಮುಚ್ಚಿಸಿರುವುದು ವ್ಯಾಪಾರ ಪರವಾನಗಿ ಪಡೆದಿಲ್ಲ ಎಂಬ ಕಾರಣಕ್ಕಾಗಿ ಮಾತ್ರ. ಯಾವುದೇ ವ್ವವಹಾರ ನಡೆಸುವುದಕ್ಕೆ ಮೊದಲಾಗಿ ಪರವಾನಗಿ ಪಡೆಯುವುದು ಕಡ್ಡಾಯ. ಹೀಗಾಗಿ ನಗರಸಭೆ ವತಿಯಿಂದ ಕಚೇರಿ ಮುಚ್ಚಿಸು ಕೆಲಸ ಆಗಿದೆ’ ಎಂದು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮನೋಹರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.