ಹೊಸಪೇಟೆ (ವಿಜಯನಗರ): 'ಹೊಸದಾಗಿ ಪತ್ರಿಕೋದ್ಯಮ ಸೇರುತ್ತಿರುವವರಿಗೆ ಭಾಷೆಯೇ ಗೊತ್ತಿಲ್ಲ. ಆದರೆ, ಪತ್ರಕರ್ತರಿಗೆ ಭಾಷೆಯ ಜ್ಞಾನ ಬಹಳ ಅತ್ಯಗತ್ಯ' ಎಂದು 'ಪ್ರಜಾವಾಣಿ' ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ತಿಳಿಸಿದರು.
'ಸುನಾಮಿ' ಪತ್ರಿಕೆ ಹಾಗೂ 'ಮಲ್ಟಿಕಲ್ಚರ್' ಮಾಸ ಪತ್ರಿಕೆಯ ಸಹಭಾಗಿತ್ವದಲ್ಲಿ ಜಿಲ್ಲೆಯ ಹಗರಿಬೊಮ್ಮನಹಳ್ಳಿಯಲ್ಲಿ ಶನಿವಾರ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಪ್ರಾಥಮಿಕ, ಪ್ರೌಢಶಾಲೆಯಲ್ಲಿ ಉತ್ತಮ ಭಾಷಾ ಶಿಕ್ಷಣ ಸಿಗುತ್ತಿಲ. ಹೆಚ್ಚಿನ ವಿಶ್ವವಿದ್ಯಾಲಯಗಳಲ್ಲಿ ಭಾಷಾ ವಿಭಾಗವೇ ಇಲ್ಲ. ಸಾಹಿತ್ಯ ಪತ್ರಕರ್ತರಿಗೆ ಅಗತ್ಯವಿಲ್ಲ ಎಂಬ ಭಾವನೆ ಬೆಳೆದಿದೆ. ಇಂದಿನ ಪತ್ರಿಕೋದ್ಯಮದ ಪಠ್ಯದಲ್ಲಿ ಯಾವ ಚಳವಳಿಗಳ ಉಲ್ಲೇಖ ಇಲ್ಲ. ಬದ್ಧತೆಯಿರುವ ರಾಜಕಾರಣಿಗಳ ಬಗ್ಗೆಯೂ ಹೇಳಿಕೊಡುತ್ತಿಲ್ಲ ಎಂದರು.
ಇದ್ದುದ್ದನ್ನು ಇದ್ದ ಹಾಗೆ ಬರೆಯಬೇಕು.
ಸುದ್ದಿ ಕೇಳಿ ಆಘಾತವಾಗಬೇಕೇ ವಿನಃ ಆಘಾತ ಆಗುವ ರೀತಿಯಲ್ಲಿ ಸುದ್ದಿ ಬಿತ್ತರಿಸುತ್ತಿರುವುದು ಸರಿಯಿಲ್ಲ. ನಾವು ನಮ್ಮ ಮಕ್ಕಳಿಗೆ ಸಾಮಾನ್ಯ ಜ್ಞಾನ ಕೂಡ ಕೊಡುತ್ತಿಲ್ಲ.
ಓದುಗರೆಲ್ಲರೂ ದಡ್ಡರು ಎಂದು ಭಾವಿಸಿ ಸುದ್ದಿ, ಶೀರ್ಷಿಕೆ ಕೊಡಲಾಗುತ್ತಿದೆ. ಆದರೆ, ಪತ್ರಕರ್ತರಿಗಿಂತ ಓದುಗರು ಜಾಣರು ಎಂಬುದನ್ನು ಪತ್ರಕರ್ತರು ಮರೆಯಬಾರದು ಎಂದು ತಿಳಿಸಿದರು.
ಒಬ್ಬ ಪತ್ರಕರ್ತ ಕಾನೂನಿಗಿಂತ ಮೇಲಲ್ಲ. ಉತ್ತಮ ಪತ್ರಕರ್ತನಿಗೆ ಎಲ್ಲವೂ ಗೊತ್ತಿದೆ ಎಂಬ ಭಾವನೆ ಬರಬಾರದು. ಕಳೆದ ಐವತ್ತು ವರ್ಷಗಳಲ್ಲಿ ಪತ್ರಿಕೋದ್ಯಮದ ಫಲವಾದ ನೆಲವನ್ನು ಬಂಜರು ಮಾಡಲಾಗಿದೆ. ಹೊಸ ತಲೆಮಾರಿನ ಪತ್ರಕರ್ತರ ಮೇಲೆ ಅದನ್ನು ಕಾಪಾಡುವ ಜವಾಬ್ದಾರಿ, ಸವಾಲುಗಳಿವೆ ಎಂದರು.
ಓದುಗರನ್ನು ಉಳಿಸಿಕೊಳ್ಳುವುದು ಈಗ ನಮ್ಮ ಎದುರಿಗೆ ಇರುವ ದೊಡ್ಡ ಸವಾಲು. ಈಗ ಓದುಗರ ಸಂಖ್ಯೆ ಕಡಿಮೆಯಾಗಿದ್ದು, ನೋಡುಗರ ಸಂಖ್ಯೆ ಹೆಚ್ಚಾಗಿದೆ.
ಕಳೆದ ಇಪ್ಪತ್ತೈದು ವರ್ಷಗಳಲ್ಲಿ ನಮ್ಮ ಓದುಗರನ್ನು ನಾವು ನೋಡುಗರನ್ನಾಗಿ ಮಾಡಿದ್ದೇವೆ. ಎಷ್ಟೇ ನೋಡಿದರೂ ಓದಿದಂತೆ ತಲೆಯಲ್ಲಿ ಇರುವುದಿಲ್ಲ ಎಂದರು.
ಪರಿಸರ ತಜ್ಞ ಎಚ್. ಆರ್. ಸ್ವಾಮಿ ಮಾತನಾಡಿ, ಪತ್ರಕರ್ತರು ಯಾವುದೇ ಸುದ್ದಿ ಬರೆಯುವಾಗ ಬಹಳ ಎಚ್ಚರಿಕೆ ವಹಿಸಬೇಕು. ಯಾವುದೇ ರೀತಿಯ ಪ್ರಭಾವಕ್ಕೆ ಒಳಗಾಗಿ ವರದಿಗಾರಿಕೆ ಮಾಡಬಾರದು. ಸಾಮಾಜಿಕ ಜವಾಬ್ದಾರಿ ಬಹಳ ಅತ್ಯಗತ್ಯ ಎಂದರು.
ಸಾಹಿತಿ ಕೇಶವರೆಡ್ಡಿ ಹಂದ್ರಾಳ ಮಾತನಾಡಿ, ಸುದ್ದಿಗಳನ್ನು ತಿರುಚಿ ಜನರ ಮುಂದಿಡುವುದು ಪತ್ರಿಕಾ ಧರ್ಮವಲ್ಲ. ಇದ್ದುದ್ದನ್ನು ಇದ್ದ ಹಾಗೆ ವರದಿಗಾರಿಕೆ ಮಾಡಬೇಕು. ಚಾನೆಲ್ ಗಳಿಗೆ ಹೋಲಿಸಿದರೆ ಈಗಲೂ ಪತ್ರಿಕೆಗಳು ವಿಶ್ವಾಸಾರ್ಹತೆ ಉಳಿಸಿಕೊಂಡಿವೆ ಎಂದರು.
ಕಾಂಗ್ರೆಸ್ ಮುಖಂಡ ಕುರಿ ಶಿವಮೂರ್ತಿ, ರಾಜ್ಯ ವಕೀಲರ ಪರಿಷತ್ತಿನ ಜೆ.ಎಂ ಅನಿಲ್ ಕುಮಾರ್, ಪತ್ರಕರ್ತ ಹುಳ್ಳಿ ಪ್ರಕಾಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.