ADVERTISEMENT

ಹೊಸಪೇಟೆ: ಕಲ್ಯಾಣ ಕರ್ನಾಟಕ ದಿನದಿಂದ ಸಚಿವರು, ಶಾಸಕರು ದೂರ

ಆಸ್ಪತ್ರೆ, ರಸ್ತೆ, ನೀರಿಗೆ ಅನುದಾನ– ಡಿ.ಸಿ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2024, 7:31 IST
Last Updated 17 ಸೆಪ್ಟೆಂಬರ್ 2024, 7:31 IST
   

ಹೊಸಪೇಟೆ (ವಿಜಯನಗರ): ನಿಜಾಮರ ಆಳ್ವಿಕೆಯಲ್ಲಿದ್ದ ಕಲ್ಯಾಣ ಕರ್ನಾಟಕ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ಅಗತ್ಯವಾದ ಅನುದಾನ ಒದಗಿಸುವ ಪ್ರಕ್ರಿಯೆ ಆರಂಭವಾಗಿದ್ದು, ಈ ಭಾಗದ ಆಸ್ಪತ್ರೆ, ರಸ್ತೆ, ಕುಡಿಯುವ ನೀರು ಸಹಿತ ಇತರ ಮೂಲಸೌಕರ್ಯಗಳು ಸುಧಾರಿಸುವ ವಿಶ್ವಾಸ ಇದೆ ಎಂದು ಜಿಲ್ಲಾಧಿಕಾರಿ ಎಂ.ಎಸ್‌.ದಿವಾಕರ್ ಹೇಳಿದರು.

ಮಂಗಳವಾರ ಇಲ್ಲಿನ ಪುನೀತ್ ರಾಜ್‌ಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ (ಕೆಕೆಆರ್‌ಡಿಬಿ) 250 ಹಾಸಿಗೆ ಸಾಮರ್ಥ್ಯದ ಜಿಲ್ಲಾ ಆಸ್ಪತ್ರೆಯನ್ನು 400 ಹಾಸಿಗೆಗೆ ಏರಿಸಲು ಈಗಾಗಲೇ ಒಪ್ಪಿಗೆ ದೊರೆತಿದೆ. ಇದೇ ರೀತಿ ಇತರ ಕಾಮಗಾರಿಗಳಿಗೂ ಅನುಮತಿ ದೊರೆತು ಅನುದಾನ ಬಿಡುಗಡೆ ಆಗುವ ವಿಶ್ವಾಸ ಇದೆ ಎಂದರು.

ದೇಶಕ್ಕೆ 1947ರಲ್ಲೇ ಸ್ವಾತಂತ್ರ್ಯ ಲಭಿಸಿದ್ದರೂ, ರಾಜ್ಯದ ಈಶಾನ್ಯ ಭಾಗ ಹೈದರಾಬಾದ್‌ ನಿಜಾಮರ ಆಳ್ವಿಕೆಯಲ್ಲೇ ಇತ್ತು. ರಜಾಕರ ಮೂಲಕ ಇಲ್ಲಿನ ಸಂಪೂರ್ಣ ನಿಯಂತ್ರಣವನ್ನು ನಿಜಾಮರು ಸಾಧಿಸಿದ್ದರು. ಆದರೆ ಈ ಭಾಗದ ಸಾವಿರಾರು ಹೋರಾಟಗಾರರ ನಿಸ್ವಾರ್ಥ ಸೇವೆಯ ಫಲವಾಗಿ ಒಂದು ವರ್ಷದೊಳಗೆಯೇ ದೇಶದಲ್ಲಿ ವಿಲೀನಗೊಳ್ಳುವಂತಾಯಿತು. ಸರ್ದಾರ್ ವಲ್ಲಭಬಾಯಿ ಪಟೇಲ್‌ ಜತೆಗೆ ನೂರಾರು ಮಂದಿಯನ್ನು ನಾವು ಸದಾ ಸ್ಮರಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

ADVERTISEMENT

‘ಸ್ವಾತಂತ್ರ್ಯ ಲಭಿಸಿದ ಬಳಿಕವೂ ಈ ಪ್ರದೇಶ ಅಭಿವೃದ್ಧಿಯಲ್ಲಿ ಹಿಂದೆಯೇ ಉಳಿದಿತ್ತು. ಶಿಕ್ಷಣ, ಉದ್ಯೋಗದಲ್ಲಿ ಈ ಭಾಗದ ಜನತೆಗೆ ಸೂಕ್ತ ಅವಕಾಶ ಸಿಕ್ಕಿರಲಿಲ್ಲ. ಮಲ್ಲಿಕಾರ್ಜುನ ಖರ್ಗೆ ಅವರ ಪ್ರಯತ್ನದ ಫಲವಾಗಿ ಸಂವಿಧಾನದ 371 ಜೆ ತಿದ್ದುಪಡಿ ಜಾರಿಗೆ ಬಂದ ಕಾರಣ ಈ ಭಾಗದ ಜನತೆಗೆ ಶಿಕ್ಷಣ, ಉದ್ಯೊಗದಲ್ಲಿ ಹೆಚ್ಚಿನ ಅವಕಾಶ ಸಿಗುವಂತಾಯಿತು’ ಎಂದು ಅವರು ತಿಳಿಸಿದರು.

ಆಕರ್ಷಕ ಪರೇಡ್‌:

ಪೊಲೀಸ್, ಎನ್‌ಸಿಸಿ, ಸ್ಕೌಟ್ಸ್‌, ಗೃಹರಕ್ಷಕ ದಳ, ಪೌರಕಾರ್ಮಿಕರು ಸಹಿತ ಒಂಭತ್ತು ತಂಡಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಶಾಲಾ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕಲ್ಯಾಣ ಕರ್ನಾಟಕ ವಿಮೋಚನೆಗೊಂಡ ನೃತ್ಯರೂಪಕಗಳು ಗಮನ ಸೆಳೆದವು.

ಸಚಿವ, ಶಾಸಕರ ಗೈರು: ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್‌, ಶಾಸಕ ಎಚ್‌.ಆರ್‌.ಗವಿಯಪ್ಪ ಸಹಿತ ಜಿಲ್ಲೆಯ ಎಲ್ಲ ಶಾಸಕರು ಕಾರ್ಯಕ್ರಮದಿಂದ ದೂರ ಉಳಿದಿದ್ದರು. ಕಲ್ಯಾಣ ಕರ್ನಾಟಕದ ಇತರ ಜಿಲ್ಲೆಗಳಲ್ಲಿ ಆಯಾ ಜಿಲ್ಲಾ ಉಸ್ತುವಾರಿ ಸಚಿವರಿಂದಲೇ ಧ್ವಜಾರೋಹಣ ನಡೆದಿತ್ತು. ಬಳ್ಳಾರಿಯಲ್ಲೂ ಸಚಿವ ರಹೀಂ ಖಾನ್‌ ಅವರು ಧ್ವಜಾರೋಹಣ ನೆರವೇರಿಸಿದರು. ಆದರೆ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಜಿಲ್ಲೆಯತ್ತ ಸುಳಿಯಲಿಲ್ಲ. 

ಸ್ಥಳೀಯ ಶಾಸಕ ಎಚ್‌.ಆರ್.ಗವಿಯಪ್ಪ, ಜಿಲ್ಲೆಯ ಇತರ ಶಾಸಕರು, ಸಂಸದರೂ ಕಾರ್ಯಕ್ರಮದಿಂದ ದೂರವೇ ಉಳಿದಿದ್ದರು. ಹೀಗಾಗಿ ಕಾರ್ಯಕ್ರಮ ಸಂಪೂರ್ಣ ಅಧಿಕಾರಿಮಯವಾಯಿತು.

ಎಸ್‌ಪಿ ಶ್ರೀಹರಿಬಾಬು ಬಿ.ಎಲ್., ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್ ಅಲಿ ಅಕ್ರಂ ಷಾ, ಹೆಚ್ಚುವರಿ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ, ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್‌.ಎನ್‌.ಎಫ್‌. ಮೊಹಮ್ಮದ್ ಇಮಾಮ್‌ ನಿಯಾಜಿ, ಜಿಲ್ಲಾ ವಕ್ಫ್‌ ಬೋರ್ಡ್ ಅಧ್ಯಕ್ಷ ದಾದಾಪೀರ್‌ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.