ಹೊಸಪೇಟೆ (ವಿಜಯನಗರ): ಕಮಲಾಪುರ 17ನೇ ವಾರ್ಡ್ ಹಳ್ಳಿಕೆರೆಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರ (ಪಿಎಚ್‌ಸಿ) ಸುಮಾರು 60 ಸಾವಿರ ಜನರ ಆರೋಗ್ಯ ಕಾಪಾಡಲು ಇರುವ ಸರ್ಕಾರಿ ಆಸ್ಪತ್ರೆ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಭೇಟಿ ನೀಡಿದ್ದ ಈ ಕೇಂದ್ರವು ಸಮುದಾಯ ಆರೋಗ್ಯ ಕೇಂದ್ರವಾಗುವುದು ಯಾವಾಗ ಎಂಬ ಪ್ರಶ್ನೆ ಜನರನ್ನು ಕಾಡುತ್ತಲೇ ಇದೆ.
ಕಳೆದ ಮಾರ್ಚ್ 3ರಂದು ಸಿದ್ದರಾಮಯ್ಯ ಅವರು ರಾಜ್ಯಮಟ್ಟದ ಪಲ್ಸ್ ಪೋಲಿಯೊ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ಇಲ್ಲೇ. ಸಮುದಾಯ ಆರೋಗ್ಯ ಕೇಂದ್ರಕ್ಕೆ ಅಗತ್ಯವಾದ ಕಟ್ಟಡ ನಿರ್ಮಾಣವಾಗಿ ವರ್ಷವೇ ಕಳೆದಿದೆ. ಹೀಗಿದ್ದರೂ ಪಿಎಚ್‌ಸಿಗೆ ಬಡ್ತಿ ಸಿಕ್ಕಿಲ್ಲ. ವಾರಕ್ಕೆ ಮೂರು ದಿನ ಹೊಸಪೇಟೆಯಿಂದ ಬಂದು ಹೋಗುವ ವೈದ್ಯರು, ಇಲ್ಲಿನ ಆಯುರ್ವೇದ ವೈದ್ಯರು, ದಾದಿಯರನ್ನೇ ನಂಬಿಕೊಂಡು ನೂರಾರು ಜೀವಗಳು ಇಲ್ಲಿಗೆ ಆರೈಕೆಗೆ ಬರುತ್ತಿವೆ. ಹೆಚ್ಚಿನ ಸಂದರ್ಭಗಳಲ್ಲಿ ಖಾಸಗಿ ಆಸ್ಪತ್ರೆಗಳು ಇಲ್ಲವೇ ಹೊಸಪೇಟೆಗೆ ಹೋಗುವುದು ಅನಿವಾರ್ಯವಾಗುತ್ತಿದೆ.
ಕಮಲಾಪುರ ಪುರಸಭೆ ವ್ಯಾಪ್ತಿಯಲ್ಲೇ 30 ಸಾವಿರಕ್ಕೂ ಅಧಿಕ ಜನಸಂಖ್ಯೆ ಇದೆ. ಅಕ್ಕಪಕ್ಕದ ಹಂಪಿ, ಕಡ್ಡಿರಾಂಪುರ, ಸೀತಾರಾಮ ತಾಂಡಾ, ನಲ್ಲಾಪುರ, ಚಿನ್ನಾಪುರ, ವೆಂಕಟಾಪುರ, ಬುಕ್ಕಸಾಗರ, ಮಲಪನಗುಡಿ, ಪಾಪಿನಾಯಕನ ಹಳ್ಳಿಗಳಿಗೆ ಇರುವ ಏಕೈಕ ಸರ್ಕಾರಿ ಆಸ್ಪತ್ರೆ ಎಂದರೆ ಇದೇ. ಪಕ್ಕದಲ್ಲೇ ಹಂಪಿ ಕನ್ನಡ ವಿಶ್ವವಿದ್ಯಾಲಯ ಇದೆ. ಸಾವಿರಾರು ವಿದ್ಯಾರ್ಥಿಗಳು ಹಾಸ್ಟೆಲ್‌ಗಳಲ್ಲಿದ್ದು ವ್ಯಾಸಂಗ ಮಾಡುತ್ತಿದ್ದಾರೆ. ಅವರಿಗೇನಾದರೂ ಆರೋಗ್ಯದಲ್ಲಿ ಏರುಪೇರಾದರೆ ಆಸರೆ ಇದೇ ಕೇಂದ್ರ. ಇಷ್ಟಾದರೂ ಮೇಲ್ದರ್ಜೆಗೇರುವ ಮುಹೂರ್ತ ಈ ಪಿಎಚ್‌ಸಿಗೆ ಇನ್ನೂ ಕೂಡಿ ಬಂದಿಲ್ಲ.
ಈ ಭಾಗದಲ್ಲಿನ ಜನಸಂಖ್ಯೆ, ಗರ್ಭಿಣಿಯರ ಸಂಖ್ಯೆ ಗಮನಿಸಿದಾಗ ಇಲ್ಲಿ ಸಮುದಾಯ ಆರೋಗ್ಯ ಕೇಂದ್ರ ಸ್ಥಾಪನೆಯಾಗಲೇಬೇಕು. ಸರ್ಕಾರದ ನಿಯಮದಂತೆ ವಿವಿಧ ವಿಭಾಗಗಳ ಐವರು ವೈದ್ಯರು, ಎಂಟು ಮಂದಿ ದಾದಿಯರು, ಎಂಟು ಮಂದಿ ಡಿ.ಗ್ರೂಪ್ ನೌಕರರು, ನಾಲ್ವರು ಲ್ಯಾಬ್ ಟೆಕ್ನಿಶಿಯನ್‌ಗಳು, ಒಬ್ಬ ಅಧೀಕ್ಷಕ ಹಾಗೂ ಇತರ ಸಿಬ್ಬಂದಿ ಬೇಕು. ಅದನ್ನು ಬೇಗ ಒದಗಿಸಿಕೊಟ್ಟು ನಮ್ಮ ಆರೋಗ್ಯದ ಕಾಳಜಿ ನೋಡಿಕೊಳ್ಳಿ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.
ಅನಂತಶಯನಗುಡಿಯಲ್ಲಿ ರೈಲ್ವೆ ಮೇಲ್ಸೇತುವೆ ಕೆಲಸ ನಡೆಯುತ್ತಿದೆ. ಅಲ್ಲಿ ಸರಾಗವಾಗಿ ವಾಹನಗಳು ಸಾಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಹೊಸಪೇಟೆಯತ್ತ ರೋಗಿಗಳು ತೆರಳುವಾಗ ಆಕಸ್ಮಿಕ ಸಾವು ಸಂಭವಿಸುವ ಸಾಧ್ಯತೆ ಇದೆ. ಹಂಪಿಗೂ ದೊಡ್ಡ ಸಂಖ್ಯೆಯಲ್ಲಿ ಪ್ರವಾಸಿಗಳು ಬರುತ್ತಾರೆ. ಇದೆಲ್ಲವನ್ನೂ ನೋಡಿ ಸರ್ಕಾರ ಬೇಗ ಈ ಪಿಎಚ್‌ಸಿಯನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಬೇಕು ಎಂದು ಜನರು ಒತ್ತಾಯಿಸಿದ್ದಾರೆ.
‘ಕಮಲಾಪುರದಲ್ಲಿ ಸಮುದಾಯ ಆರೋಗ್ಯ ಕೇಂದ್ರ ಆಗಲೇಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಈಗಾಗಲೇ ಸರ್ಕಾರದಲ್ಲಿ ಈ ಪ್ರಸ್ತಾಪ ಇದೆ. ಕಟ್ಟಡ ನಿರ್ಮಾಣ ಆಗಿದೆ. ಶೀಘ್ರ ಅನುಮತಿ ದೊರೆಯುವ ವಿಶ್ವಾಸ ಇದೆ’ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಎಲ್.ಆರ್.ಶಂಕರ್ ನಾಯ್ಕ್ ‘ಪ್ರಜಾವಾಣಿ’ಗೆ ತಿಳಿಸಿದರು.
ತಜ್ಞ ವೈದ್ಯರು ಲಭ್ಯವಾದೊಡನೆ ಕಮಲಾಪುರ ಪಿಎಚ್‌ಸಿಗೆ ಒದಗಿಸಲಾಗುವುದು. ಅದನ್ನು ಮೇಲ್ದರ್ಜೆಗೇರಿಸುವ ಪ್ರಯತ್ನ ಸಹ ನಡೆಯುತ್ತಲೇ ಇದೆಡಾ.ಎಲ್.ಆರ್.ಶಂಕರ್ ನಾಯ್ಕ್ ಡಿಎಚ್‌ಒ
ಈ ಪಿಎಚ್‌ಸಿಗೆ ಪ್ರತಿದಿನ 80ಕ್ಕೂ ಅಧಿಕ ಮಹಿಳೆಯರು ಬರುತ್ತಾರೆ. ಕೇವಲ ಒಬ್ಬ ವೈದ್ಯರಿಂದ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ಸರ್ಕಾರ ಗಂಭೀರತೆ ಅರ್ಥ ಮಾಡಿಕೊಳ್ಳಬೇಕುಸುನಿತಾ ಶ್ರೀನಿವಾಸ್ ಕಮಲಾಪುರ ನಿವಾಸಿ
ಸರ್ಕಾರ ಜನರ ಆರೋಗ್ಯದ ಜೊತೆ ಚೆಲ್ಲಾಟ ಆಡುತ್ತಿದೆ. ಇದೇ ರೀತಿ ಮುಂದುವರಿದರೆ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗಲಿದೆಕೊಟಲ್ ವೀರೇಶ್ ಕುಮಾರ್ ಸಂಚಾಲಕರು ದಲಿತ ಸಂಘರ್ಷ ಸಮಿತಿ
ಪ್ರತಿಯೊಂದು ಸಮಸ್ಯೆಗೂ ನಮ್ಮನ್ನು ಹೊಸಪೇಟೆಗೆ ಕಳಿಸುತ್ತಿದ್ದಾರೆ ರೈಲ್ವೆ ಗೇಟ್ ನಮ್ಮ ಜೀವವನ್ನು ನುಂಗುತ್ತಿದೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕುಆನಂದ್ ರಾಜ್ ಹೆಗಡೆ ಸ್ಥಳೀಯ ಮುಖಂಡರು ಕಮಲಾಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.