ADVERTISEMENT

ಕನಕ ಜಯಂತಿ: ತಿಮ್ಮಪ್ಪನಿಗೆ ಅಧ್ಯಾತ್ಮದ ಬೆಳಕು ನೀಡಿದ್ದೇ ಹಂಪಿ

ಕನಕದಾಸರನ್ನು ಕತ್ತಲಲ್ಲೇ ಇರಿಸಿದ ಹಾಲಿ ವಿಜಯನಗರ

ಎಂ.ಜಿ.ಬಾಲಕೃಷ್ಣ
Published 18 ನವೆಂಬರ್ 2024, 4:34 IST
Last Updated 18 ನವೆಂಬರ್ 2024, 4:34 IST
ಕನಕದಾಸರು
ಕನಕದಾಸರು   

ಹೊಸಪೇಟೆ (ವಿಜಯನಗರ): ದಾಸವರೇಣ್ಯ ಕನಕದಾಸರನ್ನು ಜಗತ್ತು ಹಾಡಿ ಹೊಗಳುತ್ತಿದೆ, ಕುಲ ಕುಲವೆಂದು ಹೊಡೆದಾಡದಿರಿ ಎಂಬ ಸಾರ್ವತ್ರಿಕ ಸಂದೇಶ ಸಾರಿದವರನ್ನು ನಾಡು ಮತ್ತೆ ನೆನೆಸುತ್ತಿದೆ.

ಯುದ್ಧ, ಭೋಗದ ಜೀವನದಿಂದ ಬೇಸತ್ತು ಶಾಂತಿ, ನೆಮ್ಮದಿ, ಅಧ್ಯಾತ್ಮದ ಬೆಳಕು ಅರಸಿ ಹಂಪಿಗೆ ಬಂದ ಅವರನ್ನು ಅಂದಿನ ವಿಜಯನಗರ ಮಹಾನ್‌ ದಾರ್ಶನಿಕನನ್ನಾಗಿ ಮಾಡಿಬಿಟ್ಟಿತು, ಆದರೆ ಇಂದಿನ ವಿಜಯನಗರ ಅವರನ್ನು ಕತ್ತಲಲ್ಲಿ ಇಟ್ಟುಬಿಟ್ಟಿದೆ.

ಕಾಗಿನೆಲೆಯಲ್ಲಿ ಪಾಳೆಪಟ್ಟನ್ನು ಹೊಂದಿದ್ದ ತಿಮ್ಮಪ್ಪ ನಾಯಕರಿಗೆ ಯುದ್ಧದ ಸಾವು, ನೋವು, ಮಹಿಳೆಯರ ವೈಧವ್ಯ ಕಂಡು ಜೀವನ ಬೇಸರಗೊಳ್ಳುತ್ತದೆ. ಮನಸ್ಸು ಅಧ್ಯಾತ್ಮದತ್ತ ತಿರುಗುತ್ತದೆ. ಅಂದು ಉಚ್ಛ್ರಾಯ ಸ್ಥಿತಿಯಲ್ಲಿದ್ದ ವಿಜಯನಗರ ಸಾಮ್ರಾಜ್ಯ ಅವರನ್ನು ಸೆಳೆಯುತ್ತದೆ.

ADVERTISEMENT

ಹಂಪಿಯ ಪರಿಸರದಲ್ಲಿದ್ದ ಪುರಂದರ ದಾಸರು ಪ್ರೇರಣೆಯಾಗುತ್ತಾರೆ. ರಾಜಗುರುಗಳಾಗಿದ್ದ ವ್ಯಾಸರಾಜರ ಪ್ರೀತಿಗೆ ಪಾತ್ರರಾಗಿ ಅವರಿಂದ ಗುರುದೀಕ್ಷೆ ಪಡೆದು ಭಗವಂತನ ಸಾಕ್ಷಾತ್ಕಾರ ಮಾಡಿಕೊಳ್ಳುತ್ತಾರೆ ಎಂಬುದಕ್ಕೆ ಹಂಪಿ ಇಂದು ಸಾಕ್ಷಿಯಾಗಿ ನಿಂತುಬಿಟ್ಟಿದೆ.

ಕನಕದಾಸರು ಹಲವು ಕೀರ್ತನೆಗಳನ್ನು, ರಾಮಧಾನ್ಯ ಚರಿತ್ರೆ, ಹರಿಭಕ್ತಸಾರದಂತಹ ಹಲವು ಕೃತಿಗಳನ್ನು ರಚಿಸಿದ್ದು ಹಂಪಿಯಲ್ಲೇ, ಅವರು ನೆಲೆಸಿದ್ದುದು ವಿಜಯ ವಿಠ್ಠಲ ದೇವಸ್ಥಾನದ ಎಡಭಾಗದ ಮೇಲ್ಮಹಡಿ ಮಂಟಪದಲ್ಲಿ. ಅದರ ಎದುರುಭಾಗದ ಮಂಟಪದಲ್ಲಿ ಪುರಂದರ ದಾಸರು ನೆಲೆಸಿದ್ದರು. ಹೀಗಾಗಿ ಇಬ್ಬರೂ ದಾಸವರೇಣ್ಯರು ಹಂಪಿಯಲ್ಲಿ ಕೀರ್ತನೆಗಳನ್ನು ರಚಿಸಿದ್ದೇ ಅಧಿಕ. ಇಂತಹ ದಾರ್ಶನಿಕನನ್ನು ಹಂಪಿಯಾಗಲಿ, ಹೊಸಪೇಟೆಯಾಗಲಿ ಇಂದು ನೆನೆಸಿಕೊಳ್ಳುವ ಬಗೆ ಎಂತಹದು ಎಂಬ ಪ್ರಶ್ನೆ ಎಲ್ಲರನ್ನೂ ಕಾಡತೊಡಗಿದೆ.

‘ಕನಕದಾಸರು ಹಂಪಿಗೆ ಬಂದಾಗ ವಿಜಯನಗರ ಸಾಮ್ರಾಜ್ಯದ ವೈಭವ ಮಸುಕಾಗುತ್ತ ಬಂದಿತ್ತು. ಹಲವು ಮೂರ್ತಿಗಳು ಭಗ್ನಗೊಂಡಿದ್ದವು. ಇದನ್ನು ಕಂಡು ಅವರು ಮಮ್ಮಲ ಮರುಗಿದ್ದರು. ಯಾಕೆನ್ನ ಈ ರಾಜ್ಯಕ್ಕೆಳೆತಂದೆ ಹರಿಯೇ.. ಎಂಬುದು ಅವರ ಮೊದಲ ಕೀರ್ತನೆ ಎಂಬ ಭಾವನೆ ಇದ್ದು, ಅದು ಮೂಡಿಬರಲು ಅವರು ಹಂಪಿಯನ್ನು ಕಂಡು ಬೇಸರಗೊಂಡಿದ್ದೇ ಕಾರಣವಾಗಿರುವಂತಿದೆ. ಆದರೆ ಮುಂದೆ ಅವರು ಭಗವಂತನ ಸಂಕೀರ್ತನೆ, ಲೋಕಾದ್ಧಾರ ಸಂಕಲ್ಪ ಮಾಡಿ ಭಗವಂತನ ಸಾಕ್ಷಾತ್ಕಾರ ಮಾಡಿಕೊಂಡರು.

ಹಂಪಿಯಲ್ಲಿ ಕೆಲವೇ ಕೆಲವು ಜಾತಿಗಳ ಮಂದಿಯ ಮಡಿವಂತಿಕೆಯನ್ನು ಕಂಡು ರೋಸಿ ಹೋಗಿ ಕೀರ್ತನೆ ರಚಿಸಿದರು. ಅಂತಹ ಮಹಾನ್ ದಾರ್ಶನಿಕನಿಗೆ ಆಧುನಿಕ ವಿಜಯನಗರ ಒಂದಿಷ್ಟು ಗೌರವ ನೀಡದೆ ಇರುವುದು ಬೇಸರ ತರುವಂತಹ ಸಂಗತಿ’ ಎಂದು ಹೇಳುತ್ತಾರೆ ಹಂಪಿ ಉಳಿಸಿ ಹೋರಾಟ ಸಮಿತಿಯ ಸದಸ್ಯ ಅನಿಲ್‌ ಜೋಷಿ.

‘ರಾಜ್ಯವು 250ಕ್ಕೂ ಹೆಚ್ಚು ದಾಸವರೇಣ್ಯರನ್ನು ಕಂಡಿದೆ. ತಳಸಮುದಾಯದಲ್ಲಿ ಜನಿಸಿದರೂ ತಮ್ಮ ಕೀರ್ತನೆಗಳ ಮೂಲಕವೇ ಖ್ಯಾತಿ ಪಡೆದ ದಾಸವರೇಣ್ಯರೆಂದರೆ ಕನಕದಾಸರು ಮಾತ್ರ. ಪುರಂದರ ಮತ್ತು ಕನಕದಾಸರು ಕರ್ನಾಟಕ ಸಂಗೀತ ಜಗತ್ತಿನ ಎರಡು ಕಣ್ಣುಗಳೇ ಆಗಿದ್ದಾರೆ. ಆದರೆ ಕನಕದಾಸರಿಗೆ ಹಂಪಿ ಪರಿಸರದಲ್ಲಿ ಯಾವ ಮಾನ್ಯತೆ ಸಿಗಬೇಕಿತ್ತೋ ಅದು ಸಿಕ್ಕಿಲ್ಲ. ಇನ್ನಾದರೂ ಈ ಕೊರತೆ ನಿವಾರಿಸಲೇಬೇಕಾಗಿದೆ’ ಎಂದು ಅವರು ಅಭಿಪ್ರಾಯಪಟ್ಟರು.

ಥೀಂ ಪಾರ್ಕ್ ಆಗಲೇಬೇಕಿತ್ತು
ರಾಜ್ಯದ ನಾನಾ ಭಾಗಗಳಲ್ಲಿ ಕನಕದಾಸರ ಅಧ್ಯಯನಕ್ಕೆ ಪೀಠಗಳು ಕೇಂದ್ರಗಳನ್ನು ತೆರೆಯಲಾಗಿದೆ. ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲೂ ಹಾಲುಮತ ಅಧ್ಯಯನ ಪೀಠ ಇದೆ. ಆದರೆ ವಿಶ್ವವಿದ್ಯಾಲಯ ಕ್ಯಾಂಪಸ್ ಬಳಿಯಲ್ಲೇ ಪಿ.ಕೆ.ಹಳ್ಳಿ ರಸ್ತೆಯ ಬದಿಯಲ್ಲೇ 80 ಎಕರೆ ನಿವೇಶನವನ್ನು ಕನಕದಾಸರ ಅಧ್ಯಯನಕ್ಕೆಂದೇ ಸರ್ಕಾರ ಮೀಸಲಿಟ್ಟಿದೆ. ಅಧ್ಯಾತ್ಮಕ ಬೆಳಕನ್ನು ನೀಡಿದ ಹಂಪಿ ಮತ್ತು ವಿಜಯನಗರ ಸಾಮ್ರಾಜ್ಯದ ಮಹತ್ವ ಸಾರುವಂತಹ ಅದ್ಭುತ ಥೀಂ ಪಾರ್ಕ್‌ ಈಗಾಗಲೇ ನಿರ್ಮಾಣವಾಗಬೇಕಿತ್ತು. ಸಮುದಾಯದ ದೊಡ್ಡ ನಾಯಕರಾದ ಸಿದ್ದರಾಮಯ್ಯ ಅವರೇ ರಾಜ್ಯದ ಮುಖ್ಯಮಂತ್ರಿಯಾಗಿದ್ದರೂ ಕನಕದಾಸರನ್ನು ಸದಾ ನೆನಪಲ್ಲಿ ಇಡುವಂತಹ ಪ್ರಯತ್ನ ಇಲ್ಲಿ ಇನ್ನೂ ಆಗದಿದುರವುದಕ್ಕೆ ಹಲವು ಗಣ್ಯರು ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.