ಹೊಸಪೇಟೆ (ವಿಜಯನಗರ): 'ಜೆಡಿಎಸ್‌ನಿಂದ ನ. 1ರಂದು ಮನೆ ಮನೆಗೂ ಕನ್ನಡ ಬಾವುಟ ಕಾರ್ಯಕ್ರಮ ಆಚರಿಸಲು ತೀರ್ಮಾನಿಸಲಾಗಿದೆ' ಎಂದು ಪಕ್ಷದ ಜಿಲ್ಲಾಧ್ಯಕ್ಷ ಕೆ. ಕೊಟ್ರೇಶ ತಿಳಿಸಿದರು.
ಆ ದಿನ ಸಾಂಕೇತಿಕವಾಗಿ ಪಕ್ಷದಿಂದ ಒಂದು ಸಾವಿರ ಕನ್ನಡ ಬಾವುಟಗಳನ್ನು ವಿತರಿಸಲಾಗುವುದು. ವಿವಿಧ ಕನ್ನಡಪರ ಸಂಘಟನೆಗಳ ಸಹಕಾರದೊಂದಿಗೆ ಪ್ರತಿಯೊಬ್ಬರ ಮನೆ ಮೇಲೂ ಕನ್ನಡ ಧ್ವಜ ಹಾರಿಸುವಂತೆ ಕೋರಲಾಗುವುದು ಎಂದು ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.
ನ. 1ರಂದೇ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಮೊದಲ ಹಂತದ ಪಂಚರತ್ನ ಯಾತ್ರೆ ಆರಂಭವಾಗಲಿದೆ. ಎರಡು ಅಥವಾ ಮೂರನೇ ಹಂತದ ಯಾತ್ರೆ ಜಿಲ್ಲೆಗೆ ಆಗಮಿಸಲಿದೆ. ಯಾತ್ರೆಗೂ ಮುನ್ನ ಮನೆ ಮನೆಗೂ ಕುಮಾರಣ್ಣ ಹೆಸರಿನಲ್ಲಿ ಕಾರ್ಯಕ್ರಮ ನಡೆಸಿ ಕುಮಾರಸ್ವಾಮಿಯವರು ಮಾಡಿದ ಕೆಲಸಗಳ ಬಗ್ಗೆ ಜನರಿಗೆ ತಿಳಿಸಲಾಗುವುದು ಎಂದು ಹೇಳಿದರು.
ರಾಜ್ಯದ ಜನರಿಗೆ ವಸತಿ, ಶಿಕ್ಷಣ, ಆರೋಗ್ಯ, ಉದ್ಯೋಗ ಹಾಗೂ ಕೃಷಿ ಕ್ಷೇತ್ರದ ಬಲವರ್ಧನೆ ಪಂಚರತ್ನ ಯಾತ್ರೆಯ ಉದ್ದೇಶ. ಜೆಡಿಎಸ್ ಅಧಿಕಾರಕ್ಕೆ ಬಂದರೆ ಈ ಐದು ಕ್ಷೇತ್ರಗಳಲ್ಲಿ ಸುಧಾರಣೆ ತರಲು ಶ್ರಮಿಸಲಿದೆ ಎಂದು ತಿಳಿಸಿದರು.
ವಿಜಯನಗರ ಕ್ಷೇತ್ರದಲ್ಲಿ ಹಲವು ಜನ ಆಕಾಂಕ್ಷಿಗಳಾಗಿದ್ದಾರೆ. ಆದರೆ, ಇದುವರೆಗೆ ಯಾರಿಗೂ ಟಿಕೆಟ್ ಅಂತಿಮಗೊಂಡಿಲ್ಲ. ಆದರೆ, ಸ್ಥಳೀಯರಿಗೆ ಆದ್ಯತೆ ಸಿಗಲಿದೆ. ಅಂತಿಮ ತೀರ್ಮಾನ ವರಿಷ್ಠರು ಕೈಗೊಳ್ಳುವರು ಎಂದರು.
ಎಸ್.ಆರ್. ಬೊಮ್ಮಾಯಿ, ಜೆ.ಎಚ್. ಪಟೇಲ್ ಅವರು ಜೆಡಿಎಸ್ ನಿಂದ ಮುಖ್ಯಮಂತ್ರಿ ಆಗಿದ್ದಾರೆ. ಆದರೆ, ಜೆಡಿಎಸ್ ಪಕ್ಷವು ವೀರಶೈವ ಲಿಂಗಾಯತ ವಿರೋಧಿ ಎಂದು ಬಿಂಬಿಸಲಾಗಿದೆ. ಆ ಸಮಾಜದವರನ್ನು ವಿಶ್ವಾಸಕ್ಕೆ ಪಡೆಯಲು ವೀರಶೈವ ಲಿಂಗಾಯತ ಸಮಾಜದ ಸಮಾವೇಶ ಸಂಘಟಿಸಲು ನಿರ್ಧರಿಸಲಾಗಿದೆ. ಇನ್ನಷ್ಟೇ ಅದರ ದಿನಾಂಕ ನಿಗದಿಪಡಿಸಬೇಕಿದೆ ಎಂದು ಹೇಳಿದರು.
ವಿಜಯನಗರ ಜಿಲ್ಲಾ ಯುವ ಜೆಡಿಎಸ್ ಘಟಕದ ಅಧ್ಯಕ್ಷ ಎಚ್.ಎಂ. ಪ್ರಶಾಂತ್, ವಿಜಯನಗರ ಕ್ಷೇತ್ರದ ಅಧ್ಯಕ್ಷ ಬಿ.ಎಂ. ಸೋಮಶೇಖರ್, ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ಕಪ್ಲಿ, ರಾಜ್ಯ ಪರಿಷತ್ ಸದಸ್ಯ ಅತಾಯ್ ರಸೂಲ್ ಇದ್ದರು.
'ಆಮಿಷವೊಡ್ಡಿ ಶಾಸಕರ ಖರೀದಿ ಸರಿಯಲ್ಲ'
'ತೆಲಂಗಾಣದಲ್ಲಿ ಅಲ್ಲಿನ ಆಡಳಿತರೂಢ ಪಕ್ಷದ ಶಾಸಕರಿಗೆ ಬಿಜೆಪಿ ಹಣದ ಆಮಿಷವೊಡ್ಡಿ ಖರೀದಿಗೆ ಯತ್ನಿಸಿದ ಕ್ರಮ ಸರಿಯಲ್ಲ' ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ. ಕೊಟ್ರೇಶ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.