ADVERTISEMENT

ಷೋಕಾಸ್ ನೋಟಿಸ್‌ಗೆ ಬೆಚ್ಚಿದ ಕನ್ನಡ ವಿವಿ

ಹಣಕಾಸು ನಿರ್ವಹಣೆಯಲ್ಲಿ ವೈಫಲ್ಯ– ತಾತ್ಕಾಲಿಕ ನೌಕರರ ₹10 ಲಕ್ಷ ಪಿಎಫ್‌ ವಂತಿಕೆ ಪಾವತಿ ಬಾಕಿ

ಎಂ.ಜಿ.ಬಾಲಕೃಷ್ಣ
Published 11 ಅಕ್ಟೋಬರ್ 2024, 7:20 IST
Last Updated 11 ಅಕ್ಟೋಬರ್ 2024, 7:20 IST
ಹಂಪಿ ಕನ್ನಡ ವಿಶ್ವವಿದ್ಯಾಲಯ
ಹಂಪಿ ಕನ್ನಡ ವಿಶ್ವವಿದ್ಯಾಲಯ   

ಎಂ.ಜಿ.ಬಾಲಕೃಷ್ಣ

ಹೊಸಪೇಟೆ (ವಿಜಯನಗರ): ಹಂಪಿ ಕನ್ನಡ ವಿಶ್ವವಿದ್ಯಾಲಯ ಈಚಿನ ದಿನಗಳಲ್ಲಿ ಹಣಕಾಸಿನ ಮುಗ್ಗಟ್ಟಿನಿಂದಲೇ ಮೇಲಿಂದ ಮೇಲೆ ಸುದ್ದಿಯಾಗುತ್ತಿದ್ದು, ತನ್ನ ಹಣಕಾಸು ನಿರ್ವಹಣೆಯಲ್ಲಿನ ವೈಫಲ್ಯದಿಂದ ನೌಕರರ ಭವಿಷ್ಯನಿಧಿ ಸಂಸ್ಥೆಯಿಂದಲೇ (ಇಪಿಎಫ್‌) ಇದೀಗ ಷೋಕಾಸ್ ನೋಟಿಸ್‌ ಪಡೆದುಬಿಟ್ಟಿದೆ.

ವಿಶ್ವವಿದ್ಯಾಲಯದ 82 ಮಂದಿ ತಾತ್ಕಾಲಿಕ ನೌಕರರ ವೇತನದ ಜತೆಗೆ ಪಾವತಿಸಬೇಕಿದ್ದ ಭವಿಷ್ಯನಿಧಿ ವಂತಿಗೆಯನ್ನು ಸುಮಾರು 11 ತಿಂಗಳ ಕಾಲ ಪಾವತಿಸದೆ ಇದ್ದ ಕಾರಣ ಈ ಷೋಕಾಸ್‌ ನೋಟಿಸ್ ಬಂದಿದ್ದು, ಹಣಕಾಸು ಮುಗ್ಗಟ್ಟಿನಲ್ಲೇ ₹10 ಲಕ್ಷವನ್ನು ತಕ್ಷಣ ಹೊಂದಿಸಿ ಪಾವತಿಸಬೇಕಾದ ಪರಿಸ್ಥಿತಿ ಬಂದೊದಗಿದೆ.

ADVERTISEMENT

‘2021–23ರ ನಡುವೆ ಸರ್ಕಾರದಿಂದ ಅನುದಾನ ಬಾರದ ಕಾರಣ ತಾತ್ಕಾಲಿಕ ನೌಕರರಿಗೆ ಸಂಬಳ ಪಾವತಿಸುವುದು ಸಹ ಸಾಧ್ಯವಾಗಿರಲಿಲ್ಲ. ಆಗ ಪಿಎಫ್‌ ಸಹ ಪಾವತಿಯಾಗಿರಲಿಲ್ಲ. ಪಿಎಫ್‌ನ ಡ್ಯಾಮೇಜ್‌ ಮತ್ತು ಬಡ್ಡಿ ಹಣವನ್ನು ತಕ್ಷಣ ಪಾವತಿಸಬೇಕು, ಇಲ್ಲವಾದರೆ ವ್ಯವಹಾರ ನಡೆಸುವ ಬ್ಯಾಂಕ್ ಖಾತೆಯನ್ನೇ ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಸಂಸ್ಥೆ ಎಚ್ಚರಿಸಿದೆ, ಹೀಗಾಗಿ ತಕ್ಷಣ ಇಡೀ ಮೊತ್ತ ಪಾವತಿಸಬೇಕಾಗಿದೆ’ ಎಂದು ಕುಲಪತಿ ಪ್ರೊ.ಡಿ.ವಿ.ಪರಮಶಿವಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈಗಾಗಲೇ ಇದರ ಬಗ್ಗೆ ಹಲವು ಬಾರಿ ಪತ್ರ ವ್ಯವಹಾರ ನಡೆಸಲಾಗಿದೆ. ಜೂನ್‌ 1ರಂದು ಕುಲಸಚಿವರು ಇಪಿಎಫ್‌ ಸಹಾಯಕ ಆಯುಕ್ತರಿಗೆ ಪತ್ರ ಬರೆದು ಅನುದಾನ ಕೊರತೆ ಎದುರಿಸುತ್ತಿರುವ ವಿಶ್ವವಿದ್ಯಾಲಯದ ಸದ್ಯದ ಪರಿಸ್ಥಿತಿ ಬಗ್ಗೆ ಮನವರಿಕೆ ಮಾಡಿದ್ದರು. ಇರುವ ಅನುದಾನ ಹೊಂದಿಸಿಕೊಂಡು ₹50 ಸಾವಿರ ಪಾವತಿಸುವುದಾಗಿ ಹೇಳಿದ್ದರು. ಉಳಿದ ಮೊತ್ತವನ್ನು ಹಂತ ಹಂತವಾಗಿ ಪಾವತಿಸುವುದಾಗಿ ತಿಳಿಸಿದ್ದರು. ಆದರೆ ಸಂಸ್ಥೆ ಅದಕ್ಕೆ ಸಮ್ಮತಿ ಸೂಚಿಸದೆ ವಿಶ್ವವಿದ್ಯಾಲಯ ಮತ್ತು ಬ್ಯಾಂಕ್ ಆಫ್‌ ಇಂಡಿಯಾ ಕಮಲಾಪುರ ಶಾಖೆಗೆ ಆಗಸ್ಟ್‌ 30ರಂದು ಷೋಕಾಸ್ ನೋಟಿಸ್ ನೀಡಿದೆ. ಈಗಲೂ ಇಪಿಎಫ್ ಸಂಸ್ಥೆಗೆ ಮನವರಿಕೆ ಮಾಡುವ ಪ್ರಯತ್ನ ಸಾಗಿದೆ, ಅದು ವಿಫಲವಾದರೆ ದುಡ್ಡು ಒಮ್ಮೆಲೇ ಪಾವತಿಸಬೇಕಾಗುತ್ತದೆ’ ಎಂದರು.

ಇನ್ನು ಈ ಸಮಸ್ಯೆ ಇಲ್ಲ: ಈಗಾಗಲೇ 49 ಮಂದಿ ಹೊರಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆದು ಹಾಕಲು ನಿರ್ಧರಿಸಿರುವ ವಿಶ್ವವಿದ್ಯಾಲಯ, ತಾತ್ಕಾಲಿಕ ನೌಕರರ ಭವಿಷ್ಯನಿಧಿ ಹಣವನ್ನೂ ಕ್ರೋಢೀಕೃತ ವೇತನ ರೂಪದಲ್ಲಿ ನೀಡತೊಡಗಿದೆ.  ಕಳೆದ ಐದು ತಿಂಗಳಿಂದ ಈ ವ್ಯವಸ್ಥೆ ಮಾಡಿಕೊಂಡಿರುವುದರಿಂದ ಕಡ್ಡಾಯ ಪಿಎಫ್‌ ಪಾವತಿ ತಪ್ಪಿದೆ. ಆದರೆ ಈ ಮೊದಲು ಆಗಿರುವ ಎಡವಟ್ಟಿನಿಂದ ವಿಶ್ವವಿದ್ಯಾಲಯ ಈಗ ಚಡಪಡಿಸುವಂತಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರೊ.ಡಿ.ವಿ.ಪರಮಶಿವಮೂರ್ತಿ
ತೆರಿಗೆ ಪಾವತಿಸುವಲ್ಲಿ ಸಿಬ್ಬಂದಿ ತೋರಿದ ನಿರ್ಲಕ್ಷ್ಯದಿಂದ ವಿಶ್ವವಿದ್ಯಾಲಯ ಇದೀಗ ತಲೆಕೊಡಬೇಕಾಗಿ ಬಂದಿದೆ. ಮುಂಗಡ ಪಾವತಿಯನ್ನು ಕಡ್ಡಾಯಗೊಳಿಸುವುದು ಇನ್ನು ಅನಿವಾರ್ಯ
ಪ್ರೊ.ಡಿ.ವಿ.ಪರಮಶಿವಮೂರ್ತಿ ಕುಲಪತಿ

ಐಟಿ ಇಲಾಖೆಯ ಏಟಿಗೂ ತತ್ತರ

ವಿಶ್ವವಿದ್ಯಾಲಯದ ಕಾಯಂ ಸಿಬ್ಬಂದಿಯ ವೇತನ ಸಹಜವಾಗಿಯೇ ಉತ್ತಮವಾಗಿರುತ್ತದೆ ಅವರು ಆದಾಯ ತೆರಿಗೆಯನ್ನೂ ಪಾವತಿಸುವವರೇ ಆಗಿರುತ್ತಾರೆ. ಅವರೆಲ್ಲ ವರ್ಷದ ಕೊನೆಯಲ್ಲಿ ಆದಾಯ ತೆರಿಗೆ ಪಾವತಿಸುವ ನಿಟ್ಟಿನಲ್ಲಿ ವ್ಯವಸ್ಥೆ ಮಾಡಿಕೊಂಡಿದ್ದರೂ ಅದನ್ನು ಪಾವತಿಸಿರಲಿಲ್ಲ. ಆದರೆ ಸಂಸ್ಥೆ ಮೂರು ತಿಂಗಳಿಗೊಮ್ಮೆ ಸಿಬ್ಬಂದಿಯ ತೆರಿಗೆ ಪಾವತಿಯ ಮಾಹಿತಿಯನ್ನು ಇಲಾಖೆಗೆ ನೀಡುತ್ತ ಇರಬೇಕಾಗುತ್ತದೆ. ಇಲ್ಲಿ ಸಹ ಸಂಸ್ಥೆ ಆದಾಯ ತೆರಿಗೆ ವಿವರ ನೀಡಿದರೂ ಸಿಬ್ಬಂದಿಯಿಂದ ಅದನ್ನು ಕಟ್ಟಿಸುವಂತೆ ಮಾಡುವಲ್ಲಿ ವಿಫಲವಾಗಿದೆ. ಹೀಗಾಗಿ ಆದಾಯ ತೆರಿಗೆ ಇಲಾಖೆಗೆ ಇದೀಗ ಸಂಸ್ಥೆ ₹26 ಲಕ್ಷದಷ್ಟು ಮೊತ್ತವನ್ನು ತಾನೇ ಪಾವತಿಸುವ ಅನಿವಾರ್ಯತೆ ಎದುರಾಗಿದೆ.  ಸಿಬ್ಬಂದಿಗೆ ತೆರಿಗೆ ಪಾವತಿಯ ಬಗ್ಗೆ ಮನವರಿಕೆ ಮಾಡಲಾಗುವುದು ಅವರು ತೆರಿಗೆ ಬಾಕಿ ನೀಡಿದರೆ ಉತ್ತಮ ಇಲ್ಲವಾದರೆ ಸಂಸ್ಥೆ ಹೊರೆ ಹೊರುವುದು ಅನಿವಾರ್ಯ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.