ಹೊಸಪೇಟೆ (ವಿಜಯನಗರ): ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸ.ಚಿ. ರಮೇಶ ಅವರ ಅಧಿಕಾರದ ಅವಧಿ ಕೊನೆಗೊಳ್ಳುವುದಕ್ಕೆ ದಿನಗಣನೆ ಆರಂಭವಾಗಿದೆ. ಆದರೆ, ಸರ್ಕಾರ ಇದುವರೆಗೆ ಹೊಸ ಕುಲಪತಿ ನೇಮಕ ಪ್ರಕ್ರಿಯೆ ಆರಂಭಿಸಿಲ್ಲ.
ಫೆ. 21ರಂದು ರಮೇಶ ಅವರ ಅಧಿಕಾರದ ಅವಧಿ ಪೂರ್ಣಗೊಳ್ಳಲಿದೆ. ಹೊಸ ಕುಲಪತಿ ನೇಮಕಕ್ಕೆ ಸರ್ಕಾರ ಶೋಧನಾ ಸಮಿತಿ ರಚಿಸಬೇಕಿತ್ತು. ಆದರೆ, ಇದುವರೆಗೆ ಆ ಕೆಲಸವಾಗಿಲ್ಲ. ಮೂವರು ಸದಸ್ಯರನ್ನು ಒಳಗೊಂಡ ಸಮಿತಿ ರಚಿಸಿದ ನಂತರವಷ್ಟೇ ನೇಮಕ ಪ್ರಕ್ರಿಯೆ ಆರಂಭಗೊಳ್ಳುತ್ತದೆ. ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯಲ್ಲಿ ಚರ್ಚಿಸಿ ಒಬ್ಬರ ಹೆಸರು ಕಳುಹಿಸಬೇಕು. ಇನ್ನಿಬ್ಬರ ಹೆಸರು ಸರ್ಕಾರ ನಿರ್ಧರಿಸುತ್ತದೆ. ಒಬ್ಬರ ಹೆಸರು ಶಿಫಾರಸು ಮಾಡಬೇಕೆಂದು ಮೂರು ತಿಂಗಳ ಹಿಂದೆಯೇ ಉನ್ನತ ಶಿಕ್ಷಣ ಇಲಾಖೆಯು ಕನ್ನಡ ವಿಶ್ವವಿದ್ಯಾಲಯಕ್ಕೆ ಪತ್ರ ಬರೆದಿತ್ತು. ಆದರೆ, ಈ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ.
ಉದ್ದೇಶಪೂರ್ವಕವಾಗಿಯೇ ಒಬ್ಬರ ಹೆಸರು ಶಿಫಾರಸು ಮಾಡುವುದಕ್ಕೆ ವಿಶ್ವವಿದ್ಯಾಲಯ ಹಿಂದೇಟು ಹಾಕುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಹಾಲಿ ಕುಲಪತಿ ವಿರುದ್ಧ ಗಂಭೀರ ಸ್ವರೂಪದ ಭ್ರಷ್ಟಾಚಾರದ ಆರೋಪಗಳಿವೆ. ಈ ಕುರಿತು ರಾಜ್ಯ ಸರ್ಕಾರಕ್ಕೆ ಅನೇಕ ದೂರುಗಳು ಸಲ್ಲಿಕೆಯಾಗಿವೆ. ಸ್ವತಃ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಸರ್ಕಾರದ ಮಟ್ಟದಲ್ಲಿ ಕುಲಪತಿ ವಿರುದ್ಧ ಅನೇಕ ದೂರುಗಳು ಹೋಗಿವೆ. ಒಂದುವೇಳೆ ಸಕಾಲಕ್ಕೆ ಸಮಿತಿ ರಚನೆಯಾಗಿದ್ದರೆ ಹೊಸ ಕುಲಪತಿ ನೇಮಕ ಪ್ರಕ್ರಿಯೆ ಪೂರ್ಣಗೊಳ್ಳಬಹುದು ಎಂಬ ಲೆಕ್ಕಾಚಾರದಿಂದ ಸಮಿತಿಗೆ ಹೆಸರು ಕಳಿಸಲು ಅನಗತ್ಯ ವಿಳಂಬ ಮಾಡಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ.
ಈ ನಡುವೆ ಫೆ. 14ರಂದು ಸಿಂಡಿಕೇಟ್ ಸಭೆ ಕರೆಯಲಾಗಿದೆ. ಆ ದಿನದಿಂದ ಕುಲಪತಿ ಅಧಿಕಾರದ ಅವಧಿ ಒಂದು ವಾರವಷ್ಟೇ ಉಳಿಯುತ್ತದೆ. ಸಭೆ ಕರೆದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಸಭೆಯಲ್ಲಿ ಶೋಧನಾ ಸಮಿತಿಗೆ ಒಬ್ಬರ ಹೆಸರು ಶಿಫಾರಸು ಮಾಡುವುದರ ಬಗ್ಗೆ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದು ಗೊತ್ತಾಗಿದೆ. ಹೆಸರು ಶಿಫಾರಸು ಮಾಡಿದ ನಂತರ ಸರ್ಕಾರ ಪೂರ್ಣ ಪ್ರಮಾಣದ ಸಮಿತಿ ರಚಿಸಿ, ನೇಮಕ ಪ್ರಕ್ರಿಯೆ ಪೂರ್ಣಗೊಳಿಸಲು ಕೆಲ ತಿಂಗಳೇ ಬೇಕಾಗಬಹುದು. ಅಲ್ಲಿಯವರೆಗೆ ಅಧಿಕಾರದ ಅವಧಿ ವಿಸ್ತರಿಸಿಕೊಳ್ಳುವ ಚಿಂತನೆ ಹಾಲಿ ಕುಲಪತಿಯವರದ್ದು ಎನ್ನಲಾಗಿದೆ.
‘ಫೆ. 14ರಂದು ಸಿಂಡಿಕೇಟ್ ಸಭೆ ಕರೆದಿರುವುದು ನಿಜ. ಆ ಸಭೆಯಲ್ಲಿ ಚರ್ಚಿಸಿ, ಒಬ್ಬರ ಹೆಸರು ಶೋಧನಾ ಸಮಿತಿಗೆ ಕಳುಹಿಸಿಕೊಡುವುದರ ಬಗ್ಗೆ ಚರ್ಚಿಸಲಾಗುತ್ತದೆ. ಕುಲಪತಿ ಅಧಿಕಾರದ ಅವಧಿ ವಿಸ್ತರಣೆ ಬಗ್ಗೆ ರಾಜ್ಯಪಾಲರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಭ್ರಷ್ಟಾಚಾರ ಆರೋಪದ ತನಿಖೆಯನ್ನು ನಿವೃತ್ತ ನ್ಯಾಯಮೂರ್ತಿಯಿಂದ ನಡೆಸಬೇಕೆಂದು ಹಿಂದಿನ ಸಿಂಡಿಕೇಟ್ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಇದರ ಬಗ್ಗೆ ಮಾರ್ಗದರ್ಶನ ಮಾಡುವಂತೆ ಕೋರಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಸರ್ಕಾರದ ಸೂಚನೆ ಆಧರಿಸಿ ತನಿಖೆ ಆರಂಭಿಸಲಾಗುವುದು’ ಎಂದುಕುಲಸಚಿವ ಪ್ರೊ.ಎ.ಸುಬ್ಬಣ್ಣ ರೈ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಉನ್ನತ ಶಿಕ್ಷಣ ಸಚಿವರಿಂದ ಸಭೆ:
ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಗುರುವಾರ ಬೆಂಗಳೂರಿನಲ್ಲಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ, ಕುಲಸಚಿವ ಹಾಗೂ ಹಣಕಾಸು ಅಧಿಕಾರಿಯೊಂದಿಗೆ ಸಭೆ ನಡೆಸಿದ್ದಾರೆ.
ಸಭೆಯಲ್ಲಿ ಕನ್ನಡ ವಿಶ್ವವಿದ್ಯಾಲಯ ಎದುರಿಸುತ್ತಿರುವ ಆರ್ಥಿಕ ಮುಗ್ಗಟ್ಟಿನ ಕುರಿತು ಚರ್ಚಿಸಲಾಗಿದ್ದು, ಪರಿಹಾರ ಒದಗಿಸುವ ಭರವಸೆ ಸಿಕ್ಕಿದೆ ಎಂದು ಗೊತ್ತಾಗಿದೆ. ಅಲ್ಲದೇ ವಿಜಯನಗರ ಅಧ್ಯಯನ ಪೀಠ ಆರಂಭಿಸಿ, ಉತ್ತಮ ರೀತಿಯಲ್ಲಿ ನಡೆಸಿಕೊಂಡು ಹೋಗುವಂತೆ ಸಚಿವರು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
‘ವಿಶ್ವವಿದ್ಯಾಲಯ ಎದುರಿಸುತ್ತಿರುವ ಸಮಸ್ಯೆಯನ್ನು ಸಚಿವರಿಗೆ ತಿಳಿಸಿದ್ದು, ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಹೊಸ ಅಧ್ಯಯನ ಪೀಠ ಆರಂಭಿಸಲು ತಿಳಿಸಿದ್ದಾರೆ. ಸಭೆ ಯಶಸ್ವಿಯಾಗಿದೆ’ ಎಂದು ಕುಲಸಚಿವ ಪ್ರೊ.ಎ.ಸುಬ್ಬಣ್ಣ ರೈ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.