ADVERTISEMENT

ಕನ್ನಡ ವಿಶ್ವವಿದ್ಯಾಲಯ: ಮೂವರಿಗೆ ನಾಡೋಜ ಗೌರವ; 264 ಮಂದಿಗೆ ಪಿಎಚ್.ಡಿ

​ಪ್ರಜಾವಾಣಿ ವಾರ್ತೆ
Published 5 ಜನವರಿ 2024, 9:34 IST
Last Updated 5 ಜನವರಿ 2024, 9:34 IST
<div class="paragraphs"><p>ಬಸವಲಿಂಗ ಪಟ್ಟದೇವರು,&nbsp;ಎಸ್.ಸಿ.ಶರ್ಮಾ ತೇಜಸ್ವಿ ಕಟ್ಟಿಮನಿ </p></div>

ಬಸವಲಿಂಗ ಪಟ್ಟದೇವರು, ಎಸ್.ಸಿ.ಶರ್ಮಾ ತೇಜಸ್ವಿ ಕಟ್ಟಿಮನಿ

   

ಹೊಸಪೇಟೆ: ಹಂಪಿ ಕನ್ನಡ ವಿಶ್ವವಿದ್ಯಾಲಯದ 32ನೇ ನುಡಿಹಬ್ಬ (ಘಟಿಕೋತ್ಸವ) ಜನವರಿ 10ರಂದು ನಡೆಯಲಿದ್ದು, ನಾಡೋಜ ಗೌರವಕ್ಕೆ ಬಸವಲಿಂಗ ಪಟ್ಟದೇವರು, ತೇಜಸ್ವಿ ಕಟ್ಟಿಮನಿ ಮತ್ತು ಎಸ್.ಸಿ.ಶರ್ಮಾ ಪಾತ್ರರಾಗಲಿದ್ದಾರೆ.

ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕುಲಪತಿ ಪ್ರೊ.ಡಿ.ವಿ.ಪರಮಶಿವಮೂರ್ತಿ ಅವರು ಈ ವಿಷಯ ಪ್ರಕಟಿಸಿದರು.

ADVERTISEMENT

ಈ ಬಾರಿ ದಾಖಲೆಯ 264 ವಿದ್ಯಾರ್ಥಿಗಳು ಪಿಎಚ್.ಡಿ ಪದವಿಯನ್ನು ಪಡೆಯಲಿದ್ದಾರೆ, ಕಳೆದ ವರ್ಷ 166 ಮಂದಿ ಪಿಎಚ್.ಡಿ ಪಡೆದುದು ಇದುವರೆಗಿನ ದಾಖಲೆಯಾಗಿತ್ತು ಎಂದರು.

ಜ.10ರಂದು ಸಂಜೆ 5 ಗಂಟೆಗೆ ಕುಲಾಧಿಪತಿ ಥಾವರ್ ಚಂದ್ ಗೆಹಲೋತ್ ಅವರು ಪದವಿ ಪ್ರದಾನ ಮಾಡಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ ಡಿ.ಲಿಟ್ ಹಾಗೂ ಪಿಎಚ್.ಡಿ ಪ್ರದಾನ ಮಾಡಲಿದ್ದಾರೆ. ಆಂಧ್ರಪ್ರದೇಶದ ಅನಂತಪುರ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್.ಎ. ಕೋರಿ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದರು.

ವಿಶ್ವವಿದ್ಯಾಲಯ ತೀವ್ರ ಆರ್ಥಿಕ ಸಂಕಷ್ಟದಲ್ಲಿದೆ, ಈ ಬಜೆಟ್‌ನಲ್ಲಿ ಸರ್ಕಾರ ಅಗತ್ಯದ ಅನುದಾನ ನೀಡುವ ವಿಶ್ವಾಸ ಇದೆ ಎಂದು ಕುಲಪತಿ ಹೇಳಿದರು.

ಕುಲಸಚಿವ ಡಾ.ವಿಜಯ ಪೂಣಚ್ಚ, ವಿವಿಧ ವಿಭಾಗಗಳ ಮುಖ್ಯಸ್ಥರು ಇದ್ದರು.

ಮೂರು ಭಾಗಗಳಿಗೆ ಪ್ರಶಸ್ತಿ

ನಾಡೋಜ ಗೌರವಕ್ಕೆ ಪಾತ್ರರಾದವರು ರಾಜ್ಯದ ಮೂರು ಭಾಗದಲ್ಲಿ ಮಹತ್ತರ ಸಾಧನೆ ಮಾಡಿದವರು. ಸಮಾಜಸೇವೆಯಲ್ಲಿ ವಿಶೇಷವಾಗಿ ಗುರುತಿಸಿಕೊಂಡಿರುವ ಕನ್ನಡ ಸ್ವಾಮೀಜಿ ಎಂದೇ ಖ್ಯಾತರಾದ ಭಾಲ್ಕಿ ವಿರಕ್ತಮಠದ ಬಸವಲಿಂಗ ಪಟ್ಟದೇವರು, ಆಂಧ್ರಪ್ರದೇಶದ ಬುಡಕಟ್ಟು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ತೇಜಸ್ವಿ ಕಟ್ಟಿಮನಿ (ಧಾರವಾಡ) ಹಾಗೂ, ಶಿಕ್ಷಣ ಕ್ಷೇತ್ರದಲ್ಲಿ ಹಾಗೂ ನ್ಯಾನೊ ಕ್ಷೇತ್ರದಲ್ಲಿ ಸಾಧನೆ ಮಾಡಿದ 'ನ್ಯಾಕ್' ನಿವೃತ್ತ ನಿರ್ದೇಶಕ ಪ್ರೊ‌.ಎಸ್‌.ಸಿ. ಶರ್ಮಾ (ಬೆಂಗಳೂರು) ಅವರು ನಾಡೋಜ ಗೌರವಕ್ಕೆ ಭಾಜನರಾಗಿದ್ದಾರೆ ಎಂದು ಕುಲಪತಿ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.