ADVERTISEMENT

ನನಗೆ ಯಾವ ಖಾತೆ ಬೇಕೆಂದು ಸಿ.ಎಂಗೆ ಹೇಳಿರುವೆ: ಸಚಿವ ಆನಂದ್‌ ಸಿಂಗ್‌

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2021, 11:03 IST
Last Updated 6 ಆಗಸ್ಟ್ 2021, 11:03 IST
ಆನಂದ್‌ ಸಿಂಗ್‌
ಆನಂದ್‌ ಸಿಂಗ್‌    

ಹೊಸಪೇಟೆ (ವಿಜಯನಗರ): ‘ನನಗೆ ಯಾವ ಖಾತೆ ಬೇಕೆಂದು ಸಿ.ಎಂ.ಗೆ ಹೇಳಿರುವೆ. ಆ ವಿಷಯ ಮಾಧ್ಯಮಗಳಿಗೆ ಹೇಳುವುದಿಲ್ಲ’ ಎಂದು ಸಚಿವ ಆನಂದ್‌ ಸಿಂಗ್‌ ಪ್ರತಿಕ್ರಿಯಿಸಿದರು.

ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಶುಕ್ರವಾರ ಕ್ಷೇತ್ರಕ್ಕೆ ಮರಳಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ‘ಇಂತಹುದೇ ಖಾತೆ ಕೊಡಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿಕೊಂಡಿರುವೆ. ಯಡಿಯೂರಪ್ಪನವರು ಮುಖ್ಯಮಂತ್ರಿಯಿದ್ದಾಗ ಪ್ರವಾಸೋದ್ಯಮ ಖಾತೆ ಬದಲಿಸಿ, ಹಜ್‌ ಮತ್ತು ವಕ್ಫ್‌ ಖಾತೆ ನೀಡಿದ್ದರು. ಅವರು ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅನಿವಾರ್ಯ ಕಾರಣಗಳಿಂದ ನನ್ನ ಖಾತೆ ಬದಲಿಸಿದ್ದರು. ಆದರೆ, ಎಂದೂ ನಾನು ಅಸಮಾಧಾನ ತೋಡಿಕೊಂಡಿರಲಿಲ್ಲ’ ಎಂದರು.

‘ಖಾತೆಗೂ ಅಭಿವೃದ್ಧಿಗೂ ಯಾವುದೇ ಸಂಬಂಧವಿಲ್ಲ. ಯಾವುದೇ ಖಾತೆ ಕೊಟ್ಟರೂ ಸರ್ಕಾರವಂತೂ ಇದ್ದೇ ಇರುತ್ತದೆ. ಅಭಿವೃದ್ಧಿ ಕೆಲಸಗಳಿಗೆ ಹಿನ್ನಡೆ ಆಗುವುದಿಲ್ಲ’ ಎಂದು ಪ್ರತಿಕ್ರಿಯಿಸಿದರು.

ರಾಜೂಗೌಡಗೆ ಸಚಿವ ಸ್ಥಾನ ಕೊಡಬೇಕು: ‘ಶಾಸಕ ರಾಜೂಗೌಡ ಅವರಿಗೆ ಸಚಿವ ಸ್ಥಾನ ಕೊಡಬೇಕಿತ್ತು. ಕಾರಣಾಂತರಗಳಿಂದ ಕೈತಪ್ಪಿದೆ. ಕಲ್ಯಾಣ ಕರ್ನಾಟಕದಲ್ಲಿ ರಾಜೂಗೌಡ ವಾಲ್ಮೀಕಿ ಸಮಾಜದ ಪ್ರಭಾವಿ ಯುವ ನಾಯಕ. ಆ ಸಮಾಜದ ಬಿ. ಶ್ರೀರಾಮುಲು ಅವರಿಗೆ ಸಚಿವ ಸ್ಥಾನ ಸಿಕ್ಕಿದೆ. ರಾಜೂಗೌಡ ಅವರಿಗೂ ಕೊಡಬೇಕೆಂದು ಮುಖ್ಯಮಂತ್ರಿಗೆ ಮನವಿ ಮಾಡಿರುವೆ. ಬರುವ ದಿನಗಳಲ್ಲಿ ನೋಡೋಣ ಎಂದು ಭರವಸೆ ಕೊಟ್ಟಿದ್ದಾರೆ’ ಎಂದು ಪ್ರಶ್ನೆಗೆ ಉತ್ತರಿಸಿದರು.

‘ಬಸವರಾಜ ಬೊಮ್ಮಾಯಿ ಅವರು ಯಡಿಯೂರಪ್ಪನವರ ಸಲಹೆ ಕೇಳಿದರೆ ಅವರ ಮಾತು ಕೇಳುತ್ತಾರೆ ಎಂದು ಭಾವಿಸಬೇಕಿಲ್ಲ. ಯಡಿಯೂರಪ್ಪನವರು 50 ವರ್ಷ ಶ್ರಮ ವಹಿಸಿ ಪಕ್ಷ ಕಟ್ಟಿ ಬೆಳೆಸಿದ್ದಾರೆ. ಸಾಕಷ್ಟು ಅನುಭವ ಹೊಂದಿರುವ ಅವರಿಂದ ಸಲಹೆ ಪಡೆದರೆ ತಪ್ಪೇನೂ? ಮನೆಯ ಹಿರಿಯ ಯಜಮಾನ ಮನೆಯಲ್ಲಿದ್ದರೂ ಎಲ್ಲ ಕೆಲಸಗಳು ಹೇಗೆ ನಡೆಯುತ್ತವೆಯೋ ಅದೇ ರೀತಿ ಸರ್ಕಾರ ನಡೆಯುತ್ತದೆ’ ಎಂದರು.

‘ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಿದವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಂಡಿಲ್ಲ ಎನ್ನುವುದರ ಬಗ್ಗೆ ನಾನೇನೂ ಹೇಳಲಾರೆ. ವರಿಷ್ಠರು ತೆಗೆದುಕೊಂಡಿರುವ ತೀರ್ಮಾನವದು. ಮಳೆಯಿಂದ ಆಗಿರುವ ಹಾನಿ, ಕೋವಿಡ್‌ ಮೂರನೇ ಅಲೆ ಬಗ್ಗೆ ಕೈಗೊಂಡಿರುವ ಸಿದ್ಧತೆ ಕುರಿತು ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ಸೂಚನೆ ಕೊಟ್ಟಿದ್ದಾರೆ. ಸದ್ಯ ಆ ಕೆಲಸದಲ್ಲಿ ಮಗ್ನನಾಗಿರುವೆ’ ಎಂದು ಪ್ರತಿಕ್ರಿಯಿಸಿದರು.

ಗಣೇಶ ಚತುರ್ಥಿಗೆ ವಿಜಯನಗರ ಉದ್ಘಾಟನೆ: ‘ನೂತನ ವಿಜಯನಗರ ಜಿಲ್ಲೆ ಉದ್ಘಾಟನಾ ಸಮಾರಂಭ ಗಣೇಶ ಚತುರ್ಥಿಗೆ ಹಮ್ಮಿಕೊಳ್ಳುವುದರ ಬಗ್ಗೆ ಚಿಂತನೆ ನಡೆದಿದೆ. ಇನ್ನಷ್ಟೇ ಅದರ ಬಗ್ಗೆ ಅಂತಿಮ ತೀರ್ಮಾನಕ್ಕೆ ಬರಬೇಕಿದೆ’ ಎಂದು ಆನಂದ್‌ ಸಿಂಗ್‌ ತಿಳಿಸಿದರು.

‘ಆ. 15ಕ್ಕೆ ಜಿಲ್ಲೆ ಉದ್ಘಾಟನೆ ಮಾಡುವ ಯೋಚನೆ ಇತ್ತು. ಆದರೆ, ವಿಜಯನಗರದ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಅದ್ದೂರಿ ಕಾರ್ಯಕ್ರಮ ಹಮ್ಮಿಕೊಳ್ಳುವ ಯೋಜನೆ ಹಾಕಿಕೊಳ್ಳಲಾಗಿದೆ. ಎರಡರಿಂದ ಮೂರು ದಿನ ಕಾರ್ಯಕ್ರಮ ಆಯೋಜಿಸಿ, ಹೆಸರಾಂತ ಕಲಾವಿದರನ್ನು ಕರೆಸುವ ಯೋಚನೆ ಇದೆ’ ಎಂದರು.

‘ವಿಘ್ನೇಶ್ವರನ ಪೂಜೆ ಮಾಡಿ ಹೊಸ ಜಿಲ್ಲೆಗೆ ಚಾಲನೆ ಕೊಡಲು ಉದ್ದೇಶಿಸಲಾಗಿದೆ. ಕೋವಿಡ್‌ನಿಂದ ಕಾರ್ಯಕ್ರಮ ಸಂಘಟಿಸಲು ವಿಳಂಬವಾಗಿದೆ. ಅದ್ದೂರಿಯಾಗಿ ಕಾರ್ಯಕ್ರಮ ಮಾಡಬೇಕಾದರೆ ಜನ ಇರಬೇಕಾಗುತ್ತದೆ. ಕೋವಿಡ್‌ ಇರುವುದರಿಂದ ಜನರನ್ನು ಸೇರಿಸಲು ಆಗುವುದಿಲ್ಲ. ಮೂರನೇ ಅಲೆ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಎಲ್ಲ ಸಂಗತಿಗಳನ್ನು ನೋಡಿಕೊಂಡು ಕಾರ್ಯಕ್ರಮ ಆಯೋಜಿಸಲಾಗುವುದು’ ಎಂದು ಮಾಹಿತಿ ಹಂಚಿಕೊಂಡರು.

‘ಶೀಘ್ರದಲ್ಲೇ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಭೆ ನಡೆಸಿ, ಹಣಕಾಸು ಇಲಾಖೆಯಿಂದ ಒಪ್ಪಿಗೆ ಪಡೆದು ಮೊದಲ ಹಂತದಲ್ಲಿ ಹೊಸ ಜಿಲ್ಲೆಯ ವಿವಿಧ ಇಲಾಖೆಗಳಿಗೆ ಅಧಿಕಾರಿಗಳನ್ನು ನೇಮಕ ಮಾಡಲಾಗುವುದು. 15 ದಿನಗಳ ಒಳಗೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೇಮಕ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಈಗಾಗಲೇ ಜಿಲ್ಲೆಗೆ ವಿಶೇಷ ಅಧಿಕಾರಿ ನೇಮಕಗೊಂಡಿದ್ದಾರೆ. ಶೀಘ್ರದಲ್ಲೇ ಅವರ ಕಚೇರಿಗೆ ಸಿಬ್ಬಂದಿ ನೇಮಕ ಮಾಡಲಾಗುವುದು’ ಎಂದು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.