ಹೊಸಪೇಟೆ (ವಿಜಯನಗರ): ‘ನನ್ನ ರಾಜಕೀಯ ಜೀವನ ಅಂತ್ಯವಾಗಬಹುದೊ ಅಥವಾ ಮತ್ತೆ ಹೊಸದಾಗಿ ಆರಂಭವಾಗಬಹುದೊ ಎನ್ನುವುದು ವೇಣುಗೋಪಾಲ ನಿರ್ಧರಿಸುತ್ತಾನೆ. ಅದನ್ನು ಕಾದು ನೋಡೋಣ’ ಎಂದು ಸಚಿವ ಆನಂದ್ ಸಿಂಗ್ ಮಾರ್ಮಿಕವಾಗಿ ಮಾತನಾಡಿದರು.
ನಗರದ ವೇಣುಗೋಪಾಲ ದೇವಸ್ಥಾನದಲ್ಲಿ ಬುಧವಾರ ಏರ್ಪಡಿಸಿದ್ದ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾನು ಐದು ವರ್ಷ ಸಮಾಜ ಸೇವೆ, 15 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ನನ್ನ ರಾಜಕೀಯ ಜೀವನ ಆರಂಭವಾಗಿದ್ದು ಇದೇ ದೇವಸ್ಥಾನದಿಂದ. ಈಗ ಅದು ಇಲ್ಲೇ ಅಂತ್ಯವಾಗುತ್ತೋ ಗೊತ್ತಿಲ್ಲ. ಎಲ್ಲವೂ ಕೃಷ್ಣನ ಆಶೀರ್ವಾದದ ಮೇಲೆ ನಿರ್ಧರಿಸಿದೆ’ ಎಂದು ಹೇಳಿದರು.
‘ಒಳ್ಳೆತನ, ಒಳ್ಳೆಯ ವಿಚಾರಗಳಿಗೆ ಮುಂದೆ ಇಟ್ಟ ಹೆಜ್ಜೆ ಇಂದೆ ಇಡಬೇಡ. ಅದಕ್ಕೆ ನೀನು ಬಲಿಯಾದರೂ ಪರವಾಗಿಲ್ಲ ಎಂದು ದೇವರು ವಿಶ್ವಾಸ ತುಂಬಿದ್ದಾರೆ. ನನಗೆ ಯಾರ ರಕ್ಷಣೆಯೂ ಇಲ್ಲದಿದ್ದರೂ ಕೃಷ್ಣನ ಆಶೀರ್ವಾದ ಇದೆ. ಮಹಾಭಾರತದಲ್ಲಿ ಅರ್ಜುನನಿಗೆ ಕೃಷ್ಣನ ಶ್ರೀರಕ್ಷೆ ಇರಲಿಲ್ಲವೇ? ಆತ ನನ್ನ ಬೆನ್ನ ಹಿಂದೆಯೂ ನಿಲ್ಲುತ್ತಾನೆ ಎಂಬ ಭರವಸೆ ಇದೆ. ಯಾರಿಂದ ರಕ್ಷಣೆ ಸಿಗಬಹುದು ಅಂತ ನಾನು ಅತಿಯಾಗಿ ನಂಬಿದ್ದೆನೆಯೊ ಅದನ್ನು ಈಗ ಕಳೆದುಕೊಂಡಿದ್ದೇನೆ. ಅವರ ಮೇಲೆ ವಿಶ್ವಾಸ ಇಲ್ಲ’ ಎಂದರು.
‘ನಾನು ಯಾರ ಬಳಿ ಏನು ಮನವಿ ಮಾಡಿಕೊಳ್ಳಬೇಕಿತ್ತೊ ಮಾಡಿಕೊಂಡಿದ್ದೇನೆ. ನಾಲ್ಕು ಗೋಡೆಗಳ ಮಧ್ಯೆ ನನ್ನ ಭಾವನೆ, ಕ್ಷೇತ್ರದ ಭವಿಷ್ಯದ ಬಗ್ಗೆ ಹೇಳಿರುವೆ. ಬಹಿರಂಗವಾಗಿ ಎಲ್ಲೂ ಮಾತನಾಡಿಲ್ಲ. ಪಕ್ಷ ಹಾಗೂ ನಾಯಕರಿಗೆ ಮುಜುಗರ ತರುವ ಹೇಳಿಕೆ ಕೊಟ್ಟಿಲ್ಲ. ಭವಿಷ್ಯದಲ್ಲಿಯೂ ಕೊಡುವುದಿಲ್ಲ’ ಎಂದು ತಿಳಿಸಿದರು.
‘ನನಗೆ ನಮ್ಮ ನಾಯಕರು, ಪಕ್ಷದ ಮೇಲೆ ವಿಶ್ವಾಸ ಇದೆ. ಆದರೆ, ಅವರಿಗೆ ನನ್ನ ಮೇಲೆ ವಿಶ್ವಾಸವಿದೆಯೊ ಇಲ್ಲವೊ ಎಂಬ ಅನುಮಾನ ಬರುತ್ತಿದೆ. ರಾಜಕೀಯದಲ್ಲಿದ್ದು ದುಡ್ಡು ಮಾಡುವುದು, ಕೊಳ್ಳೆ ಹೊಡೆಯಲು ಬಂದಿಲ್ಲ. ನಾನು ತಪ್ಪು ಹೇಳಿದರೆ ಕೃಷ್ಣ ಶಿಕ್ಷೆ ಕೊಡಲಿ. ಎಲ್ಲ ರಾಜಕಾರಣಿಗಳು ಕೆಟ್ಟವರಲ್ಲ. ನಾನು ಯಾವ ಗುಂಪಿನಲ್ಲಿ ಸೇರುತ್ತೇನೆ ಎನ್ನುವುದು ಜನ ಹೇಳಬೇಕು. ನಾನೇ ಹೇಳಿದರೆ ಸರಿ ಇರುವುದಿಲ್ಲ. ನಾನೇ ನನ್ನ ಬಗ್ಗೆ ಸರ್ಟಿಫಿಕೇಟ್ ಕೊಡುವುದು ಸೂಕ್ತವಲ್ಲ’ ಎಂದರು.
‘ಭೇಟಿಯಾಗುವಂತೆ ಮುಖ್ಯಮಂತ್ರಿಯವರ ಕಡೆಯಿಂದ ಕರೆ ಬಂದಿದೆ. ಇಂದು ಅಥವಾ ನಾಳೆ ಬೆಂಗಳೂರಿಗೆ ಹೋಗಿ, ಅವರನ್ನು ಭೇಟಿ ಮಾಡುತ್ತೇನೆ. ಈಗಾಗಲೇ ಅವರಿಗೆ ಏನು ಹೇಳಬೇಕಿತ್ತೋ ಎಲ್ಲ ಹೇಳಿದ್ದೇನೆ. ನನ್ನ ಆ ಮಾತುಗಳಿಗೆ ಈಗಲೂ ಬದ್ಧನಾಗಿದ್ದೇನೆ’ ಎಂದು ಸ್ಪಷ್ಟಪಡಿಸಿದರು.
‘ನನಗೆ ಅಸಮಾಧಾನ ಆಗಿದೆ ಎಂದು ಈಗಾಗಲೇ ಹೇಳಿರುವೆ. ಬ್ಲ್ಯಾಕ್‌ಮೇಲ್ ಮಾಡುವ ತಂತ್ರ ನನ್ನದಲ್ಲ. ಹೇಳಿರುವುದನ್ನು ಕೇಳಿಸಿಕೊಂಡು ಅರ್ಥ ಮಾಡಿಕೊಳ್ಳುವವರು ಬೇಕು. ಅಕಸ್ಮಾತ್ ನನ್ನ ತಪ್ಪಿದ್ದರೆ ತಿದ್ದುಕೊಳ್ಳುವೆ. ನನ್ನ ಪಕ್ಷದ ಹಿರಿಯ ನಾಯಕರು ಮಾಧ್ಯಮಗಳಿಗೆ ರಾಜಕೀಯ ಹೇಳಿಕೆ ಕೊಡದಂತೆ ತಿಳಿಸಿದ್ದಾರೆ. ಆದರೆ, ನಾನು ಎಲ್ಲಿಯೂ ರಾಜಕೀಯದ ಬಗ್ಗೆ ಮಾತನಾಡಿಲ್ಲ’ ಎಂದರು.
‘ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಜತೆಗೂ ಚರ್ಚೆ ಮಾಡಿ ನನ್ನ ಅನಿಸಿಕೆ ತಿಳಿಸಿದ್ದೇನೆ. ಯಡಿಯೂರಪ್ಪನವರು ಮೂರು ಸಲ ನನ್ನ ಖಾತೆ ಬದಲಿಸಿದ್ದರು. ಆದರೆ, ನನ್ನ ಬಗ್ಗೆ ಯೋಚನೆ ಮಾಡುವಂತೆ ಅಷ್ಟೇ ಹೇಳಿದ್ದೆ ಹೊರತು ಒತ್ತಡ ಹಾಕಿರಲಿಲ್ಲ. ಏಕೆಂದರೆ ಅವರು ಕೇಳದೆಯೇ ಎಲ್ಲ ಕೊಟ್ಟಿದ್ದಾರೆ. ವಿಜಯನಗರ ಜಿಲ್ಲೆ ಮಾಡಿದರು. ಕ್ಷೇತ್ರಕ್ಕೆ ಏತ ನೀರಾವರಿ ಯೋಜನೆ ಮಂಜೂರು ಮಾಡಿದರು. ಅವರೇ ಮುಖ್ಯಮಂತ್ರಿಯಾಗಿ ಮುಂದುವರೆದಿದ್ದರೆ ಅವರಿಗೆ ಈ ರೀತಿ ಕೇಳುತ್ತಿರಲಿಲ್ಲ’ ಎಂದು ಹೇಳಿದರು.
‘ಸಚಿವ ಸ್ಥಾನಕ್ಕಾಗಿ ಪೂಜೆಯಲ್ಲ’
‘ಸಚಿವ ಸ್ಥಾನಕ್ಕಾಗಿ ಆನಂದ್ ಸಿಂಗ್ ಅವರು ಪೂಜೆ ಮಾಡಿಸುತ್ತಿದ್ದಾರೆ ಎಂದು ಕೆಲವು ಮಾಧ್ಯಮಗಳಲ್ಲಿ ಗಮನಿಸಿರುವೆ. ಆದರೆ, ಅದು ಸತ್ಯವಲ್ಲ. ನಮ್ಮ ತಾತ ಶಂಕರ್ ಸಿಂಗ್ 60 ವರ್ಷಗಳ ಹಿಂದೆ ವೇಣುಗೋಪಾಲ ದೇವಸ್ಥಾನ ಕಟ್ಟಿಸಿದ್ದರು. ಅದರ ಜೀರ್ಣೊದ್ಧಾರ ಕೆಲಸ ಮುಗಿದಿರುವುದರಿಂದ ಪೂಜೆ ಹಮ್ಮಿಕೊಳ್ಳಲಾಗಿದೆ’ ಎಂದು ಆನಂದ್ ಸಿಂಗ್ ಸ್ಪಷ್ಟಪಡಿಸಿದರು.
ಕಚೇರಿ ಬಂದ್ ಮಾಡಿರುವುದೇಕೇ? ಖಾತೆ ಗೊಂದಲಕ್ಕೆ ಯಾವಾಗ ತೆರೆ ಬೀಳಬಹುದು ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಲು ನಿರಾಕರಿಸಿ, ನಿರ್ಗಮಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.