ADVERTISEMENT

ನವಾಬರು ಮಕ್ಕಾ, ಮದೀನಾದಿಂದ ಆಸ್ತಿ ತಂದು ಕೊಟ್ರಾ?: ಇಬ್ರಾಹಿಂಗೆ ಮುತಾಲಿಕ್ ಟಾಂಗ್

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2024, 6:09 IST
Last Updated 19 ನವೆಂಬರ್ 2024, 6:09 IST
<div class="paragraphs"><p>ಪ್ರಮೋದ ಮುತಾಲಿಕ್</p></div>

ಪ್ರಮೋದ ಮುತಾಲಿಕ್

   

ಹೂವಿನಹಡಗಲಿ (ವಿಜಯನಗರ ಜಿಲ್ಲೆ): ‘ಆದೋನಿಯ ನವಾಬರು ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ನೀಡಿರುವ ಭೂಮಿಯನ್ನು ಮಕ್ಕಾ, ಮದೀನಾ, ಇರಾಕ್, ಇರಾನ್‌ನಿಂದ ತಂದು ಕೊಟ್ಟಿದ್ದಲ್ಲ. ಆಕ್ರಮಣ ಮಾಡಿಕೊಂಡಿದ್ದ ನಮ್ಮದೇ ಭೂಮಿಯನ್ನು ಮಠಕ್ಕೆ ನೀಡಿದ್ದಾರೆ’ ಎಂದು ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು.

ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಂತ್ರಾಲಯಕ್ಕೆ ನವಾಬರು ಜಾಗ ನೀಡಿದ್ದರು’ ಎಂಬ ಕಾಂಗ್ರೆಸ್ ನಾಯಕ ಸಿ.ಎಂ.ಇಬ್ರಾಹಿಂ ಅವರ ಹೇಳಿಕೆಗೆ ತಿರುಗೇಟು ನೀಡಿದರು.

ADVERTISEMENT

‘ವಕ್ಫ್ ಮಂಡಳಿಗೆ ಸುಪ್ರೀಂ ಕೋರ್ಟ್‌ಗೂ ಮೀರಿದ ಪರಮಾಧಿಕಾರ ನೀಡುವ ಮೂಲಕ ಕಾಂಗ್ರೆಸ್ ಪಕ್ಷ ಭಾರತವನ್ನು ಇಸ್ಲಾಂ ರಾಷ್ಟ್ರ ಮಾಡಲು ಹೊರಟಿದೆ. ಪ್ರಧಾನಿಗಳಾಗಿದ್ದ ನೆಹರೂ, ಪಿ.ವಿ.ನರಸಿಂಹ ರಾವ್, ಮನಮೋಹನ ಸಿಂಗ್ ಅವರ ಕಾಲಾವಧಿಯಲ್ಲಿ ವಕ್ಫ್ ಮಂಡಳಿಗೆ ಸಂವಿಧಾನ ಮೀರಿದ ಹಕ್ಕುಗಳನ್ನು ನೀಡಿದ್ದರಿಂದ ದೇಶಕ್ಕೆ ಗಂಡಾಂತರ ಬಂದೊದಗಿದೆ. ಕಾಂಗ್ರೆಸ್ ಪಕ್ಷ ಮುಸ್ಲಿಮರ ತುಷ್ಟೀಕರಣದ ಮೂಲಕ ದೇಶದ್ರೋಹಿ ಕೆಲಸ ಮಾಡಿದೆ’ ಎಂದರು.

‘ಇಸ್ಲಾಂಗೆ ಇರುವುದು 1,500 ವರ್ಷಗಳ ಇತಿಹಾಸ ಮಾತ್ರ. ಅದಕ್ಕೂ ಮುಂಚೆ ಪ್ರಪಂಚದಲ್ಲೇ ಇಸ್ಲಾಂ ಇರಲಿಲ್ಲ. ಆಕ್ರಮಣ, ಯುದ್ಧದಿಂದ ಇಸ್ಲಾಂ 57 ರಾಷ್ಟ್ರಗಳಿಗೆ ವಿಸ್ತರಿಸಿದೆ. ವಕ್ಫ್ ಮಂಡಳಿಯು ದೇಶದ ಬಡ ಮುಸ್ಲಿಮರಿಗೆ ಭೂಮಿ, ಶಿಕ್ಷಣ, ಉದ್ಯೋಗ ನೀಡುವ ಆಶಯ ಹೊಂದಿಲ್ಲ. ದೇಶದ 9.40 ಲಕ್ಷ ಎಕರೆ ಭೂಮಿಯನ್ನು ಕಬಳಿಸಿ, ಜನಸಂಖ್ಯೆ ಹೆಚ್ಚಳದ ಮೂಲಕ ಭಾರತದಲ್ಲೂ ಇಸ್ಲಾಂ ಪ್ರತಿಷ್ಠಾಪನೆ ಮಾಡುವುದು ಅದರ ಉದ್ದೇಶ’ ಎಂದು ಮುತಾಲಿಕ್ ಹೇಳಿದರು.

‘ರೈತರ ಕೃಷಿ ಭೂಮಿ, ಗರಡಿ ಮನೆ, ದೇವಸ್ಥಾನ, ಮಠದ ಆಸ್ತಿಗಳನ್ನು ವಕ್ಫ್ ಆಸ್ತಿಗಳೆಂದು ಗುರುತಿಸಲಾಗಿದ್ದು, ವಕ್ಫ್ ವೈರಸ್ ಇಡೀ ಸಮಾಜವನ್ನು ಆವರಿಸಿದೆ. ಇದಕ್ಕೆ ಕಡಿವಾಣ ಹಾಕಲು ಪ್ರಧಾನಿ ನರೇಂದ್ರ ಮೋದಿಯವರು ವಕ್ಫ್ ಕಾಯ್ದೆಗೆ 44 ತಿದ್ದುಪಡಿ ತರಲು ಮುಂದಾಗಿದ್ದಾರೆ. ಇದನ್ನು ಶ್ರೀರಾಮ ಸೇನೆ ಬೆಂಬಲಿಸುವ ಜತೆಗೆ ವಕ್ಫ್ ಭೂ ಕಬಳಿಕೆ ವಿರುದ್ಧ ಜನಜಾಗೃತಿ ಅಭಿಯಾನ ಹಮ್ಮಿಕೊಳ್ಳುತ್ತೇವೆ’ ಎಂದು ಘೋಷಿಸಿದರು.

ಹಿಂದೂ ಯುವತಿಯರಿಗೆ ತ್ರಿಶೂಲ ದೀಕ್ಷೆ: ‘ದೇಶದಲ್ಲಿ ಹಿಂದೂ ಯುವತಿಯರನ್ನು ಅಪಹರಿಸಿ ಲವ್ ಜಿಹಾದ್ ಹೆಸರಲ್ಲಿ ಮೋಸಕ್ಕೆ ತಳ್ಳುವ ದೊಡ್ಡ ಜಾಲ ಕಾರ್ಯಪ್ರವೃತ್ತವಾಗಿದೆ. ಈ ಕುರಿತು ರಾಜ್ಯದ ನಾನಾ ಕಡೆಗಳಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡು ಹಿಂದೂ ಯುವತಿಯರಿಗೆ ತ್ರಿಶೂಲ ದೀಕ್ಷೆ ನೀಡುತ್ತಿದ್ದೇವೆ’ ಎಂದು ಮುತಾಲಿಕ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.