ಹೊಸಪೇಟೆ (ವಿಜಯನಗರ): ಮಲೆನಾಡು ಭಾಗದಲ್ಲಿ ಭಾರಿ ಮಳೆ ಸುರಿಯುತ್ತಿರುವುದರಿಂದ ತುಂಗಭದ್ರಾ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಸತತ ಮೂರನೇ ದಿನವಾದ ಶನಿವಾರ ಸಹ ಲಕ್ಷ ಕ್ಯುಸೆಕ್ ಮೀರಿದ್ದು, 65.11 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.
ಜಲಾಶಯ ಬಹಳ ಬೇಗ ತುಂಬುತ್ತಿರುವುರಿಂದ ಯಾವುದೇ ಕ್ಷಣದಲ್ಲಿ ಜಲಾಶಯದಿಂದ ನದಿಗೆ ನೀರು ಬಿಡುವ ಸಾಧ್ಯತೆ ಇದೆ. ಇದರಿಂದಾಗಿ ನದಿ ಪಾತ್ರದ ಜನರು ಎಚ್ಚರದಿಂದ ಇರಬೇಕು ಎಂದು ತುಂಗಭದ್ರಾ ಮಂಡಳಿ ಶನಿವಾರ ಬೆಳಿಗ್ಗೆ ಸಾರ್ವಜನಿಕ ಪ್ರಕಟಣೆ ಮೂಲಕ ಎಚ್ಚರಿಕೆ ನೀಡಿದೆ.
1,633 ಅಡಿ ಎತ್ತರದ ತುಂಗಭದ್ರಾ ಅಣೆಕಟ್ಟೆಯಲ್ಲಿ ಸದ್ಯ ನೀರಿನ ಮಟ್ಟ 1,621.32 ಅಡಿ ತಲುಪಿದೆ. ಆಣೆಕಟ್ಟೆ ಭರ್ತಿಯಾಗಲು ಇನ್ನು 12 ಅಡಿಯಷ್ಟೇ ಬಾಕಿ ಉಳಿದಿದೆ.
ಜುಲೈ 1ರಂದು ಅಣೆಕಟ್ಟೆಯ ನೀರಿನ ಮಟ್ಟ 1,,584.15 ಅಡಿಯಷ್ಟಿತ್ತು. ಕೇವಲ 10 ದಿನಗಳಲ್ಲಿ ನೀರಿನ ಮಟ್ಟ 37 ಅಡಿಗಳಷ್ಟು ಹೆಚ್ಚಳವಾಗಿದೆ. ಜಲಾಶಯದ ಗರಿಷ್ಠ ನೀರು ಸಂಗ್ರಹ ಸಾಮರ್ಥ್ಯ 105.78 ಟಿಎಂಸಿ ಅಡಿ. ಜುಲೈ 1ರಂದು ಜಲಾಶಯದಲ್ಲಿ 6.78 ಟಿಎಂಸಿ ಅಡಿಯಷ್ಟು ಮಾತ್ರ ನೀರಿತ್ತು. 20 ದಿನದಲ್ಲಿ ನೀರಿನ ಪ್ರಮಾಣ 10 ಪಟ್ಟು ಅಧಿಕವಾಗಿದೆ.
ಜನರಿಗೆ ಎಚ್ಚರಿಕೆ: ‘ಜಲಾಶಯದ ಒಳಹರಿವಿನ ಪ್ರಮಾಣ 1.07 ಲಕ್ಷ ಕ್ಯೂಸೆಕ್‌ನಷ್ಟಿದೆ. ತುಂಗಾ ಆಣೆಕಟ್ಟೆಯಿಂದ ಭಾರಿ ಪ್ರಮಾಣದಲ್ಲಿ ನೀರು ನದಿಗೆ ಹರಿದು ಬರುತ್ತಿರುವುದರಿಂದ ಒಳಹರಿವಿನ ಪ್ರಮಾಣ ಹೆಚ್ಚಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ. ಹೀಗಾಗಿ ತುಂಗಭದ್ರಾ ಆಣೆಕಟ್ಟೆಯ ಸುರಕ್ಷತೆಯ ದೃಷ್ಟಿಯಿಂದ ಯಾವುದೇ ಕ್ಷಣದಲ್ಲಿ ನೀರನ್ನು ನದಿಗೆ ಬಿಡುವ ಸಾಧ್ಯತೆ ಇದೆ. ನದಿ ಪಾತ್ರದ ಜನರು ಎಚ್ಚರದಿಂದ ಇರಬೇಕು ಮತ್ತು ನದಿಗೆ ನೀರು ಬಿಟ್ಟು ಪ್ರವಾಹ ಸ್ಥಿತಿ ಎದುರಾದರೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು’ ಎಂದು ತುಂಗಭದ್ರಾ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಮೋಡ ಮುಸುಕಿದ ವಾತಾವರಣ: ವಿಜಯನಗರ ಜಿಲ್ಲೆಯಲ್ಲಿ ಶನಿವಾರವೂ ಮೋಡ ಮುಸುಕಿದ ವಾತಾವರಣವಷ್ಟೇ ಇದ್ದು, ಕೆಲವೆಡೆ ತುಂತುರು ಮಳೆಯಾಗಿದೆ. ಮಲೆನಾಡು ಭಾಗದಲ್ಲಿ ಹೀಗೆಯೇ ಮಳೆ ಮುಂದುವರಿದರೆ ಇನ್ನು ವಾರದೊಳಗೆ ತುಂಗಭದ್ರಾ ಜಲಾಶಯ ಭರ್ತಿಯಾಗಬಹುದು ಎಂದು ಅಂದಾಜಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.