ADVERTISEMENT

ತುಂಗಭದ್ರಾ ಜಲಾಶಯ: ಒಂದೇ ದಿನದಲ್ಲಿ 7 ಟಿಎಂಸಿ ಅಡಿ ನೀರು ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 18 ಜುಲೈ 2024, 4:58 IST
Last Updated 18 ಜುಲೈ 2024, 4:58 IST
<div class="paragraphs"><p>ತುಂಗಭದ್ರಾ ಜಲಾಶಯ</p></div>

ತುಂಗಭದ್ರಾ ಜಲಾಶಯ

   

ಹೊಸಪೇಟೆ (ವಿಜಯನಗರ): ಜಿಲ್ಲೆಯಲ್ಲಿ ಮಳೆ ಇಲ್ಲದಿದ್ದರೂ ಮಲೆನಾಡು ಭಾಗದಲ್ಲಿ ಉತ್ತಮವಾಗಿ ಮಳೆ ಆಗುತ್ತಿರುವುದರಿಂದ ತುಂಗಭದ್ರಾ ಜಲಾಶಯದಲ್ಲಿ ನೀರು ಸಂಗ್ರಹ ಒಂದೇ ದಿನದಲ್ಲಿ 7 ಟಿಎಂಸಿ ಅಡಿಯಷ್ಟು ಹೆಚ್ಚಳವಾಗಿದೆ.

ಗುರುವಾರ ಬೆಳಿಗ್ಗೆ ಜಲಾಶಯದ ನೀರಿನ ಸಂಗ್ರಹ 46.80 ಟಿಎಂಸಿ ಅಡಿಯಷ್ಟಿದೆ. ಬುಧವಾರ ಇಲ್ಲಿ 39.71 ಟಿಎಂಸಿ ಅಡಿಯಷ್ಟು ನೀರಿನ ಸಂಗ್ರಹವಿತ್ತು.

ADVERTISEMENT

ತುಂಗಾ ಅಣೆಕಟ್ಟೆಯಿಂದ ಭಾರಿ ಪ್ರಮಾಣದಲ್ಲಿ ನೀರು ಹೊರಬಿಡುತ್ತಿರುವುದರಿಂದ ತುಂಗಭದ್ರಾ ಜಲಾಶಯದ ಒಳಹರಿವಿನ ಪ್ರಮಾಣದಲ್ಲಿ ಸಹ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಸರಾಸರಿ ಒಳಹರಿವಿನ ಪ್ರಮಾಣ 82,4891 ಕ್ಯುಸೆಕ್ ಇದ್ದು, ಒಂದು ಹಂತದಲ್ಲಿ ಒಳಹರಿವಿನ ಪ್ರಮಾಣ 1.04 ಲಕ್ಷ ಕ್ಯುಸೆಕ್ ಗೆ ಏರಿಕೆಯಾಗಿತ್ತು.

ಇನ್ನೂ ಮಳೆ ಬರಬೇಕು:

ತುಂಗಭದ್ರಾ ಜಲಾಶಯದ ನೀರಿನ ಗರಿಷ್ಠ ಸಂಗ್ರಹ ಸಾಮರ್ಥ್ಯ 105.78 ಟಿಎಂಸಿ ಅಡಿ. ಸದ್ಯ 46 ಟಿಎಂಸಿ ಅಡಿ ಮಾತ್ರ ನೀರಿನ ಸಂಗ್ರಹವಿದ್ದು, ಜಲಾಶಯ ಭರ್ತಿಯಾಗಲು ಇನ್ನೂ ಸತತ ಎರಡು ವಾರಗಳ ಕಾಲ ಇದೇ ರೀತಿ ಮಳೆ ಸುರಿಯುವ ಅಗತ್ಯ ಇದೆ ಎಂದು ತಜ್ಞರು ಹೇಳಿದ್ದಾರೆ.

ಕಳೆದ ವರ್ಷ ಮುಂಗಾರು ಒಂದು ತಿಂಗಳಷ್ಟು ವಿಳಂಬವಾಗಿ ಆರಂಭವಾಗಿತ್ತು. ಆಗಸ್ಟ್ ಮೊದಲ ವಾರದಲ್ಲಿ ಮಳೆ ಬಹುತೇಕ ನಿಂತು ಹೋಗಿತ್ತು. ಹೀಗಾಗಿ ಕಳೆದ ವರ್ಷ ಜಲಾಶಯದಲ್ಲಿ 89 ಟಿಎಂಸಿ ಅಡಿ ನೀರು ಮಾತ್ರ ಸಂಗ್ರಹವಾಗಿತ್ತು. ಇದರಿಂದಾಗಿ ಕಾಲುವೆಗಳ ಮೂಲಕ ಒಂದು ಬೆಳೆಗೆ ಮಾತ್ರ ನೀರು ಹರಿಸುವುದು ಸಾಧ್ಯವಾಗಿತ್ತು.

ಈ ಬಾರಿ ಜೂನ್ 1ನೇ ತಾರೀಖಿನಿಂದಲೇ ಜಲಾಶಯಕ್ಕೆ ಒಳಹರಿವು ಆರಂಭವಾಗಿದೆ ಮತ್ತು ಸದ್ಯದ ಮಟ್ಟಿಗೆ ಉತ್ತಮ ಮಳೆಯಾಗುವ ಲಕ್ಷಣ ಕಾಣಿಸಿದೆ. ಹೀಗಾಗಿ ಈ ಭಾಗದ ರೈತರು ಆಶಾ ಭಾವನೆಯಲ್ಲಿ ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.