ಹೊಸಪೇಟೆ (ವಿಜಯನಗರ): ‘ಯಾವ ಮೌಢ್ಯವನ್ನೂ ನಂಬುವವ ನಾನಲ್ಲ. ಜನರು ಐದು ವರ್ಷ ಅಧಿಕಾರ ನಡೆಸಲು ಆದೇಶ ನೀಡಿದ್ದಾರೆ. ವಿಜಯನಗರ ಅರಸರ ಕಾಲದ ವೈಭವ ಮತ್ತು ಅಭಿವೃದ್ಧಿ ರಾಜ್ಯದಲ್ಲಿ ಮರಳಿಸುವುದು ನಮ್ಮ ಆದ್ಯತೆಯಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ರಾಜ್ಯಕ್ಕೆ ಕರ್ನಾಟಕ ಎಂಬ ನಾಮಕರಣ ಮಾಡಿ 50 ವರ್ಷ ತುಂಬಿದ ಪ್ರಯುಕ್ತ ಗುರುವಾರ ಹಂಪಿಯ ವಿರೂಪಾಕ್ಷ ದೇವಸ್ಥಾನದ ಎದುರು ಬಸವಣ್ಣ ಮಂಟಪ ಸಮೀಪ ಜ್ಯೋತಿ ರಥಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.
‘ಬಸವಣ್ಣನವರೂ ಸೇರಿ ಶರಣರು ಮೌಢ್ಯದ ವಿರುದ್ಧ ಹೋರಾಡಿ, ಜಾಗೃತಿ ಮೂಡಿಸಿದ್ದರು. ನಾನೂ ಕೂಡ ಮೌಢ್ಯವನ್ನು ಧಿಕ್ಕರಿಸಿ ಈ ನಾಡಿನ ಜನರ ಮೇಲೆ ನಂಬಿಕೆ ಇಟ್ಟಿದ್ದೇನೆ. ದೇವರಲ್ಲಿ, ದೇವರು ಎನ್ನುವ ಶಕ್ತಿಯಲ್ಲಿ ನನಗೆ ನಂಬಿಕೆ ಇದೆ’ ಎಂದು ಸ್ಪಷ್ಟಪಡಿಸಿದರು.
₹ 3000 ಕೋಟಿ ಅನುದಾನ ನೀಡಿದ್ದೇನೆ: ‘ಇದು ಬಸವಣ್ಣನ ನಾಡು. ಕಲ್ಯಾಣ ಕರ್ನಾಟಕ ಎಂದು ಕೇವಲ ಹೆಸರಿಟ್ಟರೆ ಸಾಲದು. ನಿಜವಾದ ಅರ್ಥದಲ್ಲಿ ಈ ಭಾಗದ ಜನರು ಕಲ್ಯಾಣ ಕಾಣಬೇಕು ಎನ್ನುವ ಗುರಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ. ಈ ಉದ್ದೇಶದಿಂದಲೇ 371 (ಜೆ) ಜಾರಿ ಮಾಡಿದೆವು. ಇದರಿಂದ ಈ ಭಾಗಕ್ಕೆ ಹೆಚ್ಚು ಹೆಚ್ಚು ಅನುದಾನ ಹಾಗೂ ಅವಕಾಶಗಳು ಸೃಷ್ಟಿಯಾಗಿವೆ. ನಾನು ಮುಖ್ಯಮಂತ್ರಿ ಆದ ಬಳಿಕ ಬಾಕಿ ಇದ್ದ ಅನುದಾನದ ಜತೆಗೆ ಹೆಚ್ಚುವರಿಯಾಗಿ ಈ ಭಾಗಕ್ಕೆ ₹ 3000 ಕೋಟಿ ಅನುದಾನ ನೀಡಿದ್ದೇನೆ’ ಎಂದರು.
‘ಕನ್ನಡ ಬದುಕನ್ನು ಉನ್ನತೀಕರಿಸುವ ಆಶಯದಿಂದ ಏಕೀಕರಣ ಚಳವಳಿ ನಡೆದು ಹಲವರ ಪ್ರಾಣ ತ್ಯಾಗವನ್ನೂ ಪಡೆದು ವಿಶಾಲ ಕನ್ನಡ ನಾಡು ಉದಯವಾಗಿದೆ. ಕರ್ನಾಟಕ ನಾಮಕರಣಗೊಂಡು 50ನೇ ವರ್ಷಕ್ಕೆ ಬಿಜೆಪಿ ಇಡೀ ವರ್ಷ ಕನ್ನಡ ಸಂಭ್ರಮವನ್ನು ಆಚರಿಸಬೇಕಿತ್ತು. ಅವರು ಆಚರಿಸಲಿಲ್ಲ. ಆದರೆ ನಮ್ಮ ಸರ್ಕಾರ ಬಂದ ತಕ್ಷಣ ಮೊದಲ ಬಜೆಟ್ ನಲ್ಲೇ ‘ಕನ್ನಡ ಸಂಭ್ರಮ-50’ ಅನ್ನು ಘೋಷಿಸಿದೆ. ನಾವು ಕರ್ತವ್ಯಲೋಪ ಮಾಡಲಿಲ್ಲ’ ಎಂದರು.
ಕನ್ನಡ ಕಾವಲು ಸಮಿತಿಯ ಮೊದಲ ಅಧ್ಯಕ್ಷನಾಗಿ ಆಡಳಿತದಲ್ಲಿ ಕನ್ನಡ ಪರಿಣಾಮಕಾರಿಯಾಗಿ ಜಾರಿ ಆಗಲು ರಾಜ್ಯದಾದ್ಯಂತ ಸುತ್ತಾಡಿದೆ. ಎಲ್ಲಾ ಕಚೇರಿಗಳಿಗೆ ಕನ್ನಡ ಟೈಪಿಂಗ್ ಯಂತ್ರವನ್ನು ನೀಡಿ ಐಎಎಸ್ ಅಧಿಕಾರಿಗಳೂ ಕೂಡ ಕನ್ನಡವನ್ನು ಆಡಳಿತ ಭಾಷೆಯಾಗಿ ಬಳಸಲು ಪ್ರೇರಣೆ ನೀಡಿದ್ದೆ ಎಂದು ಸ್ಮರಿಸಿದರು.
‘ಇತರೆ ಭಾಷೆಗಳನ್ನು ಕಲಿಯಿರಿ, ಗೌರವಿಸಿರಿ. ಆದರೆ ಕನ್ನಡದಲ್ಲೇ ವ್ಯವಹರಿಸಿರಿ ಎಂದು ಕರೆ ನೀಡಿದ ಅವರು, ಕನ್ನಡ ಜ್ಯೋತಿಯನ್ನು ರಾಜ್ಯದಾದ್ಯಂತ ಸಂಭ್ರಮದಿಂದ ಸ್ವಾಗತಿಸಿ’ ಎಂದು ಸೂಚನೆ ನೀಡಿದರು.
ಶಾಸಕ ಎಚ್.ಆರ್.ಗವಿಯಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್, ಕನ್ನಡ ಮತ್ತು ಸಂಸ್ಕತಿ ಸಚಿವ ಶಿವರಾಜ ಎಸ್. ತಂಗಡಗಿ, ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಹಲವು ಶಾಸಕರು ಇದ್ದರು.
ವೀರಮಕ್ಕಳ ಜತೆ ಸಿ.ಎಂ ಹೆಜ್ಜೆ
ಸಂಜೆ ವಿರೂಪಾಕ್ಷ ದೇವಸ್ಥಾನಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರೂಪಾಕ್ಷನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ತಾಯಿ ಭುವನೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಸುಮಾರು 50 ಜಾನಪದ ತಂಡಗಳನ್ನು ಒಳಗೊಂಡ ಮೆರವಣಿಗೆಗೆ ಚಾಲನೆ ನೀಡಿ, ಅದರೊಂದಿಗೆ ಹೆಜ್ಜೆ ಹಾಕುತ್ತ ಎದುರು ಬಸವಣ್ಣ ಮಂಟಪದ ಬಳಿಗೆ ಬಂದರು.
ದೇವರಾಜ ಅರಸು ಅವರು 50 ವರ್ಷಗಳ ಹಿಂದೆ ಉರಿಸಿದ್ದು ಎನ್ನಲಾದ ದೀಪಸ್ತಂಭದಲ್ಲೇ ಮುಖ್ಯಮಂತ್ರಿ ಅವರು ಜ್ಯೋತಿ ಬೆಳಗಿದರು ಹಾಗೂ ಇಡೀ ರಾಜ್ಯದಾದ್ಯಂತ ಸಂಚರಿಸಲಿರುವ ಜ್ಯೋತಿ ರಥಯಾತ್ರೆಗೆ ಈ ಮೂಲಕ ಚಾಲನೆ ನೀಡಿದರು. ಕೊನೆಯಲ್ಲಿ ಸಿದ್ದರಾಮಯ್ಯ ಹುಂಡಿಯ ಕಲಾವಿದರಿಂದ ನಡೆದ ವೀರ ಮಕ್ಕಳ ಕುಣಿತದಲ್ಲಿ ತಾವೂ ಪಾಲ್ಗೊಂಡು ಸಂಭ್ರಮಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.