ಹೊಸಪೇಟೆ (ವಿಜಯನಗರ): ರಾಜ್ಯದಲ್ಲಿ ರೈತರ ಜಮೀನುಗಳ ಪಹಣಿ ಹಕ್ಕುಗಳ ಕಾಲಂ-9 ಮತ್ತು 11ರಲ್ಲಿ ವಕ್ಫ್ ಆಸ್ತಿ ಬಗ್ಗೆ ವಿಚಾರಣೆ ಹಂತದಲ್ಲಿರುವುದೆಂದು ತಿಳಿಸಿದ್ದನ್ನು ಹಾಗೂ ವಕ್ಫ್ ಆಸ್ತಿ ಎಂದು ನಮೂದಾಗಿದ್ದನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ವತಿಯಿಂದ ಮಂಗಳವಾರ ಇಲ್ಲಿ ಪ್ರತಿಭಟನೆ ನಡೆಸಲಾಯಿತು.
ಇಲ್ಲಿನ ಪುನೀತ್ ರಾಜ್‌ಕುಮಾರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಪದಾಧಿಕಾರಿಗಳು, ಬಳಿಕ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಕಳುಹಿಸಿಕೊಟ್ಟರು.
ಜಿಲ್ಲೆಯ ಕೊಟ್ಟೂರು ಭಾಗದಲ್ಲಿ ಕೆಲ ರೈತರಿಗೆ ಯಾವುದೇ ಮುನ್ಸೂಚನೆ ನೀಡದೆ ನೋಟಿಸ್‍ಗಳನ್ನು ನೀಡಲಾಗಿದೆ, ಹೊಸಪೇಟೆಯಲ್ಲಿ ಸಹ ಕೆಲವು ರೈತರಿಗೆ ನೋಟಿಸ್ ನೀಡಲಾಗಿದೆ. ಹೀಗೆ ನೋಟಿಸ್ ನೀಡಿದ್ದರ ಬಗ್ಗೆ ಯಾರಿಗೂ ಹೇಳದಂತೆ ಅಧಿಕಾರಿಗಳು ದಬ್ಬಾಳಿಕೆ ನಡೆಸುತ್ತಿದ್ದಾರೆ. ಇದರಿಂದಾಗಿಯೇ ನೋಟಿಸ್ ಬಗ್ಗೆ ಯಾವ ರೈತರೂ ಬಹಿರಂಗವಾಗಿ ಮಾತನಾಡುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ಷೇಪಿಸಿದರು.
ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಟಿ.ನಾಗರಾಜ್ ಮಾತನಾಡಿ, ‘2021ರಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಕೃಷಿ ಕಾಯ್ದೆಯನ್ನು ರಾಜ್ಯದಲ್ಲಿ ತಂದಾಗ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ನಮ್ಮ ಸರ್ಕಾರ ಬಂದು 24 ತಾಸಿನೊಳಗೆ ನಾನು ಕೃಷಿ ಕಾಯ್ದೆಯನ್ನು ಹಿಂಪಡೆಯುತ್ತೇನೆ ಎಂದು ಮಾತುಕೊಟ್ಟಿದ್ದರು. ಅದರಂತೆ ನಡೆದುಕೊಂಡಿಲ್ಲ, ಇದೀಗ ರೈತರಿಗೆ ಮೋಸ ಮಾಡುವ ದೃಷ್ಟಿಯಿಂದ ಪಹಣಿ ಕಾಲಂ-9 ಮತ್ತು 11ರಲ್ಲಿ ವಕ್ಪ್ ಆಸ್ತಿ ಎಂದು ನಮೂದು ಮಾಡಿ ರೈತರ ಗಾಯದ ಮೇಲೆ ಬರೆ ಎಳೆದಿದ್ದಾರೆ’ ಎಂದರು.
‘ಕಾಂಗ್ರೆಸ್ ಸರ್ಕಾರ ಇದ್ದಕ್ಕಿದ್ದಂತೆ ಏಕಾಏಕಿ ರೈತರ ಭೂಮಿಗಳನ್ನು ಕಬಳಿಸುವ ಹುನ್ನಾರ ನಡೆಸುತ್ತಿದೆ. ಯಾವುದೇ ಕಾರಣಕ್ಕೂ ರೈತರು ತಮ್ಮ ಜಮೀನನ್ನು ಬಿಟ್ಟುಕೊಡಬಾರದು ಮತ್ತು ಬಿಟ್ಟುಕೊಡುವ ಮಾತೇ ಇಲ್ಲ. ವಕ್ಫ್ ಆಸ್ತಿ ಎಂದು ನಮೂದಾಗಿದ್ದನ್ನು ಕೂಡಲೇ ರದ್ದುಗೊಳಿಸಿ ಸರಿಪಡಿಸಬೇಕು. ಇಲ್ಲದಿದ್ದಲ್ಲಿ ರೈತರು ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ. ಇದರಿಂದ ರೈತರಿಗೆ ಏನಾದರೂ ತೊಂದರೆ ಉಂಟಾದರೆ ಇದಕ್ಕೆ ಕಾಂಗ್ರೆಸ್ ಸರ್ಕಾರವೇ ನೇರ ಹೊಣೆಯಾಗುತ್ತದೆ’ ಎಂದು ಅವರು ಎಚ್ಚರಿಸಿದರು.
ತಾಲ್ಲೂಕು ಘಟಕದ ಅಧ್ಯಕ್ಷ ಸಣ್ಣಕ್ಕಿ ರುದ್ರಪ್ಪ ಮಾತನಾಡಿ, ‘ಸಿಎಂ ಸಿದ್ದರಾಮಯ್ಯ ಅವರು ತಕ್ಷಣ ವಕ್ಫ್ ಸಚಿವ ಜಮೀರ್ ಅಹಮ್ಮದ್ ಖಾನ್ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು. ಇಲ್ಲವಾದಲ್ಲಿ ವಿಜಯನಗರ ಜಿಲ್ಲೆಗೆ ಬಂದರೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಅವರಿಗೆ ಕಪ್ಪು ಭಾವುಟ ಪ್ರದರ್ಶನ ಮಾಡಲಾಗುತ್ತದೆ’ ಎಂದರು.
ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಮೆಟ್ರಿ ಜಡೆಪ್ಪ ಮಾತನಾಡಿ, ‘ಸರ್ಕಾರ ಯಾವುದೇ ಮುನ್ಸೂಚನೆ ನೀಡದೇ ರೈತರಿಗೆ ವಕ್ಪ್ ಕಡೆಯಿಂದ ನೇರವಾಗಿ ನೋಟಿಸ್ ನೀಡಿದ್ದು ಅಕ್ಷಮ್ಯ ಅಪರಾಧ’ ಎಂದರು.
ಪದಾಧಿಕಾರಗಳಾದ ಆರ್.ಆರ್.ತಾಯಪ್ಪ, ವಿ.ಗಾಳೆಪ್ಪ, ರಾಮಾಂಜಿನಿ, ಸತೀಶ, ನಾಗೇಶ, ಜೆ.ಜಿ.ವಿರೂಪಾಕ್ಷಿ, ಎಲ್.ನಾಗೇಶ್, ಕೆ.ಸುರೇಶ, ಮನಸಾಲಿ ರಾಘವೇಂದ್ರ, ಸಾಗರ್, ಮೂರ್ತಿ, ಬಾಬು ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.