ಹೊಸಪೇಟೆ (ವಿಜಯನಗರ): ಇಲ್ಲಿಗೆ ಸಮೀಪದ ‘ಹಂಪಿ ಮೃಗಾಲಯ’ದಲ್ಲಿ ರಾತ್ರಿ ವೇಳೆ ಸಫಾರಿ ವ್ಯವಸ್ಥೆ ಜಾರಿಯಾಗುವ ಸಾಧ್ಯತೆಯಿದ್ದು, ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಕಾರ್ಯರೂಪಕ್ಕೆ ಬರಲಿದೆ.
‘ಹಂಪಿ ಸುತ್ತಮುತ್ತ ಭಾರಿ ಬಿಸಿಲು ಇದೆ. ಹೀಗಾಗಿ ನೈಟ್ ಸಫಾರಿಗೆ ಅವಕಾಶವಿದೆಯೇ ಎಂದು ಕೇಂದ್ರ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೇಳಿದ್ದು, ಒಂದು ಮಾರ್ಗಸೂಚಿ ಸಿದ್ಧಪಡಿಸುತ್ತಿದ್ದಾರೆ’ ಎಂದು ರಾಜ್ಯ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಪಿ.ರವಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಕೇಂದ್ರ ಈ ರೀತಿ ಆಸಕ್ತಿ ತೋರಿಸಿದ ಕಾರಣ ರಾಜ್ಯದ ಮೊದಲ ನೈಟ್ ಸಫಾರಿಯನ್ನು ಹಂಪಿಯಲ್ಲೇ ಆರಂಭಿಸಬೇಕು ಎಂಬ ಪ್ರಸ್ತಾವವನ್ನು ನಾವು ಕೇಂದ್ರ ಮೃಗಾಲಯ ಪ್ರಾಧಿಕಾರಕ್ಕೆ ಸಲ್ಲಿಸಿದ್ದೇವೆ. ಇದಕ್ಕೆ ಪೂರಕವಾಗಿ ಹಂಪಿಯಲ್ಲಿ ರಾಷ್ಟ್ರಮಟ್ಟದ ಕಾರ್ಯಾಗಾರ ನಡೆಸುತ್ತೇವೆ. ನಂತರ ವಿಶೇಷ ಅನುಮತಿ ಪಡೆದು ನೈಟ್ ಸಫಾರಿ ಆರಂಭಿಸುತ್ತೇವೆ’ ಎಂದು ಅವರು ವಿವರಿಸಿದರು.
‘ಹಂಪಿ ಮೃಗಾಲಯ 350 ಎಕರೆ ಪದೇಶದಲ್ಲಿ ವ್ಯಾಪಿಸಿಕೊಂಡಿದೆ. ಇಲ್ಲಿ 700 ಎಕರೆಯಷ್ಟು ಅರಣ್ಯವಿದ್ದರೂ ಅಷ್ಟೂ ಪ್ರದೇಶಕ್ಕೆ ಮೃಗಾಲಯ ವಿಸ್ತರಿಸುವ ಯೋಜನೆ ಇಲ್ಲ. ಉಳಿಕೆ ಪ್ರದೇಶವನ್ನು ಬಫರ್ ಜೋನ್ ಆಗಿ ಉಳಿಸಿಕೊಳ್ಳುತ್ತೇವೆ. 350 ಎಕರೆ ಪ್ರದೇಶದಲ್ಲಿ ₹60 ಕೋಟಿ ಖರ್ಚು ಮಾಡಿದರೆ ಅತ್ಯುತ್ತಮ ಮೃಗಾಲಯವನ್ನಾಗಿ ಅಭಿವೃದ್ಧಿಪಡಿಸಬಹುದು. ಆ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ’ ಎಂದರು.
ಮೃಗಾಲಯದಲ್ಲಿ ಸಫಾರಿ: ಸಾಮಾನ್ಯವಾಗಿ ಮೃಗಾಲಯದಲ್ಲಿ ಸಫಾರಿ ಇರುವುದಿಲ್ಲ. ಸಫಾರಿ ವ್ಯವಸ್ಥೆ ಇದ್ದರೆ ಅದನ್ನು ವನ್ಯಜೀವಿ ಧಾಮ ಎಂದು ಕರೆಯಲಾಗುತ್ತದೆ. ಹಂಪಿ ಮೃಗಾಲಯದಲ್ಲಿ ಈ ಎರಡೂ ವ್ಯವಸ್ಥೆಗಳು ಒಂದೇ ಕಡೆ ಇವೆ. ಮೊದಲು ಸಫಾರಿಯಲ್ಲಿ ಸುತ್ತಿದ ಬಳಿಕ, ಮೃಗಾಲಯಕ್ಕೆ ಭೇಟಿ ನೀಡುವ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ‘ಅಟಲ್ ಬಿಹಾರಿ ವಾಜಪೇಯಿ ವನ್ಯಜೀವಿ ಧಾಮ’ ಎಂಬ ಹೆಸರಿನ ಈ ಪ್ರವಾಸಿ ತಾಣ ಹಂಪಿ ಮೃಗಾಲಯ ಎಂದೂ ಹೆಸರಾಗಿದೆ.
ಹಂಪಿ ಮೃಗಾಲಯದ ನಿರ್ಮಾಣ ಕಾರ್ಯ 2013ರಲ್ಲಿ ಆರಂಭಗೊಂಡು 2017ರಲ್ಲಿ ಕೊನೆಗೊಂಡಿತ್ತು. ಕಲ್ಯಾಣ ಕರ್ನಾಟಕ ಪ್ರದೇಶದ ಏಕೈಕ ಸಫಾರಿ ಸ್ಥಳ ಇದಾಗಿದೆ.
‘ರಾಜ್ಯದ ಪ್ರಮುಖ 9 ಮೃಗಾಲಯಗಳಿಗೆ ಕಳೆದ ಆರ್ಥಿಕ ವರ್ಷದಲ್ಲಿ ₹107 ಕೋಟಿ ವರಮಾನ ಬಂದಿದೆ. ಖರ್ಚು ಅದಕ್ಕೂ ಹೆಚ್ಚಿದೆ. ಮೈಸೂರು ಮತ್ತು ಬನ್ನೇರುಘಟ್ಟ ಮೃಗಾಲಯಗಳು ಆರ್ಥಿಕವಾಗಿ ಸ್ವಾವಲಂಬಿಯಾಗಿವೆ. ಕಳೆದ ವರ್ಷ ರಾಜ್ಯದ ಮೃಗಾಲಯಗಳಿಗೆ 65 ಲಕ್ಷ ಮಂದಿ ಭೇಟಿ ನೀಡಿದ್ದಾರೆ. ಇದು ಉತ್ತಮ ಬೆಳವಣಿಗೆ’ ಎಂದು ಬಿ.ಪಿ.ರವಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.