ಹೊಸಪೇಟೆ (ವಿಜಯನಗರ): ನಂಜುಂಡಪ್ಪ ವರದಿಯಂತೆ ಹಿಂದುಳಿದ ವಿಧಾನಸಭಾ ಕ್ಷೇತ್ರಗಳ ಅಭಿವೃದ್ಧಿಗೆ ಸಂದಾಯವಾಗಬೇಕಿದ್ದ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ (ಕೆಕೆಆರ್‌ಡಿಬಿ) ಅನುದಾನದಿಂದ ವಿಜಯನಗರ ವಿಧಾನಸಭಾ ಕ್ಷೇತ್ರ ವಂಚನೆಗೊಳ್ಳುತ್ತಲೇ ಬಂದಿದ್ದು, ಈ ಬಾರಿಯಾದರೂ ಅನ್ಯಾಯ ಕೊನೆಗೊಂಡೀತೇ ಎಂಬ ನಿರೀಕ್ಷೆಯಲ್ಲಿ ಜನರಿದ್ದಾರೆ.
ಬುಧವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಕೆಡಿಪಿ ಸಭೆ ನಡೆಯಲಿದ್ದು, ಕೆಕೆಆರ್‌ಡಿಬಿ ನಿಧಿಯನ್ನು ವಿಜಯನಗರ ವಿಧಾನಸಭಾ ಕ್ಷೇತ್ರಕ್ಕೆ ಹೇಗೆ ಹಂಚಿಕೆ ಮಾಡುತ್ತಾರೆ ಎಂಬ ಕುತೂಹಲ ನೆಲೆಸಿದೆ.
ವಿಜಯನಗರ ಕ್ಷೇತ್ರ ಮೂಲತಃ ಮುಂದುವರಿದ ವಿಧಾನಸಭಾ ಕ್ಷೇತ್ರ. ಆದರೆ 2008ರಲ್ಲಿ ಕ್ಷೇತ್ರ ಮರುವಿಂಗಡಣೆ ಅದಾಗ ಹಲವು ಹಿಂದುಳಿದ ಹಳ್ಳಿಗಳು ಈ ಕ್ಷೇತ್ರದ ವ್ಯಾಪ್ತಿಗೆ ಬಂದವು. ಸಹಜವಾಗಿಯೇ ವೇಗವಾಗಿ ಓಡುತ್ತಿದ್ದ ಕುದುರೆಯ ಕಾಲಿಗೆ ದೊಡ್ಡ ಕಲ್ಲು ಕಟ್ಟಿದಂತಹ ಪರಿಸ್ಥಿತಿ ಬಂದೊದಗಿದೆ. ಹಿಂದುಳಿದ ಹಳ್ಳಿ ಸೇರ್ಪಡೆಯಾದ ಮೇಲೆ ವಿಧಾನಸಭಾ ಕ್ಷೇತ್ರ ಹಿಂದುಳಿದಿದೆ ಎಂಬ ಹಣಪಟ್ಟಿ ಬರಲಿಲ್ಲ, ಬದಲಿಗೆ ಅನುದಾನ ಬಹಳ ಕಡಿಮೆ ದೊರೆತು ಪರೋಕ್ಷವಾಗಿ ಮುಂದುವರಿದ ಕ್ಷೇತ್ರವಾಗಿಯೇ ಕೆಕೆಆರ್‌ಡಿಬಿ ಪರಿಗಣಿಸುವಂತಾಯಿತು ಎಂದು ಶಾಸಕ ಎಚ್.ಆರ್.ಗವಿಯಪ್ಪ ಅವರ ಕಚೇರಿ ಮೂಲಗಳು ತಿಳಿಸಿವೆ.
ಕೆಕೆಆರ್‌ಡಿಬಿಯಿಂದ ವಿಜಯನಗರ ಕ್ಷೇತ್ರಕ್ಕೆ ಕಳೆದ ವರ್ಷ ದೊರೆತ ಅನುದಾನ ಕೇವಲ ₹6 ಕೋಟಿ. ಆದರೆ ಹಗರಿಬೊಮ್ಮನಹಳ್ಳಿ, ಹಡಗಲಿ, ಕೂಡ್ಲಿಗಿ ಕ್ಷೇತ್ರಗಳಿಗೆ ₹40 ಕೋಟಿಗೂ ಅಧಿಕ ಅನುದಾನ ದೊರೆತಿದೆ.
ಅನುದಾನ ಇಲ್ಲದ್ದರ ಫಲ: ಕೆಕೆಆರ್‌ಡಿಬಿಯಿಂದ ಅನುದಾನ ದೊರೆಯದೆ ಇರುವುದರ ಫಲ ಕ್ಷೇತ್ರದಾದ್ಯಂತ ದೊಡ್ಡದಾಗಿ ಕಾಣಿಸುತ್ತಿದೆ. 250 ಹಾಸಿಗೆಯ ಆಸ್ಪತ್ರೆ ಕಟ್ಟಡ ಕಾರ್ಯ ಕುಂಟುತ್ತ ಸಾಗಿದೆ. ಜಿಲ್ಲಾಡಳಿತ ಭವನಕ್ಕೆ ಇನ್ನೂ ಚಾಲನೆ ಸಿಕ್ಕಿಲ್ಲ. 100 ಹಾಸಿಗೆ ಆಸ್ಪತ್ರೆ ಮೇಲ್ದರ್ಜೆಗೆ ಏರಿಸುವ ಪ್ರಯತ್ನ ಆರಂಭಬಾಗಿಯೇ ಇಲ್ಲ. ಒಂದು ಸರ್ಕಾರಿ ಎಂಜಿನಿಯರಿಂಗ್ ಕಾಲೇಜು, ಕಾನೂನು ಕಾಲೇಜು, ಜಿಲ್ಲಾ ನ್ಯಾಯಾಲಯ ಸಂಕೀರ್ಣ ನಿರ್ಮಿಸುವುದು ಸಾಧ್ಯವಾಗಿಲ್ಲ.
ಕೆಕೆಆರ್‌ಡಿಬಿ ಅನುದಾನದ ಲಾಭ ಇಲ್ಲದ ಕ್ಷೇತ್ರ ಕಳೆದ ವರ್ಷ ಸಿಕ್ಕಿದ್ದು ಕೇವಲ ₹6 ಕೋಟಿ ಅನುದಾನ ಹಲವು ಯೋಜನೆಗಳು ದುಡ್ಡಿಲ್ಲದೆ ಸ್ಥಗಿತ
ಸೂಕ್ತ ಅನುದಾನ ದೊರೆತರೆ ಮಾತ್ರ ಜಿಲ್ಲಾ ಕೇಂದ್ರ ಮತ್ತು ಕ್ಷೇತ್ರದ ಅಭಿವೃದ್ಧಿ ಸಾಧ್ಯ ಈ ಬಾರಿ ಹೆಚ್ಚಿನ ಅನುದಾನ ತರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ-ಎಚ್.ಆರ್.ಗವಿಯಪ್ಪ ಶಾಸಕ
‘ಉಸ್ತುವಾರಿ ಬೇಕು ಅಭಿವೃದ್ಧಿ ಬೇಡ’
‘ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ಜಿಲ್ಲೆಯ ಉಸ್ತುವಾರಿ ಬೇಕು ಅಭಿವೃದ್ಧಿಗೆ ಮಾತ್ರ ತಲೆ ಕೊಡುವುದು ಬೇಡ ಎಂಬ ಧೋರಣೆ ಇದ್ದಂತಿದೆ. ಸಚಿವರು ಎರಡು ತಿಂಗಳಿಗೋ ಮೂರು ತಿಂಗಳಿಗೋ ಒಮ್ಮೆ ಬಂದು ಹೋಗುವುದು ಇದನ್ನೇ ಸೂಚಿಸುತ್ತದೆ. ಜಿಲ್ಲೆಯ ಉಸ್ತುವಾರಿ ಬೇಕು ಎಂದಾದರೆ ಅಭಿವೃದ್ಧಿಗೂ ಗಮನ ಹರಿಸಬೇಕು’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಕಾಂಗ್ರೆಸ್ ಮುಖಂಡರೊಬ್ಬರು ಖಾರವಾಗಿಯೇ ನುಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.