ADVERTISEMENT

ಹಂಪಿ ಕನ್ನಡ ವಿಶ್ವವಿದ್ಯಾಲಯ: ವರ್ಷ ಕಳೆದರೂ ಬಗೆಹರಿಯದ ಹಣದ ಬಿಕ್ಕಟ್ಟು

ಎಂ.ಜಿ.ಬಾಲಕೃಷ್ಣ
Published 7 ಡಿಸೆಂಬರ್ 2023, 3:29 IST
Last Updated 7 ಡಿಸೆಂಬರ್ 2023, 3:29 IST
ಹಂಪಿ ಕನ್ನಡ ವಿಶ್ವವಿದ್ಯಾಲಯ
ಹಂಪಿ ಕನ್ನಡ ವಿಶ್ವವಿದ್ಯಾಲಯ   

ಹೊಸಪೇಟೆ (ವಿಜಯನಗರ): ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯು (ಕೆಕೆಆರ್‌ಡಿಬಿ) ಮುಖ್ಯಮಂತ್ರಿಗಳ ವಿವೇಚನಾ ನಿಧಿಯಡಿ (ಸಿಎಂಡಿಕ್ಯು) ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಎಷ್ಟು ಹಣ ನೀಡುವುದು ಬಾಕಿ ಇದೆ ಎಂಬ ಗೊಂದಲ ಒಂದು ವರ್ಷದ ಬಳಿಕವೂ ಮುಂದುವರಿದಿದೆ.

2022ರ ಏಪ್ರಿಲ್ 16ರಂದು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಶ್ವವಿದ್ಯಾಲಯದ ಆರ್ಥಿಕ ಬಿಕ್ಕಟ್ಟು ಅರಿತು ಕೆಕೆಆರ್‌ಡಿಬಿಯಿಂದ ₹20 ಕೋಟಿ ವಿಶೇಷ ಅನುದಾನ ಘೋಷಿಸಿದ್ದರು. ಅದು ತಕ್ಷಣವೇ ಕಾರ್ಯಗತಗೊಂಡು ತಿಂಗಳೊಳಗೆ ₹19.85 ಕೋಟಿಯ ಕ್ರಿಯಾಯೋಜನೆ ಸಿದ್ಧಗೊಂಡು ಎಂಟು ವಿವಿಧ ಕಾಮಗಾರಿಗಳು ಆರಂಭಗೊಂಡವು. 

ಕೆಕೆಆರ್‌ಡಿಬಿಯಿಂದ ದುಡ್ಡು ಮಂಜೂರು ಆಗುತ್ತಿದ್ದಂತೆಯೇ ತಿಂಗಳ ಆರ್ಥಿಕ ನೆರವಿಗಾಗಿ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರಗೊಂಡಿತು. ಒತ್ತಡಕ್ಕೆ ಸಿಲುಕಿದ ಅಂದಿನ ಕುಲಸಚಿವರು, 2022ರ ಸೆಪ್ಟೆಂಬರ್ 16ರಂದು ಹೆಚ್ಚುವರಿಯಾಗಿ ₹15.58 ಕೋಟಿ ಅನುದಾನ ನೀಡಲು ಕೋರಿ ಸರ್ಕಾರಕ್ಕೆ ಪತ್ರ ಬರೆದರು. ಆದರೆ, ಸರ್ಕಾರ ಈ ಎರಡನೇ ಪತ್ರವನ್ನು ತಪ್ಪಾಗಿ ಅರ್ಥೈಸಿಕೊಂಡು ಮೊದಲು ಮಂಜೂರು ಮಾಡಿದ್ದ ₹19.85 ಕೋಟಿಯ ಕ್ರಿಯಾಯೋಜನೆ ರದ್ದುಪಡಿಸಿ, ಎರಡನೇ ಬಾರಿ ಸಲ್ಲಿಸಿದ ₹15.58 ಕೋಟಿ ಕ್ರಿಯಾಯೋಜನೆಗೆ ಅನುಮತಿ ನೀಡಿತು. ಆದರೆ, ಆಗಲೇ ಎರಡು ಕಾಮಗಾರಿಗಳು ಪೂರ್ಣಗೊಂಡು, 6 ಕಾಮಗಾರಿಗಳು ಶೇ 40ರಷ್ಟು ಪೂರ್ಣಗೊಂಡಿದ್ದವು.

ADVERTISEMENT
ಸಿಎಂ ವಿವೇಚನಾ ನಿಧಿಯಡಿಯಲ್ಲಿ ಸಿದ್ಧಪಡಿಸಲಾದ ಮೂಲ ಕ್ರಿಯಾಯೋಜನೆಗೆ ಸರ್ಕಾರ ತಕ್ಷಣ ಅನುಮತಿ ನೀಡಿ ವಿಶ್ವವಿದ್ಯಾಲಯವನ್ನು ದೊಡ್ಡ ಸಂಕಷ್ಟದಿಂದ ಪಾರು ಮಾಡಬೇಕು.
ಪ್ರೊ.ಡಿ.ವಿ.ಪರಮಶಿವಮೂರ್ತಿ, ಕುಲಪತಿ, ಹಂಪಿ ಕನ್ನಡ ವಿಶ್ವವಿದ್ಯಾಲಯ

‘ಕಾಮಗಾರಿಗಳು ಅರ್ಧಕ್ಕೇ ನಿಂತಿವೆ. ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳಿಗೆ ತಿಂಗಳ ಆರ್ಥಿಕ ನೆರವಿಗಾಗಿ ₹4.50 ಕೋಟಿ, ಕೆಕೆಆರ್‌ಡಿಬಿ ಅಪೂರ್ಣ ಕಾಮಗಾರಿ ಪೂರ್ಣಗೊಳಿಸಲು ಬಿಡುಗಡೆ ಆಗಬೇಕಿರುವ ₹12.03 ಕೋಟಿ ಸೇರಿ ₹25.32 ಕೋಟಿ ಆರ್ಥಿಕ ಕೊರತೆ ಇದೆ. ಶೀಘ್ರ ಅನುದಾನ ಬಿಡುಗಡೆಗೆ ರಾಜ್ಯ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು’ ಎಂದು ಹಂಪಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಡಿ.ವಿ.ಪರಮಶಿವಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

‘2022ರ ನವೆಂಬರ್‌ 21ರ ಆದೇಶದ ಪೂರ್ವದಲ್ಲಿ ಕಾಮಗಾರಿ ಪೂರ್ಣಗೊಂಡು ಹಣ ಪಾವತಿಸಿದ್ದಲ್ಲಿ ಉಳಿದ ಅನುದಾನವನ್ನು ಮಂಡಳಿಯಿಂದ 2023–24ನೇ ಸಾಲಿನ ಕ್ರಿಯಾಯೋಜನೆಯಲ್ಲಿ ಸೇರಿಸಿಕೊಳ್ಳಬಹುದು ಎಂದು ಕೆಕೆಆರ್‌ಡಿಬಿ ಹೆಚ್ಚುವರಿ ನಿರ್ದೇಶಕರು ವಿಶ್ವವಿದ್ಯಾಲಯಕ್ಕೆ ಪತ್ರ ಬರೆದಿದ್ದಾರೆ. ಮುಖ್ಯಮಂತ್ರಿಯವರು ಸೂಚನೆ ನೀಡಬೇಕಿದೆ’ ಎಂದರು.

ಗೊಂದಲ ಯಾಕಾಗಿ?

ಹಂಪಿ ವಿಶ್ವವಿದ್ಯಾಲಯವು ಸರ್ಕಾರ ಕೆಕೆಆರ್‌ಡಿಬಿ ಜತೆಗೆ ನಡೆಸಿದ ಪತ್ರ ವ್ಯವಹಾರಗಳ ಕಡತಗಳನ್ನು ಪ್ರಕಾರ ಸರ್ಕಾರಕ್ಕೆ ವಾಸ್ತವ ಸ್ಥಿತಿ ಮನವರಿಕೆಯಾಗಿಲ್ಲ. ಸರ್ಕಾರದ ಹೊಸ ಆದೇಶದಲ್ಲಿ ₹4 ಕೋಟಿಯಷ್ಟು ಖೋತಾ ಆದುದ್ದನ್ನು ಕಂಡ ಬಳಿಕ ಹಳೆಯ ಕ್ರಿಯಾಯೋಜನೆಯನ್ನೇ (₹19.85 ಕೋಟಿ) ಮತ್ತೆ ಮಾನ್ಯ ಮಾಡಿ ಎಂದು ವಿಶ್ವವಿದ್ಯಾಲಯ ಒತ್ತಾಯಿಸಿದೆ’ ಎಂದು ಮೂಲಗಳು ಹೇಳುತ್ತಿವೆ. ‘ವಿಶ್ವವಿದ್ಯಾಲಯವೇ ಗೊಂದಲ ಸೃಷ್ಟಿಸಿದೆ’ ಎಂದು ಕೆಕೆಆರ್‌ಡಿಬಿ ಹೇಳಿದರೆ ‘ಆರು ತಿಂಗಳ ಬಳಿಕ ಸರ್ಕಾರದ ಹೊಸ ಆದೇಶ ಬರುವ ವೇಳೆಗೆ ಮೂಲ ಕ್ರಿಯಾಯೋಜನೆಯಂತೆ ಕಾಮಗಾರಿ ಆರಂಭವಾಗಿದ್ದವು. ಇದು ಹೇಗೆ ತಪ್ಪು ಆಗುತ್ತದೆ’ ಎಂದು ವಿಶ್ವವಿದ್ಯಾಲಯ ಪ್ರಶ್ನಿಸಿದೆ.

ಅಂಕಿ ಅಂಶ

₹25.32 ಕೋಟಿ ಹಂಪಿ ವಿಶ್ವವಿದ್ಯಾಲಯಕ್ಕೆ ಅಗತ್ಯವಿರುವ ಅನುದಾನ ₹10.34 ಕೋಟಿ ಕೆಕೆಆರ್‌ಡಿಬಿಯಿಂದ ಬಿಡುಗಡೆಯಾದ ಸಿಎಂ ವಿವೇಚನಾ ನಿಧಿ ₹10.41 ಕಾಮಗಾರಿಗಳಿಗೆ ಶಿಷ್ಯವೇತನಕ್ಕೆ ಪಾವತಿಸಿರುವ ಮೊತ್ತ ₹9.51 ಕೋಟಿ ಮೂಲ ಕ್ರಿಯಾಯೋಜನೆಯಂತೆ ಕೆಕೆಆರ್‌ಡಿಬಿಯಿಂದ ಬರಬೇಕಾದ ಮೊತ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.