ಕೊಟ್ಟೂರು (ವಿಜಯನಗರ ಜಿಲ್ಲೆ): ‘ಸೀಮಿತ ಸಂಖ್ಯೆಯ ಜನರೊಂದಿಗೆ ಕೊಟ್ಟೂರಿನ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವ ನಡೆಸಲಾಗುವುದು. ಜಿಲ್ಲಾಡಳಿತ ವಿಧಿಸುವ ಷರತ್ತುಗಳಿಗೆ ಧಕ್ಕೆಯಾಗದಂತೆ ಭಕ್ತರು ನಡೆದುಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಅನಿರುದ್ದ್ ಶ್ರವಣ್ ಪಿ. ತಿಳಿಸಿದರು.
ಪಟ್ಟಣದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಗುರುವಾರ ಆಯೋಜಿಸಿದ್ದ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲಾಡಳಿತ ನೀಡುವ ಪಾಸ್ ಹೊಂದಿದವರಿಗಷ್ಟೇ ರಥ ಎಳೆಯಲು ಅವಕಾಶವಿರುತ್ತದೆ. ಹೊರಗಿನ ಭಕ್ತರಿಗೆ ನಿರ್ಬಂಧ ವಿಧಿಸಲಾಗಿದೆ. ಪಾದಯಾತ್ರಿಗಳಿಗೆ ಅವಕಾಶ ಇರುವುದಿಲ್ಲ ಎಂದರು.
ಜಾತ್ರೆಯಲ್ಲಿ ಅಂಗಡಿ ಮುಂಗಟ್ಟುಗಳು ಹಾಗೂ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ಇರುವುದಿಲ್ಲ. ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಶಾಸಕ ಎಲ್.ಬಿ.ಪಿ. ಭೀಮ ನಾಯ್ಕ ಮಾತನಾಡಿ, ಸರ್ಕಾರದ ಆದೇಶ ಪಾಲಿಸುವುದು ನಮ್ಮೆಲ್ಲರ ಕರ್ತವ್ಯ. ಸ್ವಾಮಿಯ ಕೈಂಕರ್ಯಗಳಿಗೆ ಧಕ್ಕೆಯಾಗದಂತೆ ಸಂಪ್ರದಾಯದ ಪ್ರಕಾರ ಜಾತ್ರೆ ಮುಗಿಸಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಅರುಣ್ ಮಾತನಾಡಿ, ರಥೋತ್ಸವ ಸಂದರ್ಭದಲ್ಲಿ ಕಾನೂನು ನಿಯಮಗಳನ್ನು ಪಾಲಿಸಬೇಕು. ತಪ್ಪಿದಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಶಂಕರ ಸ್ವಾಮೀಜಿ, ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಭಾರತಿ ಸುಧಾಕರಗೌಡ ಪಾಟೀಲ, ಮುಖಂಡರಾದ ಎಂ.ಎಂ.ಜೆ. ಹರ್ಷವರ್ಧನ್, ಪಿ.ಎಚ್.ದೊಡ್ಡರಾಮಣ್ಣ, ಸಾವಜಿ ರಾಜೇಂದ್ರಪ್ರಸಾದ್, ವಿ.ಟಿ.ತಿಪ್ಪೇಸ್ವಾಮಿ, ದೇವರಮನಿ ಶಿವಚರಣ್, ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರಾದ ಚಂದ್ರಶೇಖರಯ್ಯ, ಪ್ರಕಾಶ್ ರಾವ್, ಡಿವೈಎಸ್ಪಿ ಹರೀಶ್, ತಹಶೀಲ್ದಾರ್ ಎಂ.ಕುಮಾರಸ್ವಾಮಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ನಸರುಲ್ಲಾ, ಧರ್ಮಕರ್ತ ಸಿ.ಎಚ್.ಎಂ.ಗಂಗಾಧರಯ್ಯ, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಎನ್. ಭರಮಣ್ಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.