ಕೊಟ್ಟೂರು (ವಿಜಯನಗರ ಜಿಲ್ಲೆ): ಪಟ್ಟಣದ ಆರಾಧ್ಯದೈವ ಕೊಟ್ಟೂರೇಶ್ವರ ಸ್ವಾಮಿಯ ರಥೋತ್ಸವ ಅಸಂಖ್ಯ ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಶುಕ್ರವಾರ ಸಂಜೆ ನೆರವೇರಿತು.
ಶುಕ್ರವಾರ ಬೆಳಗಿನ ಜಾವ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯಗಳು ಜರುಗಿದವು. ಸಂಜೆ ಸ್ವಾಮಿಯನ್ನು ದೇವಸ್ಥಾನದಿಂದ ರಥದವರಗೆ ಸಕಲ ವಾದ್ಯ ಮೇಳಗಳೊಂದಿಗೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಮೂರು ಸುತ್ತು ರಥಕ್ಕೆ ಪ್ರದಕ್ಷಿಣೆ ಹಾಕಿ ಅದರೊಳಗೆ ಪ್ರತಿಷ್ಠಾಪಿಸಲಾಯಿತು. ಬಳಿಕ ಭಕ್ತರು ತೇರು ಎಳೆದರು.
ಭಕ್ತರು ಬಾಳೆಹಣ್ಣು, ಉತ್ತತ್ತಿ ತೂರಿ ಹರಕೆ ತೀರಿಸಿದರು. ಎಲ್ಲೆಡೆ ಜಯಘೋಷ ಮೊಳಗಿತು.
ಈ ಹಿಂದೆ ಜಿಲ್ಲಾಡಳಿತವು ಜಾತ್ರೆಗೆ ನಿರ್ಬಂಧ ಹೇರಿತ್ತು. ಆದರೆ, ಗುರುವಾರ ಏಕಾಏಕಿ ನಿರ್ಬಂಧ ವಾಪಸ್ ತೆಗೆದುಕೊಂಡಿತ್ತು. ವಿಷಯ ತಿಳಿದು ಹೆಚ್ಚಿನ ಸಂಖ್ಯೆಯಲ್ಲಿ ಜನ ಬಂದಿದ್ದರು. ಕೋವಿಡ್‌ನಿಂದ ಈ ಹಿಂದಿನ ಎರಡು ವರ್ಷ ಸರಳವಾಗಿ ಜಾತ್ರೆ ನಡೆದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.