ADVERTISEMENT

ಕೊಟ್ಟೂರಿಗೆ ಹರಿದು ಬಂದ ಮಹಿಳಾ ಭಕ್ತರ ದಂಡು

​ಪ್ರಜಾವಾಣಿ ವಾರ್ತೆ
Published 18 ಜೂನ್ 2023, 16:22 IST
Last Updated 18 ಜೂನ್ 2023, 16:22 IST
18ಕೆಟಿಆರ್ ಇಪಿ1- ಕೊಟ್ಟೂರಿನಲ್ಲಿ ಅಮವಾಸ್ಯೆ ಪ್ರಯುಕ್ತ ಸ್ವಾಮಿ ದರ್ಶನಕ್ಕೆ ಆಗಮಿಸಿದ್ದ ಮಹಿಳಾ ಭಕ್ತರು ಬಸ್ ಹತ್ತಲು ಹರಸಾಹಸ ಪಡುತ್ತಿರುವುದು.
18ಕೆಟಿಆರ್ ಇಪಿ1- ಕೊಟ್ಟೂರಿನಲ್ಲಿ ಅಮವಾಸ್ಯೆ ಪ್ರಯುಕ್ತ ಸ್ವಾಮಿ ದರ್ಶನಕ್ಕೆ ಆಗಮಿಸಿದ್ದ ಮಹಿಳಾ ಭಕ್ತರು ಬಸ್ ಹತ್ತಲು ಹರಸಾಹಸ ಪಡುತ್ತಿರುವುದು.   

ಕೊಟ್ಟೂರು: ಮಣ್ಣೆತ್ತಿನ ಅಮವಾಸ್ಯೆ ಅಂಗವಾಗಿ ಪಟ್ಟಣದ ಕೊಟ್ಟೂರೇಶ್ವರ ಸ್ವಾಮಿಯ ದರ್ಶನಕ್ಕೆ ಭಾನುವಾರ ಮಹಿಳಾ ಭಕ್ತರು ಸಾಗರೋಪಾದಿಯಲ್ಲಿ ಹರಿದು ಬಂದಿದ್ದು ವಿಶೇಷವಾಗಿತ್ತು.

ಸರ್ಕಾರದ ಶಕ್ತಿ ಯೋಜನೆಯ ಸದುಪಯೋಗ ಪಡೆದು ರಾಜ್ಯದ ವಿವಿಧ ಜಿಲ್ಲೆಗಳಿಂದ ತಂಡೋಪ ತಂಡವಾಗಿ ಮಹಿಳಾ ಭಕ್ತರ ದಂಡು ತಮ್ಮ ಮಕ್ಕಳೊಂದಿಗೆ ದೇವಸ್ಥಾನಕ್ಕೆ ಆಗಮಿಸಿರುವುದು ಕಂಡು ಬಂದಿತು.

ರಥೋತ್ಸವ ಹಾಗೂ ಕಾರ್ತಿಕೋತ್ಸವ ಸಂದರ್ಭದಲ್ಲಿ ಮಾತ್ರ ಮಹಿಳಾ ಭಕ್ತರ ಸಂಖ್ಯೆ ಗಣನೀಯವಾಗಿರುತ್ತಿತ್ತು ಆದರೆ ಇಂದು ದೇವಸ್ಥಾನದ ಆವರಣದಲ್ಲಿ ಎಲ್ಲಿ ನೋಡಿದರೂ ಮಹಿಳೆಯರೇ ಹೆಚ್ಚಾಗಿ ಕಂಡುಬಂದಿದ್ದಲ್ಲದೆ ಹಿಂದೆಂದು ಕಾಣದ ಸರತಿ ಸಾಲು ದ್ವಾರ ಬಾಗಿಲಿನವರೆಗೂ ತಲುಪಿತ್ತು. ಬಿಸಿಲನ್ನೂ ಲೆಕ್ಕಿಸದೆ ಸರತಿಯಲ್ಲಿ ಸಾಗಿ ಸ್ವಾಮಿ ದರ್ಶನ ಪಡೆದು ಪುನೀತರಾದರು.

ADVERTISEMENT

ಬಸ್ ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರು ಬಸ್ ಬರುತ್ತಿದ್ದಂತೆ ಹತ್ತಲು ಮುಗಿ ಬಿದ್ದರು. ಬಾಗಿಲಿನಲ್ಲಿ ಪ್ರಯಾಣಿಕರು ಹೆಚ್ಚಾಗಿದ್ದರಿಂದ ಕೆಲವು ಮಹಿಳೆಯರು ತಮ್ಮ ಮಕ್ಕಳನ್ನು ಚಾಲಕರ ಬಾಗಿಲಿನಿಂದ ಹತ್ತಿಸಿ ಸೀಟು ಹಿಡಿಯುವ ಪ್ರಯತ್ನಕ್ಕೂ ಮುಂದಾಗಿದ್ದರಿಂದ ಮಹಿಳಾ ಪ್ರಯಾಣಿಕರನ್ನು ನಿಯಂತ್ರಿಸಲು ಸಾರಿಗೆ ಸಿಬ್ಬಂದಿ ಹರಸಾಹಸ ಪಡುವ ದೃಶ್ಯ ಕಂಡುಬಂದಿತು.

ಕೊಟ್ಟೂರೇಶ್ವರ ಸ್ವಾಮಿ ನಮ್ಮ ಮನೆ ದೇವರಾಗಿರುವುದರಿಂದ ವರ್ಷಕೊಮ್ಮೆ ರಥೋತ್ಸವಕ್ಕೆ ಬರುತ್ತಿದ್ದ ನಾವು ಸರ್ಕಾರ ಉಚಿತ ಬಸ್ ಪ್ರಯಾಣ ಕಲ್ಪಿಸಿದ್ದರಿಂದ ಸ್ವಾಮಿ ದರ್ಶನಕ್ಕೆ ದೂರದ ಚಿಕ್ಕಮಗಳೂರಿನಿಂದ ಸ್ನೇಹಿತೆಯರೊಂದಿಗೆ ಬಂದಿದ್ದೇವೆ ಎಂದು ಪ್ರತಿಭಾ ಮಠದ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಕೊಟ್ಟೂರಿಗೆ ಇಂದು ಸರಾಸರಿ 10 ಸಾವಿರಕ್ಕೂ ಹೆಚ್ಚು ಮಹಿಳೆಯರು ಪ್ರಯಾಣಿಸಿರುವುದು ದಾಖಲೆಯ ವಿಷಯವಾಗಿದೆ ಎಂದು ಕೂಡ್ಲಿಗಿ ಡಿಪೋ ವ್ಯವಸ್ಥಾಪಕ ಮರಿಲಿಂಗಪ್ಪ ಹೇಳಿದರು.

ದೇವಸ್ಥಾನದಲ್ಲಿ ಇನ್ನು ಮುಂದೆ ಮಹಿಳಾ ಭಕ್ತರು ಹೆಚ್ಚಳವಾಗುವುದರಿಂದ ಸೂಕ್ತ ರಕ್ಷಣೆ ಕಲ್ಪಿಸಲು ಧಾರ್ಮಿಕ ಇಲಾಖೆ ಮುಂದಾಗಬೇಕೆಂದು ಸ್ಥಳೀಯ ನಿವಾಸಿ ಎಂ.ಕೊಟ್ರೇಶ್ ಒತ್ತಾಯಿಸಿದ್ದಾರೆ.

ಶಕ್ತಿ ಯೋಜನೆ ಚಾಲನೆ ಪಡೆದ ನಂತರ ನಿತ್ಯ ಬಸ್‌ನಲ್ಲಿ ಪ್ರಯಾಣಿಸುವ ನೌಕರರಿಗೆ ಹಾಗೂ ವಿದ್ಯಾರ್ಥಿಗಳಿಗೆ ನಿಗದಿತ ಅವಧಿಗೆ ಕಚೇರಿ ಹಾಗೂ ತರಗತಿಗಳಿಗೆ ಸಮಯಕ್ಕೆ ಸರಿಯಾಗಿ ಹಾಜರಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಶಿಕ್ಷಕ ಬಸವರಾಜ್ ಅಸಹಾಯಕತೆ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.