ಕೂಡ್ಲಿಗಿ: ಮರದಲ್ಲಿನ ಹಣ್ಣನ್ನು ಕೀಳಲು ಕೂಲಿ ಆಳುಗಳು ಸಿಗದೆ ಹುಣಸೆ ಹಣ್ಣು ಮರದಲ್ಲಿಯೇ ಕೊಳೆಯುವಂತಾಗಿದೆ. ತಾಲ್ಲೂಕಿನಲ್ಲಿ ರೈತರು ತಮ್ಮ ಹೊಲಗಳ ಬದು, ಕಣ ಸೇರಿದಂತೆ ಮನೆಯ ಸುತ್ತ ಮುತ್ತಲು ಹುಣಸೆ ಮರಗಳನ್ನು ಬೆಳೆಸಿದ್ದಾರೆ. ಆದರೆ ಮರದಲ್ಲಿನ ಹಣ್ಣನ್ನು ಕೀಳಲು ಕೂಲಿಗಳು ಸಿಗದೆ ಕಳೆದ ವರ್ಷ ಬಿಟ್ಟಿದ್ದ ಹಣ್ಣು ಮರದಲ್ಲಿಯೇ ಉಳಿದಿದೆ.
ಬೆಲೆ ಇದ್ದಾಗ ಪೈಪೋಟಿಗೆ ಬಿದ್ದವರಂತೆ ಗುತ್ತಿಗೆದಾರರು ಮರಗಳನ್ನು ಗುತ್ತಿಗೆ ಹಿಡಿದು, ಮರಗಳ ಮಾಲೀಕರಿಗೆ ಮುಂಗಡ ಹಣ ಕೊಟ್ಟು ಹೋಗುತ್ತಿದ್ದರು. ಆದರೆ ಎರಡು ಮೂರು ವರ್ಷಗಳಿಂದ ಮರದಲ್ಲಿ ಹಣ್ಣನ್ನು ಕೀಳಲು ನುರಿತ ಕೂಲಿಗಳು ಸಿಗದೆ ಗುತ್ತಿಗೆದರಾರು ಹಾಗೂ ಮರಗಳನ್ನು ಬೆಳೆದ ರೈತರು ಕಂಗಾಲಾಗಿದ್ದಾರೆ. ಮೇ ಮಧ್ಯಕ್ಕೆ ಹಣ್ಣಿನ ಸುಗ್ಗಿ ಮುಗಿದಿದೆ.
ಒಬ್ಬ ಕೂಲಿಗೆ ದಿನವೊಂದಕ್ಕೆ ₹450 ರಿಂದ ₹500 ಕೂಲಿ ನೀಡಬೇಕು. ಹುಣಸೆ ಹಣ್ಣು ಆರಿಸುವ ಮಹಿಳೆಯರಿಗೂ ಕೂಲಿ ನೀಡಬೇಕು, ನಂತರ ಅದನ್ನು ಮನೆಗೆ ತಂದು ಬೀಜ ಬೇರ್ಪಡಿಸಿ, ನಾರು ತೆಗೆಯುವವರಿಗೆ ಕೆಜಿಗೆ ₹10ರಿಂದ 15 ನೀಡಬೇಕು. ಇನ್ನು ಮಾರುಕಟ್ಟೆಗೆ ಸಾಗಾಣೆ ಖರ್ಚು, ಮಾರುಕಟ್ಟೆಯಲ್ಲಿ ಜಾಗದ ಬಾಡಿಗೆ ನೀಡಬೇಕು. ಹೀಗೆ ಪ್ರತಿ ಕ್ವಿಂಟಲ್ ಹಣ್ಣಿಗೆ 2ರಿಂದ 3 ಸಾವಿರ ವೆಚ್ಚವಾಗುತ್ತದೆ. ಆದರೆ ಮಾರುಕಟ್ಟೆಯಲ್ಲಿ ಸಿಕ್ಕ ಬೆಲೆ ಕೇವಲ 3ರಿಂದ 6 ಸಾವಿರ ಮಾತ್ರ. ಹೀಗಾಗಿ ಗುತ್ತಿಗೆದಾರರಿಗೆ ಮತ್ತು ಬೆಳೆದ ರೈತರಿಗೂ ಬೆಲೆ ಸಿಗದಂತಾಗಿದೆ.
ಅಲ್ಲದೇ ವಿಶೇಷವಾಗಿ ಮರದಲ್ಲಿನ ಹಣ್ಣನ್ನು ಕೀಳುವ ಕೆಲಸಕ್ಕೆ ನುರಿತ ಕೂಲಿಗಳು ಸಿಗುತ್ತಿಲ್ಲ. ಸಮಪಾಲಿಗೂ ಕೂಡ ಯಾರು ಹಣ್ಣನ್ನು ಕೀಳಲು ಮುಂದೆ ಬರುತ್ತಿಲ್ಲ. ಇದರಿಂದ ಕೆಳೆದ ವರ್ಷ ಬೆಳೆದ ಹುಣಸೆ ಹಣ್ಣು ಮರದಲ್ಲಿಯೇ ಉಳಿದಿದ್ದು, ಮತ್ತೆ ಈ ವರ್ಷವೂ ಹೂವು ಬಿಟ್ಟು, ಕಾಯಿ ಕಟ್ಟುತ್ತಿದೆ. ಹೀಗೆಯಾದರೆ ಮುಂದಿನ ವರ್ಷದ ಕಥೆ ಏನು? ಎಂದು ರೈತರ ಆತಂಕಕ್ಕೆ ಒಳಗಾಗಿದ್ದಾರೆ.
ಮರಗಳ ಗಣತಿ ಇಲ್ಲ: ತಾಲ್ಲೂಕಿನಲ್ಲಿ ಅನೇಕ ಕಡೆ ನೂರಾರು ವರ್ಷಗಳ ಹಳೆಯದಾದ ಹುಣಸೆ ಮರ ಸೇರಿದಂತೆ ಇತ್ತೀಚೆಗೆ ರೈತರು ತಮ್ಮ ಹೊಲಗಳಲ್ಲಿ ತೋಟದ ಬೆಳೆಯಾಗಿ ಬೆಳೆದಿರುವ ಸಾವಿರಾರು ಮರಗಳು ಇವೆ. ರಸ್ತೆಗಳ ಅಕ್ಕಪಕ್ಕದಲ್ಲಿಯೂ ಅನೇಕ ಹುಣಸೆ ಮರಗಳಿವೆ. ಆದರೆ ಇವುಗಳ ಸಂಖ್ಯೆ ಎಷ್ಟು ಎಂಬುದು ನಿಖರ ಸಂಖ್ಯೆ ಯಾವ ಇಲಾಖೆಯ ಬಳಿಯೂ ಇಲ್ಲ.
ಮರದಿಂದ ಹಣ್ಣು ಕೀಳುವ ನುರಿತ ಕೂಲಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಇದರಿಂದ ಕೂಲಿ ಹೆಚ್ಚಾಗಿದ್ದು ಇನ್ನೂ ಮೂರ್ನಾಲ್ಕು ವರ್ಷಗಳಲ್ಲಿ ಮರದಲ್ಲಿನ ಹಣ್ಣನ್ನು ಕೀಳುವವರು ಸಿಗದೆ ಹೋಗಬಹುದು.ಸೋಮಯ್ಯನವರ ನಾಗರಾಜ ಹುಣಸೆ ಮರದ ಗುತ್ತಿಗೆದಾರ ಕೂಡ್ಲಿಗಿ
ಹುಣಸೆ ಮರ ಬೆಳೆಯಲು ಉದ್ಯೋಗ ಖಾತ್ರಿಯಲ್ಲಿ ಸಹಾಯ ಮಾಡಲಾಗುತ್ತಿದೆ. ಆದರೆ ಯಾವುದೇ ಹಾನಿಗೆ ಪರಿಹಾರ ನೀಡಲು ಅವಕಾಶವಿಲ್ಲ .ಹನುಮಪ್ಪ ನಾಯಕ ಸಹಾಯಕ ನಿರ್ದೇಶಕರು ತೋಟಗಾರಿಕೆ ಇಲಾಖೆ ಕೂಡ್ಲಿಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.