ADVERTISEMENT

61 ಜನಕ್ಕೆ ಜೀವ ಬೆದರಿಕೆ: ಸಾಹಿತಿ ಕುಂ. ವೀರಭದ್ರಪ್ಪ ಮನೆಗೆ ಬಂದ 2ನೇ ಪತ್ರ

​ಪ್ರಜಾವಾಣಿ ವಾರ್ತೆ
Published 13 ಮೇ 2022, 15:14 IST
Last Updated 13 ಮೇ 2022, 15:14 IST
ಸಾಹಿತಿ ಕುಂ. ವೀರಭದ್ರಪ್ಪ
ಸಾಹಿತಿ ಕುಂ. ವೀರಭದ್ರಪ್ಪ   

ಹೊಸಪೇಟೆ (ವಿಜಯನಗರ): ಸ್ವಾಮೀಜಿಗಳು, ರಾಜಕಾರಣಿಗಳು, ಸಾಹಿತಿಗಳು ಸೇರಿದಂತೆ 61 ಜನರಿಗೆ ಜೀವ ಬೆದರಿಕೆಯಿರುವ ಅನಾಮಧೇಯ ಪತ್ರವೊಂದು ಶುಕ್ರವಾರ (ಮೇ 13) ಕೊಟ್ಟೂರಿನಲ್ಲಿರುವ ಸಾಹಿತಿ ಕುಂ. ವೀರಭದ್ರಪ್ಪನವರ ಮನೆಗೆ ಬಂದಿದೆ. ಒಂದೂವರೆ ತಿಂಗಳೊಳಗೆ ಅವರ ಮನೆಗೆ ಬಂದ ಎರಡನೇ ಜೀವ ಬೆದರಿಕೆ ಪತ್ರ ಇದು.

ಮೊದಲನೇ ಜೀವ ಬೆದರಿಕೆ ಪತ್ರಕ್ಕೆ ಸಂಬಂಧಿಸಿದಂತೆ ಈಗಾಗಲೇ ಕುಂ. ವೀರಭದ್ರಪ್ಪನವರು ವಿಜಯನಗರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಅರುಣ್‌ ಕೆ. ಅವರನ್ನು ಭೇಟಿಯಾಗಿ ದೂರು ಸಲ್ಲಿಸಿದ್ದಾರೆ. ಅದರ ತನಿಖೆ ಪ್ರಗತಿಯಲ್ಲಿರುವಾಗಲೇ ಮತ್ತೊಂದು ಜೀವ ಬೆದರಿಕೆ ಪತ್ರ ಬಂದಿದೆ. ಈ ಹಿಂದೆ ಭದ್ರಾವತಿಯಿಂದ ಪತ್ರ ಪೋಸ್ಟ್‌ ಮಾಡಲಾಗಿತ್ತು. ಈ ಸಲ ಚಿತ್ರದುರ್ಗದಿಂದ ಕಳಿಸಲಾಗಿದೆ. ಈ ಹಿಂದಿನಂತೆಯೇ ಕೈಬರಹದಲ್ಲಿ ಅದೇ ಧಾಟಿಯಲ್ಲಿ ಪತ್ರ ಬರೆಯಲಾಗಿದೆ.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಶಾಸಕ ಎಚ್‌.ಡಿ. ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ, ಪತ್ರಕರ್ತ ದಿನೇಶ ಅಮೀನ್‌ಮಟ್ಟು, ನಿಜಗುಣಾನಂದ ಸ್ವಾಮೀಜಿ, ನಿಡುಮಾಮಿಡಿ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ಜ್ಞಾನಪ್ರಕಾಶ ಸ್ವಾಮೀಜಿ, ಸಾಹಿತಿ ಬರಗೂರು ರಾಮಚಂದ್ರಪ್ಪ, ಬಂಜಗೆರೆ ಜಯಪ್ರಕಾಶ್‌, ಕುಂ. ವೀರಭದ್ರಪ್ಪ ಸೇರಿದಂತೆ 61 ಜನರಿಗೆ ಜೀವ ಬೆದರಿಕೆ ಹಾಕಲಾಗಿದೆ.

ADVERTISEMENT

ಸಾಹಿತಿಗಳು, ಪ್ರೊಫೆಸರ್‌ಗಳು, ಬುದ್ಧಿಜೀವಿಗಳು ಹಾಗೂ ನಿಮ್ಮ ದುಷ್ಟಕೂಟವು ದೇಶ ವಿರೋಧಿ, ಸಂವಿಧಾನ ವಿರೋಧಿ, ಹಿಂದೂ ಸಮಾಜ ಹೀಯಾಳಿಸುವ ಹೇಳಿಕೆಗಳನ್ನು ಕೊಡುತ್ತೀರಿ. ಮುಸ್ಲಿಂ ರಾಕ್ಷಸರ ಪರ ಮಾತನಾಡುತ್ತೀರಿ. ನೀವೆಲ್ಲ ಕ್ಷಮೆ ಕೇಳಬೇಕು. ಇಲ್ಲ ಸಾಯಲು ಸಿದ್ಧರಾಗಿ. ಜೈ ಹಿಂದೂ ರಾಷ್ಟ್ರ, ಸಹಿಷ್ಣು ಹಿಂದೂ ಎಂಬ ಸಾಲಿನೊಂದಿಗೆ ಪತ್ರ ಕೊನೆಗೊಳ್ಳುತ್ತದೆ.

‘ಈ ಹಿಂದಿನಂತೆಯೇ ಜೀವ ಬೆದರಿಕೆ ಪತ್ರ ಬಂದಿದೆ. ಈ ಸಲ ಚಿತ್ರದುರ್ಗದಿಂದ ಪೋಸ್ಟ್‌ ಮಾಡಲಾಗಿದೆ. ಶನಿವಾರ (ಮೇ 14) ಚಿತ್ರದುರ್ಗದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಬೇಕು. ಈಗ ಅಲ್ಲಿಂದಲೇ ಪತ್ರ ಬಂದಿದ್ದು, ಇದರ ಹಿಂದಿನ ಮರ್ಮ ಏನೆಂಬುದು ಗೊತ್ತಾಗುತ್ತಿಲ್ಲ’ ಎಂದು ಕುಂ.ವೀರಭದ್ರಪ್ಪ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.