ADVERTISEMENT

ವಿವಾದಿತ ಭೂಮಿ ಖರೀದಿ ಆರೋಪ: ಶಾಸಕರ ವಿರುದ್ಧ ಕುರುಬ ಸಂಘದಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2022, 8:59 IST
Last Updated 31 ಅಕ್ಟೋಬರ್ 2022, 8:59 IST
ಕುರುಬರ ಸಂಘದವರು ಸೋಮವಾರ ಪ್ರತಿಭಟನೆ ನಡೆಸಿದರು.
ಕುರುಬರ ಸಂಘದವರು ಸೋಮವಾರ ಪ್ರತಿಭಟನೆ ನಡೆಸಿದರು.   

ಹಗರಿಬೊಮ್ಮನಹಳ್ಳಿ (ವಿಜಯನಗರ ಜಿಲ್ಲೆ): ಕುರುಬ ಸಮಾಜದ ಬಡ ಕುಟುಂಬದವರ ವಿವಾದಿತ ಭೂಮಿಯನ್ನು ಶಾಸಕ ಎಲ್.ಬಿ.ಪಿ.ಭೀಮನಾಯ್ಕ ಅವರು ತಮ್ಮ ಪತ್ನಿಯ ಹೆಸರಿನಲ್ಲಿ ಖರೀದಿಸಿ ಮೋಸ ಮಾಡಿದ್ದಾರೆ ಎಂದು ಆರೋಪಿಸಿ ಕುರುಬರ ಸಂಘದವರು ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬುಡ್ಡಿ ಬಸವರಾಜ ಮಾತನಾಡಿ, ಕಾಂಗ್ರೆಸ್ ಶಾಸಕ ಎಲ್.ಬಿ.ಪಿ.ಭೀಮನಾಯ್ಕ ಅವರು ತಮ್ಮ ಪತ್ನಿ ಬಿ.ಗೀತಾ ಅವರ ಹೆಸರಿನಲ್ಲಿ ತಾಲ್ಲೂಕಿನ ಹಂಪಾಪಟ್ಟಣ ಗ್ರಾಮಕ್ಕೆ ಸೇರಿರುವ ಕೇಶವರಾಯನಬಂಡಿ ಗ್ರಾಮದ ರೈತರ ತಕಾರರು ಜಮೀನು ಖರೀದಿಸಿದ್ದಾರೆ. ಗ್ರಾಮದ ಉಳಿಗಾಯಿ ಕಡ್ಲೆಪ್ಪ ಅವರು ಸರ್ವೇ ನಂ, 145ಎಬಿಸಿ-4.29 ಎಕರೆ, 147 ಸಿ/2-2.43 ಎಕರೆ, 144ಜೆ-1.25 ಒಟ್ಟು 7.97 ಎಕರೆ ಜಮೀನನ್ನು 30.09.1972ರಂದು ಶ್ರೀ ದುರ್ಗಾ ಸಮಿಷ್ಠಿ ವ್ಯವಸಾಯ ಕೇಂದ್ರದ ಪಾಲುದಾರ ಜಿ.ವೆಂಕಯ್ಯ ಎನ್ನುವವರಿಂದ ಖರೀದಿಸಿದ್ದು ಹೊಸಪೇಟೆಯ ಉಪ ನೋಂದಣಿ ಕಚೇರಿಯಲ್ಲಿ ಪತ್ರ ನೋಂದಣಿಯಾಗಿರುತ್ತದೆ.

ಆದರೆ ಅಂದು ಹಕ್ಕು ಬದಲಾವಣೆ ಮಾಡಿಸಿರುವುದಿಲ್ಲ. ಜಿ.ವೆಂಕಯ್ಯ ಅವರು ನಿಧನರಾಗಿದ್ದರಿಂದ ಅವರ ಪುತ್ರರಾದ ಜಿ.ಪಾಂಡುರಂಗ ಮತ್ತು ಮೋಹನ್‍ಕುಮಾರ್ ಎನ್ನುವವರು ತಮ್ಮ ಹೆಸರಿಗೆ ಎಲ್ಲ ಜಮೀನುಗಳನ್ನು ಪೋತಿವಾರಸುದಾರರಾಗಿ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಇದು ಹೊಸಪೇಟೆ ಉಪವಿಭಾಗಧೀಕಾರಿಗಳ ನ್ಯಾಯಾಲಯದಲ್ಲಿ ಇತ್ಯರ್ಥವಾಗಿದೆ. ನಂತರದಲ್ಲಿ ಪ್ರಕರಣ ಸಿವಿಲ್ ನ್ಯಾಯಾಲಯದ ಮೆಟ್ಟಿಲೇರಿದಾಗ ಜಿ.ಪಾಂಡುರಂಗ ಮತ್ತು ಮೋಹನ್‍ಕುಮಾರ್ ಅವರು ಡಿ.ಸೂರ್ಯನಾರಾಯಣ ಎನ್ನುವವರಿಗೆ ಪರಮಾಧಿಕಾರ ನೀಡಿದ್ದರು.

ADVERTISEMENT

ಇವರು ತಮ್ಮ ಪತ್ನಿ ಡಿ.ಪದ್ಮಜಾ ಮತ್ತು ಅತ್ತೆ ಎಂ.ಸಾವಿತ್ರಿ ಹೆಸರಿಗೆ ಜಮೀನುಗಳನ್ನು ಹಕ್ಕು ಬದಲಾವಣೆ ಮಾಡಿಸಿದ್ದಾರೆ. ಈಗ ಶಾಸಕ ಎಲ್.ಬಿ.ಪಿ.ಭೀಮನಾಯ್ಕ ಅವರ ಪತ್ನಿ ಬಿ.ಗೀತಾ ಅವರು ಡಿ.ಪದ್ಮಜಾ ಮತ್ತು ಎಂ.ಸಾವಿತ್ರಿ ಅವರಿಂದ ತಕರಾರು ಆಸ್ತಿಯನ್ನು ಖರೀದಿಸಿ ನಿಜವಾದ ಮೂಲ ವಾರಸುದಾರರಿಗೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು. ಈ ಕುರಿತಂತೆ ತಹಶೀಲ್ದಾರ್ ಅವರಿಗೆ ತಕರಾರು ಅರ್ಜಿ ಸಲ್ಲಿಸಿದರೂ ಹಕ್ಕು ಬದಲಾವಣೆಯಾಗಿರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಕೆಲವು ಮುಖಂಡರು ಈ ಭೂವಿವಾದದ ಕುರಿತು ಶಾಸಕರಿಗೆ ಮನವರಿಕೆ ಮಾಡಿದಾಗ ಈ ಖರೀದಿ ಪತ್ರವನ್ಬು ರದ್ದು ಮಾಡಿ ವಾಪಾಸು ಕೊಡುವುದಾಗಿ ಹೇಳಿದ್ದರು. ಆದರೆ ಸೆ.12 ರಂದು ಮತ್ತೆ ಮಾರಾಟ ಮಾಡುವ ಮೂಲಕ ಬಡ ಕುಟುಂಬದವರಿಗೆ ಮೋಸ ಮಾಡಿದ್ದಾರೆ. ಆಂಧ್ರ ಮೂಲದವರಿಗೆ ಅನುಕೂಲ‌ ಮಾಡಿಕೊಟ್ಟಿದ್ದಾರೆ, ಬಡ ರೈತರಿಗೆ ಅಭದ್ರತೆ ಉಂಟು ಮಾಡಿದ್ದಾರೆ ಎಂದರು.
ಶಾಸಕರು ಕುರುಬ ಸಮಾಜವನ್ಬು ಒಡೆದಾಳಲು ಹೊರಟಿದ್ದಾರೆ.

ಮುಂದಿನ ಚುನಾವಣೆಯಲ್ಲಿ ಅವರನ್ನು ಮತ್ತೆ ಕಲ್ಲಹಳ್ಳಿ ತಾಂಡಾಕ್ಕೆ ವಾಪಾಸು ಕಳಿಸುತ್ತೇವೆ ಎಂದರು. ಜಮೀನು ಕಬಳಿಕೆ ಕುರಿತಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ದೂರು ನೀಡುವುದಾಗಿ ತಿಳಿಸಿದರು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕನ್ನಿಹಳ್ಳಿ ಚಂದ್ರಶೇಖರ, ಸಮಾಜದ ಧರ್ಮದರ್ಶಿ ಬಣಕಾರ ಗೋಣೆಪ್ಪ, ಮೈಲಾರಪ್ಪ ಮಾತನಾಡಿದರು.

ತಾಲ್ಲೂಕಿನ ವಿವಿಧ ಗ್ರಾಮಗಳ ಸಮಾಜದ ನೂರಾರು ಜನ‌ ಭಾಗವಹಿಸಿದ್ದರು.ಈಶ್ವರ ದೇವಸ್ಥಾನದಿಂದ ತಹಶೀಲ್ದಾರ್ ಕಚೇರಿಯವರೆಗೂ ಮೆರವಣಿಗೆ ನಡೆಸಿದರು.

ಸಮಾಜದ ಮುಖಂಡರಾದ ಮುಟುಗನಹಳ್ಳಿ ಕೊಟ್ರೇಶ್, ಸೊನ್ನದ ಮಹೇಶ್,ಪ್ರಭಾಕರ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಸೋಮಲಿಂಗಪ್ಪ, ಮಾಜಿ ಅಧ್ಯಕ್ಷ ಹೆಗ್ಡಾಳ್ ರಾಮಣ್ಣ, ಜಾಣ ಅನಿಲ್ ಕುಮಾರ್, ಛಲವಾದಿ ಮಹಾಸಭಾದ ಅಧ್ಯಕ್ಷ ಕಹಳೆಬಸವರಾಜಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.