ಮರಿಯಮ್ಮನಹಳ್ಳಿ (ವಿಜಯನಗರ ಜಿಲ್ಲೆ): ಲಂಬಾಣಿ ಜನಾಂಗದ ಹಬ್ಬಗಳಲ್ಲೊಂದಾದ ಸಾಥಿಯಾಡಿ(ಶೀತ್ಲಾ) ಹಬ್ಬವನ್ನು ಮಂಗಳವಾರ ಸಂಜೆ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನಹಳ್ಳಿ ತಾಂಡಾದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ಆಶಾಢ ಮಾಸ ಆರಂಭದ ಮೊದಲ ಮಂಗಳವಾರ ಆಚರಿಸುವ ಈ ಹಬ್ಬವನ್ನು ಆಶಾಢ ಹಬ್ಬ, ಸಾಥಿಯಾಡಿ (ಏಳು ಮಕ್ಕಳ ತಾಯಿ)ಹಬ್ಬ, ಶೀತ್ಲ ಹಬ್ಬ ಎಂದು ಆಚರಿಸುತ್ತಾರೆ. ಹಬ್ಬದ ಅಂಗವಾಗಿ ಸಂಜೆ ತಾಂಡಾದ ಹೊರವಲಯದ ಬಯಲಿನಲ್ಲಿ ಇರುವ ದೇವಿಗೆ ವಿಶೇಷ ಅಲಂಕಾರ, ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಾಂಡಾದ ಪ್ರತಿಯೊಬ್ಬರು ಸೇರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ರೋಗರುಜಿನಗಳು ಬಾರದಂತೆ ಹಾಗೂ ಉತ್ತಮವಾದ ಮಳೆಬೆಳೆಯಾಗಲೆಂದು ಆಶಿಸಿ ದೇವಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು. ಮಹಿಳೆಯರು ಸಾಂಪ್ರದಾಯಿಕ ಉಡುಪನ್ನು ಧರಿಸಿ ನೃತ್ಯ ಮಾಡುವುದರ ಮೂಲಕ ಹಬ್ಬಕ್ಕೆ ಕಳೆ ತಂದರು.
ಇದರಂತೆ ಹೋಬಳಿ ವ್ಯಾಪ್ತಿಯ ಜಿ.ನಾಗಲಾಪುರ ತಾಂಡಾ, ಗುಂಡಾ ತಾಂಡಾ ಹಾಗೂ ತಾಳೇಬಸಾಪುರ ತಾಂಡಾದಲ್ಲಿ ಸಂಜೆ ಹಬ್ಬವನ್ನು ಆಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.