ADVERTISEMENT

ಕೂಡ್ಲಿಗಿ | ಬಿಸಿಯೂಟದ ಸಾರಿಗೆ ಬಿದ್ದ ಹಲ್ಲಿ: 62 ವಿದ್ಯಾರ್ಥಿಗಳಿಗೆ ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 29 ಜುಲೈ 2024, 15:54 IST
Last Updated 29 ಜುಲೈ 2024, 15:54 IST
<div class="paragraphs"><p>ಮಕ್ಕಳ ಆರೋಗ್ಯ ಪರಿಶೀಲಿಸಿದ ಶಾಸಕ ಡಾ.ಶ್ರೀನಿವಾಸ&nbsp;ಎನ್.ಟಿ.</p><p></p></div>

ಮಕ್ಕಳ ಆರೋಗ್ಯ ಪರಿಶೀಲಿಸಿದ ಶಾಸಕ ಡಾ.ಶ್ರೀನಿವಾಸ ಎನ್.ಟಿ.

   

– ಪ್ರಜಾವಾಣಿ ಚಿತ್ರ

ADVERTISEMENT

ಕೂಡ್ಲಿಗಿ (ವಿಜಯನಗರ ಜಿಲ್ಲೆ): ಬಿಸಿಯೂಟದ ಸಾರಿನ ಪಾತ್ರೆಗೆ ಹಲ್ಲಿಯೊಂದು ಬಿದ್ದುದು ಕಂಡುಬಂದ ಕಾರಣ ಮುಂಜಾಗ್ರತೆ ಕ್ರಮವಾಗಿ 62 ಮಂದಿ ವಿದ್ಯಾರ್ಥಿಗಳಿಗೆ ಚಿಕಿತ್ಸೆ ಕೊಡಿಸಿದ ಪ್ರಸಂಗ ತಾಲ್ಲೂಕಿನ ಬಡೇಲಡಕು ಗ್ರಾಮದಲ್ಲಿ ಸೋಮವಾರ ನಡೆದಿದೆ.

ಎಲ್ಲ ವಿದ್ಯಾರ್ಥಿಗಳೂ ಆರೋಗ್ಯದಿಂದ ಇದ್ದಾರೆ. ಯಾವುದೇ ಸಮಸ್ಯೆ ಇಲ್ಲ. 13 ಮಂದಿ ಮಕ್ಕಳನ್ನು ಮಾತ್ರ ಆಸ್ಪತ್ರೆಯಲ್ಲೇ ಉಳಿಸಿಕೊಂಡು ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ಇಲ್ಲಿನ ಸರ್ಕಾರಿ ಆಸ್ಪತ್ರೆಯ ವೈದ್ಯರು ಹಾಗೂ ಸ್ವತಃ ವೈದ್ಯರೂ ಆಗಿರುವ ಶಾಸಕ ಡಾ.ಶ್ರೀನಿವಾಸ ಎನ್‌.ಟಿ. ತಿಳಿಸಿದ್ದಾರೆ.

ಘಟನೆಯ ವಿವರ: ಶಾಲೆಯಲ್ಲಿ ಮಧ್ಯಾಹ್ನ 12.45ರ ವೇಳೆಗೆ ಎಲ್‌ಕೆಜಿ ಹಾಗೂ ಯುಕೆಜಿ ಸೇರಿದಂತೆ 25 ವಿದ್ಯಾರ್ಥಿಗಳಿಗೆ ಬಿಸಿಯೂಟ ಬಡಿಸಲಾಗಿತ್ತು. ಈ ವೇಳೆ ಎರಡು ಬಕೆಟುಗಳಲ್ಲಿ ಸಾರನ್ನು ಹಾಕಿಕೊಂಡು ಒಂದು ಬಕೆಟ್ ತೆಗೆದುಕೊಂಡು ವಿದ್ಯಾರ್ಥಿಗಳಿಗೆ ಬಡಿಸಲಾಗಿತ್ತು. ನಂತರ ಮತ್ತೊಂದು ಬಕೆಟ್‌ ಅನ್ನು ತೆಗೆದುಕೊಂಡಾಗ ಅದರಲ್ಲಿ ಹಲ್ಲಿಯೊಂದು ಬಿದ್ದಿರುವುದು ಕಾಣಿಸಿತು.

ತಕ್ಷಣ ವಿದ್ಯಾರ್ಥಿಗಳಿಗೆ ಊಟ ಬಡಿಸುವುದನ್ನು ನಿಲ್ಲಿಸಿ ಸಾರನ್ನು ಚೆಲ್ಲಲಾಯಿತು. ಬಳಿಕ  ಚಿತ್ರಾನ್ನ ಮಾಡಿ ಉಳಿದ ವಿದ್ಯಾರ್ಥಿಗಳಿಗೆ ಊಟ ಬಡಿಸಲಾಯಿತು. ಆದರೆ ಮೊದಲು ಊಟ ಮಾಡಿದ ವಿದ್ಯಾರ್ಥಿಗಳನ್ನು ಒಂದು ಕೊಠಡಿಯಲ್ಲಿ ಕೂಡಿಸಿ ಅವರ ಆರೋಗ್ಯದ ಮೇಲೆ ನಿಗಾ ವಹಿಸಿ, ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಯಿತು.  ಈ ವಿಷಯ ಪೋಷಕರಿಗೆ ತಿಳಿದು ಸಾಕಷ್ಟು ಜನರು ಶಾಲೆಯಲ್ಲಿ ಜಮಾಯಿಸಿದರು. ವಿಷಯ ತಿಳಿದ ಬಿಸಿಯೂಟ ಯೋಜನಾ ನಿರ್ದೇಶಕ ಕೆ.ಜಿ. ಅಂಜನೇಯ ಅವರು ಮೇಲಧಿಕಾರಿಗಳಿಗೆ ಮಾಹಿತಿ ನೀಡಿದರು.

‘ಅನ್ನ ಸಾರು ಊಟ ಮಾಡಿದ 25 ವಿದ್ಯಾರ್ಥಿಗಳೊಂದಿಗೆ ಒಟ್ಟು 60 ವಿದ್ಯಾರ್ಥಿಗಳನ್ನು ತಕ್ಷಣ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆತರಲಾಯಿತು.  ಅವರಲ್ಲಿ 13 ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಿಕೊಂಡು ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಪೈಕಿ ಒಬ್ಬ ವಿದ್ಯಾರ್ಥಿಗೆ ವಾಂತಿ ಹಾಗೂ ಒಬ್ಬ ವಿದಾರ್ಥಿಗೆ ಭೇದಿಯಾಗಿದೆ. ಉಳಿದ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಮನೆಗೆ ಕಳಿಸಲಾಗಿದೆ. ಎಲ್ಲಾ ವಿದ್ಯಾರ್ಥಿಗಳು ಸುಧಾರಿಸಿಕೊಳ್ಳುತ್ತಿದ್ದು, ಯಾವುದೇ ಸಮಸ್ಯೆ ಇಲ್ಲ’ ಎಂದು ವೈದ್ಯರು ತಿಳಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಊಟ ಬಡಿಸುವ ಮೊದಲು ಶಾಲೆಯ ಮುಖ್ಯ ಶಿಕ್ಷಕಿ ಸಾರಿನ ರುಚಿ ನೋಡಿದ್ದರು ಹಾಗೂ ಬಿಸಿಯೂಟ ಕಾರ್ಯಕರ್ತೆಯರು ಸಹ ಊಟ ಮಾಡಿದ್ದಾರೆ.

ಶಾಸಕರಿಂದ ಪರೀಕ್ಷೆ: ವಿಷಯ ತಿಳಿದು ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಹಾಗೂ ವೈದ್ಯರೂ ಆಗಿರುವ ಡಾ. ಶ್ರೀನಿವಾಸ್ ಎನ್.ಟಿ., ಅವರು ಸಹ ಮಕ್ಕಳನ್ನು ಪರೀಕ್ಷಿಸಿದರು. ‘ಎಲ್ಲಾ ವಿದ್ಯಾರ್ಥಿಗಳು ಆರೋಗ್ಯವಾಗಿದ್ದು, ಯಾವುದೇ ಸಮಸ್ಯೆ ಇಲ್ಲ’ ಎಂದು ಹೇಳಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ ಕರಣಂ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವೈ. ರವಿಕುಮಾರ್ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ  ವಿಚಾರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.