ADVERTISEMENT

ಮೋದಿ ಹೆಸರಲ್ಲಿ ಮತಯಾಚನೆ ದುರದೃಷ್ಟಕರ: ಅನ್ನಪೂರ್ಣಾ ತುಕಾರಾಂ ಟೀಕೆ

ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2024, 14:28 IST
Last Updated 7 ಏಪ್ರಿಲ್ 2024, 14:28 IST
ಹೂವಿನಹಡಗಲಿ ತಾಲ್ಲೂಕಿನ ಪಶ್ಚಿಮ ಕಾಲ್ವಿಯಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಅನ್ನಪೂರ್ಣಾ ತುಕಾರಾಂ ಮಾತನಾಡಿದರು
ಹೂವಿನಹಡಗಲಿ ತಾಲ್ಲೂಕಿನ ಪಶ್ಚಿಮ ಕಾಲ್ವಿಯಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಅನ್ನಪೂರ್ಣಾ ತುಕಾರಾಂ ಮಾತನಾಡಿದರು   

ಹೂವಿನಹಡಗಲಿ: ‘ಬಳ್ಳಾರಿಯಿಂದ ನಾಲ್ಕು ಬಾರಿ ಬಿಜೆಪಿ ಸಂಸದರು ಆಯ್ಕೆಯಾಗಿದ್ದರೂ ಹೇಳಿಕೊಳ್ಳುವಂಥ ಅಭಿವೃದ್ಧಿ ಕೆಲಸ ಮಾಡಿಲ್ಲ. ಹೀಗಾಗಿ ತಮ್ಮ ಸಾಧನೆ ಹೇಳಿ ಮತ ಕೇಳದೇ ಮೋದಿ ಹೆಸರಲ್ಲಿ ಮತ ಕೇಳುತ್ತಿದ್ದಾರೆ’ ಎಂದು ಅನ್ನಪೂರ್ಣಾ ತುಕಾರಾಂ ಟೀಕಿಸಿದರು.

ತಾಲ್ಲೂಕಿನ ಪಶ್ಚಿಮ ಕಾಲ್ವಿ ಗ್ರಾಮದಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಪತಿ ತುಕಾರಾಂ ಪರ ಮತಯಾಚಿಸಿ ಅವರು ಮಾತನಾಡಿದರು.

‘ಬಳ್ಳಾರಿಯ ಬಿಜೆಪಿ ನಾಯಕರಿಗೆ ಚುನಾವಣೆ ವೇಳೆ ಮಾತ್ರ ಜನರು ನೆನಪಾಗುತ್ತಾರೆ. ಚುನಾವಣೆಗಳಲ್ಲಿ ಗೆದ್ದು ಹೋದವರು ನಂತರ ಈ ಕಡೆ ತಿರುಗಿ ನೋಡುವುದಿಲ್ಲ. ಕಾಂಗ್ರೆಸ್ ವರಿಷ್ಠರು ಈ ಬಾರಿ ಜನಪರ ಕಾಳಜಿಯ ತುಕಾರಾಂ ಅವರನ್ನು ಅಭ್ಯರ್ಥಿಯಾಗಿಸಿದ್ದಾರೆ. ಈ ಭಾಗದ ಜನರು ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

ADVERTISEMENT

‘ಬಿಜೆಪಿಯವರಿಗೆ ಅಭಿವೃದ್ಧಿ ಹೆಸರಲ್ಲಿ ಮತ ಕೇಳುವ ನೈತಿಕತೆ ಇಲ್ಲ. ಹೀಗಾಗಿ ಸರ್ಧಾರ್ ವಲ್ಲಭಬಾಯಿ ಪಟೇಲ್ ಪ್ರತಿಮೆ, ರಾಮ ಮಂದಿರ ನಿರ್ಮಾಣದ ಹೆಸರಲ್ಲಿ ಮತ ಕೇಳುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ರಾಜ್ಯದ ಪ್ರತಿ ಮನೆಗೂ ತಲುಪಿವೆ. ತೀವ್ರ ಬರಗಾಲದಲ್ಲೂ ಬಡವರು ನೆಮ್ಮದಿಯಿಂದ  ಜೀವನ ನಡೆಸುತ್ತಿದ್ದಾರೆ. ನಾವು ರಾಜ್ಯ ಸರ್ಕಾರದ ಸಾಧನೆಗಳನ್ನು ಹೇಳಿ ಮತ ಕೇಳುತ್ತೇವೆ, ಅವರು ಕೇಂದ್ರದ ಸಾಧನೆಗಳನ್ನು ಹೇಳಿ ಮತ ಕೇಳಲಿ’ ಎಂದು ಸವಾಲು ಹಾಕಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ.ಹನುಮಂತಪ್ಪ, ಅಟವಾಳಗಿ ಕೊಟ್ರೇಶ, ಮುಖಂಡರಾದ ಹನಕನಹಳ್ಳಿ ಹಾಲೇಶ, ಚಂದ್ರನಾಯ್ಕ, ದಿವಾಕರ, ರೆಡ್ಡಿನಾಯ್ಕ, ಬಿ.ಎಲ್.ಶ್ರೀಧರ, ಜಿ. ವಸಂತ, ಜೆ.ಶಿವರಾಜ್ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.