ವಿಜಯನಗರ (ಹೊಸಪೇಟೆ): ತಾಲ್ಲೂಕು ಮಡಿವಾಳರ ಕ್ಷೇಮಾಭಿವೃದ್ಧಿ ಸಂಘದಿಂದ ಶುಕ್ರವಾರ ನಗರದಲ್ಲಿ ವೀರ ಗಣಾಚಾರಿ ಮಡಿವಾಳ ಮಾಚಿದೇವರ ಜಯಂತಿ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.
ಮಡಿವಾಳ ಸಮುದಾಯದ ಯುವಕರು ಸಣ್ಣಕ್ಕಿ ವೀರಭದ್ರ ದೇವಸ್ಥಾನದಿಂದ ನಗರದ ಪ್ರಮುಖ ಮಾರ್ಗಗಳ ಬೈಕ್ ರ್‍ಯಾಲಿ ನಡೆಸಿದರು. ಬಸವಮಾಚಿದೇವ ಸ್ವಾಮೀಜಿ ಅವರನ್ನು ರಥದಲ್ಲಿ ಮೆರವಣಿಗೆ ಮೂಲಕ ವೇದಿಕೆ ವರೆಗೆ ಕರೆತಂದರು.
ಬಳಿಕ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೂಲಸೌಕರ್ಯ ಅಭಿವೃದ್ಧಿ, ಹಜ್ ಮತ್ತು ವಕ್ಫ್ ಖಾತೆ ಸಚಿವ ಆನಂದ್ ಸಿಂಗ್ ಅವರು ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
‘ಇತರೆ ಸಮುದಾಯಗಳಂತೆ ಮಡಿವಾಳ ಸಮುದಾಯವು ಸಹ ಮೀಸಲಾತಿಗಾಗಿ ಬೇಡಿಕೆ ಇಟ್ಟಿದೆ. ಕಾನೂನಾತ್ಮಕವಾಗಿ ಮೀಸಲಾತಿ ಸಿಗುವಂತೆ ಸಾಧ್ಯವಾಗಬೇಕು, ನಾನು ಸಹ ಬಜೆಟ್ ಅಧಿವೇಶನದಲ್ಲಿ ಮಡಿವಾಳ ಸಮುದಾಯದ ಮೀಸಲಾತಿ ಕುರಿತಂತೆ ಪ್ರಸ್ತಾಪಿಸುತ್ತೇನೆ’ ಎಂದು ಭರವಸೆ ನೀಡಿದರು.
‘ನಗರದಲ್ಲಿ ಸಮುದಾಯದ ಏಳಿಗೆಗೆ ಹಾಗೂ ವಿವಿಧ ಕಾರ್ಯಕ್ರಮಗಳಿಗೆ ಅನುಕೂಲವಾಗುವ ರೀತಿಯಲ್ಲಿ ಧೋಬಿ ಘಾಟ್ ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ ಬಸವಮಾಚಿದೇವ ಸ್ವಾಮೀಜಿ ಬೇಡಿಕೆ ಸಲ್ಲಿಸಿದ್ದಾರೆ. ಅದಕ್ಕೆ ವ್ಯವಸ್ಥೆ ಕಲ್ಪಿಸಿಕೊಡುತ್ತೇನೆ’ ಎಂದರು.
ಮಡಿವಾಳ ಅಭಿವೃದ್ಧಿ ನಿಗಮದ ನಿರ್ದೇಶಕ ಕೆ.ಎಸ್.ಅರುಣ್ ಮಾತನಾಡಿ, ‘ಸಮುದಾಯದ ಏಳಿಗೆಗಾಗಿ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲಾಗಿದೆ. ನಿಗಮದ ಮೂಲಕ ಹೊರತರುವ ವಿವಿಧ ಯೋಜನೆಗಳನ್ನು ಸಮುದಾಯದವರು ಸದುಪಯೋಗ ಪಡಿಸಿಕೊಂಡು ಫಲಾನುಭವಿಗಳಾಗಬೇಕು’ ಎಂದು ತಿಳಿಸಿದರು.
ಮಡಿವಾಳ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಎಂಜೇರಪ್ಪ, ತಾಲ್ಲೂಕು ಮಡಿವಾಳ ಸಂಘದ ಅಧ್ಯಕ್ಷ ರಾಜ್ ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಶ್ರೀನಿವಾಸ, ರೇವಣಸಿದ್ಧಪ್ಪ, ಯುವ ಘಟಕದ ಅಧ್ಯಕ್ಷ ಎಂ.ಭರತ್ ಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.