ADVERTISEMENT

ಆಲಮಟ್ಟಿಯಿಂದ ಹೆಚ್ಚು ನೀರು ಹರಿಸಿ: ಸರ್ಕಾರಕ್ಕೆ ಪತ್ರ ಬರೆದು ಮಹಾರಾಷ್ಟ್ರ ಒತ್ತಡ

​ಪ್ರಜಾವಾಣಿ ವಾರ್ತೆ
Published 25 ಜುಲೈ 2024, 14:14 IST
Last Updated 25 ಜುಲೈ 2024, 14:14 IST
   

ಆಲಮಟ್ಟಿ(ವಿಜಯಪುರ): ಕೃಷ್ಣಾ ಕೊಳ್ಳದ ಸಾಂಗ್ಲಿ ಹಾಗೂ ಕೊಲ್ಹಾಪುರ ಜಿಲ್ಲೆಯಲ್ಲಿ ಪ್ರವಾಹ ಉಂಟಾಗಿದ್ದು, ಇದಕ್ಕೆ ಆಲಮಟ್ಟಿ ಜಲಾಶಯದ ಎತ್ತರ ಕಾರಣ ಎಂದು ಆರೋಪಿಸಿ ಮಹಾರಾಷ್ಟ್ರ ಸರ್ಕಾರವೂ ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆದು, ಆಲಮಟ್ಟಿ ಜಲಾಶಯದ ಸದ್ಯದ ನೀರು ಸಂಗ್ರಹ ಮಟ್ಟವನ್ನು ಕಡಿಮೆ ಮಾಡುವಂತೆ ಒತ್ತಾಯಿಸಿದೆ.

ಮಹಾರಾಷ್ಟ್ರದ ಶಾಸಕ ಸತೇಜ್ ಪಾಟೀಲ ನೇತೃತ್ವದಲ್ಲಿ ಮಹಾರಾಷ್ಟ್ರದ ಮುಖಂಡರು ಗುರುವಾರ ಬೆಂಗಳೂರಿನಲ್ಲಿ‌ ಮುಖ್ಯಮಂತ್ರಿ ಸಿದ್ಧರಾಮಯ್ಯ, ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌, ಕಾನೂನು ಸಚಿವ ಎಚ್.ಕೆ. ಪಾಟೀಲ ಅವರನ್ನು ಭೇಟಿ ಮಾಡಿ, ಮಹಾಪೂರ ಸಮಯದಲ್ಲಿ ಆಲಮಟ್ಟಿ ಜಲಾಶಯದ ಮಟ್ಟವನ್ನು ಆಗಸ್ಟ್‌ 15 ರವರೆಗೆ 517 ಮೀಟರ್ ವರೆಗೆ ಇಟ್ಟುಕೊಳ್ಳಬೇಕು.  3.5 ಲಕ್ಷ ಕ್ಯುಸೆಕ್ ನೀರನ್ನು ನದಿಗೆ ಬಿಡಬೇಕು ಎಂದು ಮನವಿ ಮಾಡಿದರು.

ಕೇಂದ್ರ ಸಚಿವರಿಗೂ ಮನವಿ: ಕೇಂದ್ರದ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ ಅವರಿಗೆ ಭೇಟಿ ಮಾಡಿದ ಕೊಲ್ಹಾಪುರದ ಮಾಜಿ ಸಂಸದ ಧನಂಜಯ ಮಹಾಧಿಕ್, ಆಲಮಟ್ಟಿ ಜಲಾಶಯದಿಂದ ತಕ್ಷಣವೇ ಹೆಚ್ಚಿನ ನೀರು ನದಿಗೆ ಹರಿಸಲು ಕ್ರಮಕೈಗೊಳ್ಳಬೇಕು ಹಾಗೂ  ಪ್ರವಾಹ ನಿಯಂತ್ರಣಕ್ಕೆ ಸಮಿತಿ ರಚಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.