ADVERTISEMENT

ಎಲ್ಲೆಡೆ ಶಿವನಾಮ ಸ್ಮರಣೆ: ಐತಿಹಾಸಿಕ ಹಂಪಿಗೆ ಭಕ್ತರ ದಂಡು

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2023, 11:29 IST
Last Updated 18 ಫೆಬ್ರುವರಿ 2023, 11:29 IST
   

ಹೊಸಪೇಟೆ (ವಿಜಯನಗರ): ನಗರ ಸೇರಿದಂತೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ಮಹಾಶಿವರಾತ್ರಿಯನ್ನು ಶ್ರದ್ಧಾ, ಭಕ್ತಿಯಿಂದ ಆಚರಿಸಲಾಗುತ್ತಿದೆ.

ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ವಿರೂಪಾಕ್ಷನಿಗೆ ಅಭಿಷೇಕ ಮಾಡಿ, ಹೂಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಬಳಿಕ ಆರತಿ ಬೆಳಗಿ ನೈವೇದ್ಯ ಸಮರ್ಪಿಸಲಾಯಿತು. ವಿವಿಧ ಕಡೆಗಳಿಂದ ಅಪಾರ ಸಂಖ್ಯೆಯಲ್ಲಿ ಬಂದಿರುವ ಭಕ್ತರು ಸರತಿ ಸಾಲಿನಲ್ಲಿ ನಿಂತು ವಿರೂಪಾಕ್ಷನ ದರ್ಶನ ಪಡೆದರು.

ADVERTISEMENT

ಪರ ಊರುಗಳಿಂದ ಬಂದವರು ತುಂಗಭದ್ರೆಯಲ್ಲಿ ಮಿಂದೆದ್ದು, ನದಿ ತಟದಲ್ಲಿಯೇ ಕುಟುಂಬ ಸದಸ್ಯರೊಡನೆ ಸಾಮೂಹಿಕ ಇಷ್ಟಲಿಂಗ ಪೂಜೆ ಮಾಡಿದರು. ಶಿವನ ಧ್ಯಾನ ಮಾಡಿದರು. ಹೆಚ್ಚಿನ ಸಂಖ್ಯೆಯಲ್ಲಿ ಜನ ಬಂದಿದ್ದರಿಂದ ಜಾತ್ರೆಯ ವಾತಾವರಣ ಸೃಷ್ಟಿಯಾಗಿತ್ತು.

ದೇವರ ದರ್ಶನ ಪಡೆದು ಹಂಪಿ ಯಂತ್ರೋದ್ಧಾರಕ, ರಾಮ ಲಕ್ಷ್ಮಣ ದೇವಸ್ಥಾನ, ಸಾಸಿವೆ ಕಾಳು ಗಣಪ, ಕಡಲೆಕಾಳು ಗಣಪ, ಕಮಲ ಮಹಲ್‌, ಗಜಶಾಲೆ ಸೇರಿದಂತೆ ಇತರೆ ಸ್ಮಾರಕಗಳನ್ನು ಕಣ್ತುಂಬಿಕೊಂಡರು. ರಾತ್ರಿ ಜಾಗರಣೆಗೆ ದೇವಸ್ಥಾನದಲ್ಲಿ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.

ಇನ್ನು ನಗರದ ಮೃತ್ಯುಂಜೇಶ್ವರ ದೇವಸ್ಥಾನ, ಈಶ್ವರ ದೇವಸ್ಥಾನ, ನೀಲಕಂಠೇಶ್ವರ ದೇವಸ್ಥಾನ, ಕಲ್ಮಠೇಶ್ವರ ದೇವಸ್ಥಾನ, ಸಣ್ಣಕ್ಕಿ ವೀರಭದ್ರೇಶ್ವರ ದೇವಸ್ಥಾನ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ದೇವರ ದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದದ್ದರಿಂದ ಸಂಭ್ರಮ ಮನೆ ಮಾಡಿತ್ತು.

ನಗರದ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದಿಂದ ಸಹಸ್ರಲಿಂಗ ದರ್ಶನ ಹಾಗೂ 13 ಪ್ರಕಾರದಲ್ಲಿ ಅಭಿಷೇಕ ಮಾಡಿಸುವ ಹೋಲೋಗ್ರಾಫಿಕ್‌ ಶಿವಲಿಂಗ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದರು. ಹೆಚ್ಚಿನ ಜನ ಬಂದು ಕಣ್ತುಂಬಿಕೊಂಡರು. ಶುಕ್ರವಾರ ಸಂಜೆ ನಗರದಲ್ಲಿ ಆಟೊಗಳನ್ನು ಅಲಂಕರಿಸಿ ಅದರ ಮೇಲೆ ಶಿವಲಿಂಗ ಪ್ರತಿಷ್ಠಾಪಿಸಿ ಮೆರವಣಿಗೆ ಮಾಡಿದ್ದರು. ಕಾಲ್ನಡಿಗೆ ಜಾಥಾ ಕೂಡ ನಡೆಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.