ADVERTISEMENT

ತೆನೆಯಲ್ಲೇ ಮೊಳಕೆಯೊಡೆದ ಮೆಕ್ಕೆಜೋಳ

ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದ್ದರೂ ಪ್ರಯೋಜನವಿಲ್ಲ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2024, 14:58 IST
Last Updated 22 ಅಕ್ಟೋಬರ್ 2024, 14:58 IST
ಹೂವಿನಹಡಗಲಿ ತಾಲ್ಲೂಕು ಅಡವಿಮಲ್ಲನಕೇರಿಯಲ್ಲಿ ತೆನೆಯಲ್ಲೇ ಮೊಳಕೆಯೊಡಿದಿರುವ ಮೆಕ್ಕೆಜೋಳ
ಹೂವಿನಹಡಗಲಿ ತಾಲ್ಲೂಕು ಅಡವಿಮಲ್ಲನಕೇರಿಯಲ್ಲಿ ತೆನೆಯಲ್ಲೇ ಮೊಳಕೆಯೊಡಿದಿರುವ ಮೆಕ್ಕೆಜೋಳ   

ಹೂವಿನಹಡಗಲಿ: ತಾಲ್ಲೂಕಿನಲ್ಲಿ ಕೆಲ ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆ ಮೆಕ್ಕೆಜೋಳ ಬೆಳೆದ ರೈತರಿಗೆ ಸಂಕಷ್ಟ ತಂದೊಡ್ಡಿದೆ. ಕಟಾವು ಮಾಡಿದ ಮೆಕ್ಕೆಜೋಳ ತೆನೆ ರಾಶಿಯಲ್ಲೇ ಮೊಳಕೆಯೊಡೆದಿದೆ. ಒಕ್ಕಣೆಯಾದ ಧಾನ್ಯ ಮಳೆಗೆ ತೊಯ್ದು ಮುಗ್ಗಸು ಹಿಡಿಯಲಾರಂಭಿಸಿದೆ.

ತಾಲ್ಲೂಕಿನಲ್ಲಿ ಮೆಕ್ಕೆಜೋಳ ಪ್ರದಾನ ಬೆಳೆ. ಪ್ರಸಕ್ತ ಮುಂಗಾರಿನಲ್ಲಿ 46 ಸಾವಿರ ಎಕರೆಯಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿತ್ತು. ಬೆಳೆಗೆ ಪೂರಕವಾಗಿ ಮಳೆ ಸುರಿದಿದ್ದರಿಂದ ಉತ್ತಮ ಫಸಲು ಕಣ್ಣಿಗೆ ಕಂಡಿತ್ತು. ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇರುವುದರಿಂದ ಈ ವರ್ಷವಾದರೂ ಬೆಳೆ ಕೈ ಹಿಡಿಯಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಆದರೆ, ಹಿಂಗಾರು ಮಳೆಗಳು ರೈತರ ಕನಸುಗಳನ್ನು ನುಚ್ಚು ನೂರು ಮಾಡಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಹ ಅನುಭವ ಉಂಟಾಗಿದೆ.

ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಮೆಕ್ಕೆಜೋಳ ಬೆಳೆ ಹಾನಿಗೀಡಾಗಿದೆ. ಅಡವಿಮಲ್ಲಮಕೇರಿ, ಉಪನಾಯಕನಹಳ್ಳಿ, ಇನ್ನಿತರೆ ಗ್ರಾಮಗಳಲ್ಲಿ ತೆನೆರಾಶಿಯಲ್ಲೇ ಮೆಕ್ಕೆಜೋಳ ಮೊಳಕೆ ಒಡೆದಿದೆ. ಹಡಗಲಿ, ಮಿರಾಕೊರನಹಳ್ಳಿ, ವಿನೋಬನಗರ, ನಾಗತಿಬಸಾಪುರ, ಕೊಮಾರನಹಳ್ಳಿ ತಾಂಡಾ ವ್ಯಾಪ್ತಿಯಲ್ಲಿ ಒಕ್ಕಣೆಯಾದ ಮೆಕ್ಕೆಜೋಳ ರಸ್ತೆಯಲ್ಲಿ ಒಣಗಿಸುವ ವೇಳೆ ಮಳೆಗೆ ತೊಯ್ದು ಅಪಾರ ಪ್ರಮಾಣದ ಫಸಲು ಹಾನಿಯಾಗಿದೆ.

ADVERTISEMENT

‘ಮಳೆಗೆ ಮೆಕ್ಕೆಜೋಳದ ರಾಶಿ ತೊಯ್ದು ಅರ್ಧದಷ್ಟು ಬೆಳೆ ಹಾಳಾಗಿದೆ. ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದ್ದರೂ ಪ್ರಯೋಜನ ಇಲ್ಲದಾಗಿದೆ. ಮಳೆಯಿಂದ ಹಾನಿಗೀಡಾದ ಬೆಳೆಯನ್ನು ಖರೀದಿಸಲು ವ್ಯಾಪಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಸಾಲ ಮಾಡಿ ಬೆಳೆಗೆ ಖರ್ಚು ಮಾಡಿದ್ದೇವೆ. ಸಾಲವನ್ನು ಹೇಗೆ ತೀರಿಸಬೇಕೆಂದು ತಿಳಿಯುತ್ತಿಲ್ಲ’ ಎಂದು ವಿನೋಬನಗರದ ರೈತ ನಿಂಗಪ್ಪ ಕಲ್ಲಹಳ್ಳಿ ಹೇಳಿದರು.

‘ಮಳೆಯಿಂದ ಮೆಕ್ಕೆಜೋಳ ಇತರೆ ಬೆಳೆಗಳು ಹಾನಿಗೀಡಾಗಿವೆ. ಅಧಿಕಾರಿಗಳು ಹೊಲಗದ್ದೆಗಳಲ್ಲಿ ಸಮೀಕ್ಷೆ ನಡೆಸುವ ಜತೆಗೆ, ಮಳೆಗೆ ತೊಯ್ದು ಹಾನಿಯಾದ ಫಸಲಿನ ಸಮೀಕ್ಷೆ ನಡೆಸಬೇಕು. ಸರ್ಕಾರ ಎಲ್ಲ ರೈತರಿಗೂ ವೈಜ್ಞಾನಿಕ ಪರಿಹಾರ ನೀಡಬೇಕು’ ಎಂದು ರೈತ ಸಂಘದ ಅಧ್ಯಕ್ಷ ಸಿದ್ದಪ್ಪ ಹೊಸಮನಿ ಆಗ್ರಹಿಸಿದ್ದಾರೆ.

ಹೂವಿನಹಡಗಲಿ ತಾಲ್ಲೂಕು ಅಡವಿಮಲ್ಲನಕೇರಿ ರೈತ ಕಂದಗಲ್ ಹಾಲಪ್ಪ ಅವರ ತೆನೆರಾಶಿಯಲ್ಲಿ ಮೆಕ್ಕೆಜೋಳ ಮೊಳಕೆಯೊಡಿದಿರುವುದು.
ಹೂವಿನಹಡಗಲಿ ತಾಲ್ಲೂಕು ಅಡವಿಮಲ್ಲನಕೇರಿ ರೈತ ಕಂದಗಲ್ ಹಾಲಪ್ಪ ಅವರ ತೆನೆರಾಶಿಯಲ್ಲಿ ಮೆಕ್ಕೆಜೋಳ ಮೊಳಕೆಯೊಡಿದಿರುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.