ADVERTISEMENT

ವಿಜಯನಗರ: ಗಣಿ ಕಾರ್ಮಿಕರಿಗೆ ಕೊನೆಗೂ ನಿವೇಶನ ಭಾಗ್ಯ

ಜಂಬುನಾಥಹಳ್ಳಿ, ಕಾರಿಗನೂರಿನಲ್ಲಿ ಇಂದು ಲಾಟರಿ ಮೂಲಕ ಫಲಾನುಭವಿಗಳ ಆಯ್ಕೆಗೆ ಚಾಲನೆ

ಎಂ.ಜಿ.ಬಾಲಕೃಷ್ಣ
Published 5 ಜುಲೈ 2024, 5:29 IST
Last Updated 5 ಜುಲೈ 2024, 5:29 IST
<div class="paragraphs"><p>ಹೊಸಪೇಟೆಯ ಜಂಬುನಾಥಹಳ್ಳಿಯಲ್ಲಿ ಗುರುವಾರ ಆರ್‌ಪಿ ಮೈನ್ಸ್‌ ಗಣಿ ಕಾರ್ಮಿಕರಿಗೆ ನಿವೇಶನ ನೀಡುವ ನಿಟ್ಟಿನಲ್ಲಿ ಶಾಸಕ ಎಚ್‌.ಆರ್.ಗವಿಯಪ್ಪ ಅವರು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು </p></div>

ಹೊಸಪೇಟೆಯ ಜಂಬುನಾಥಹಳ್ಳಿಯಲ್ಲಿ ಗುರುವಾರ ಆರ್‌ಪಿ ಮೈನ್ಸ್‌ ಗಣಿ ಕಾರ್ಮಿಕರಿಗೆ ನಿವೇಶನ ನೀಡುವ ನಿಟ್ಟಿನಲ್ಲಿ ಶಾಸಕ ಎಚ್‌.ಆರ್.ಗವಿಯಪ್ಪ ಅವರು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು

   

–ಪ್ರಜಾವಾಣಿ ಚಿತ್ರ

ಹೊಸಪೇಟೆ (ವಿಜಯನಗರ): ನಗರಸಭೆ ವ್ಯಾಪ್ತಿಯಲ್ಲಿ ಹಾಗೂ ಮೀಸಲು ಅರಣ್ಯ ಪ್ರದೇಶದಲ್ಲಿ ನೆಲೆಸಿದ್ದ ಗಣಿ ಕಾರ್ಮಿಕರಿಗೆ ಸ್ವಂತ ನಿವೇಶನ ಲಭಿಸುವ ಕಾಲ ಕೂಡಿಬಂದಿದ್ದು, ಜಂಬುನಾಥಹಳ್ಳಿಯ ಆರ್‌ಪಿ ಮೈನ್ಸ್‌ ಹಾಗೂ ಕಾರಿಗನೂರಿನ ಕೆಎಂಎಂಐ ಕಂಪನಿಯ ಕಾರ್ಮಿಕರಿಗೆ ನಿವೇಶನ ನೀಡುವ ನಿಟ್ಟಿನಲ್ಲಿ ಫಲಾನುಭವಿಗಳ ಆಯ್ಕೆ ಶುಕ್ರವಾರ ನಡೆಯಲಿದೆ.

ADVERTISEMENT

ಶಾಸಕ ಎಚ್‌.ಆರ್.ಗವಿಯಪ್ಪ ಅವರು ಗುರುವಾರ ವನಮಹೋತ್ಸವ ಕಾರ್ಯಕ್ರಮದ ಸಲುವಾಗಿ ಜಂಬುನಾಥಹಳ್ಳಿಗೆ ಬಂದಿದ್ದ ವೇಳೆ ಈ ಮಾಹಿತಿ ನೀಡಿದ್ದು, ಅಧಿಕಾರಿಗಳೊಂದಿಗೆ ಸಿದ್ಧತೆಗಳ ಪರಿಶೀಲನೆ ನಡೆಸಿದರು.

ಆರ್‌ಪಿ ಮೈನ್ಸ್‌ ಕಾರ್ಮಿಕರು ಈ ಹಿಂದೆ ಮೀಸಲು ಅರಣ್ಯ ಪ್ರದೇಶದಲ್ಲಿ ವಾಸವಿದ್ದರು. ಅವರನ್ನು ಒಕ್ಕಲೆಬ್ಬಿಸಿದ ಬಳಿಕ ಜಂಬುನಾಥಹಳ್ಳಿಯ ಆರ್‌ಪಿ ಮೈನ್ಸ್‌ನವರದೇ ಜಾಗದಲ್ಲಿ ಟೆಂಟ್‌ನಲ್ಲಿ ವಾಸವಾಗಿದ್ದರು. ಈ ಕಂಪನಿ 1.35 ಎಕರೆ ಜಾಗವನ್ನು 51 ಮಂದಿಯ ವಸತಿಗಾಗಿ ನಗರಸಭೆಗೆ ನೋಂದಾಯಿಸಿ ಕೊಟ್ಟಿದೆ. ಈಗಾಗಲೇ ಈ ಸ್ಥಳವನ್ನು ನಗರಸಭೆ ವತಿಯಿಂದ ಲೇಔಟ್ ಆಗಿ ರೂಪಾಂತರಿಸಲಾಗಿದ್ದು, ಉದ್ಯಾನ ಸಹಿತ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದಿಂದ (ಹುಡಾ) ಅನುಮತಿಯೂ ಸಿಕ್ಕಿದೆ.  20/30 ಅಡಿ ಅಳತೆಯ ಈ ನಿವೇಶನಗಳು ಎಲ್ಲ 51 ಮಂದಿಗೂ ಸಿಗಲಿದ್ದು, ಲಾಟರಿ ಮೂಲಕ ಫಲಾನುಭವಿಗಳ ಆಯ್ಕೆ ನಡೆಯಲಿದೆ.

‘ನಿವೇಶನ ದೊರೆತ ಬಳಿಕ ಫಲಾನುಭವಿಗಳಿಗೆ ಮನೆ ಕಟ್ಟಿಕೊಳ್ಳಲು ಗಣಿಬಾಧಿತ ಪ್ರದೇಶ ಪರಿಸರ ಪುನಶ್ಚೇತನ ನಿಗಮದ (ಕೆಎಂಇಆರ್‌ಸಿ) ಅನುದಾನದಲ್ಲಿ ತಲಾ ₹7.50 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಿಸುವ ಯೋಜನೆ ಇದೆ. ಈಗಾಗಲೇ ಬಡಾವಣೆ ಅಭಿವೃದ್ಧಿಗೊಂಡಿರುವುದರಿಂದ ಮೊದಲಿಗೆ ನಿವೇಶನ ಲಭಿಸಿದರೆ ಮುಂದೆ ಎಲ್ಲವೂ ತ್ವರಿತವಾಗಿ ಸೂರಿನ ವ್ಯವಸ್ಥೆ ಸಿಗುವಂತಾಗಲಿದೆ’ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿಯೂ ಆಗಿರುವ ಪ್ರಭಾರ ಆಯುಕ್ತ ಮನೋಹರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಕೆಎಂಎಂಐ ಕ್ಯಾಂಪ್‌: ಕಾರಿಗನೂರು ಮೈನ್ಸ್ ಆ್ಯಂಡ್ ಮಿನರಲ್ಸ್ ಕಂಪನಿಯ (ಕೆಎಂಎಂಐ) ಕಾರ್ಮಿಕರು ಇದೀಗ ಮೀಸಲು ಅರಣ್ಯದಲ್ಲೇ  ವಾಸವಾಗಿದ್ದು, ಅವರು ಒಕ್ಕಲೇಳುವಂತೆ ಅರಣ್ಯ ಇಲಾಖೆ ಸೂಚಿಸಿದೆ. ಕಂಪನಿ ಅವರಿಗೆ ಮಾನವೀಯತೆ ನೆಲೆಯಲ್ಲಿ ಜಾಗ ಕೊಟ್ಟಿಲ್ಲ, ಹೀಗಾಗಿ ನಗರಸಭೆಯ ವತಿಯಿಂದ 3.5 ಎಕರೆ ಜಾಗವನ್ನು ನಿವೇಶನಕ್ಕಾಗಿ ಕಾಯ್ದಿರಿಸಲಾಗಿದೆ. ಇಲ್ಲಿ 97 ಮಂದಿ ಫಲಾನುಭವಿಗಳಿದ್ದು, ನಿವೇಶನಕ್ಕಾಗಿ ಅವರನ್ನು ಲಾಟರಿ ಮೂಲಕ ಆಯ್ಕೆ ಮಾಡಲು ಸಿದ್ಧತೆ ನಡೆದಿದೆ.

13 ಗಣಿಗಳು 1351 ಕುಟುಂಬಗಳು

‘ಹೊಸಪೇಟೆ ನಗರಸಭೆ ವ್ಯಾಪ್ತಿಯಲ್ಲಿ 13 ಗಣಿ ಕಂಪನಿಗಳ ಕ್ಯಾಂಪ್‌ಗಳಿವೆ. ಅವುಗಳಲ್ಲಿ 1351 ಗಣಿ ಕಾರ್ಮಿಕ ಕುಟುಂಬಗಳಿವೆ. ಕೆಎಂಇಆರ್‌ಸಿ ನಿಯಮದಂತೆ ಮೊದಲಿಗೆ ಈ ಕುಟುಂಬಗಳಿಗೆ ಸೌಲಭ್ಯ ಕಲ್ಪಿಸಿಕೊಡಬೇಕಿದೆ. ಇದಕ್ಕಾಗಿ ಜಿಲ್ಲಾಡಳಿತ ಕ್ರಿಯಾಯೋಜನೆ ಸಿದ್ಧಪಡಿಸುತ್ತಿದೆ. ಈ ಎಲ್ಲಾ ಕುಟುಂಬಗಳಿಗೂ ಸೂರಿನ ವ್ಯವಸ್ಥೆ ಕಲ್ಪಿಸುವುದಕ್ಕೆ ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗುತ್ತದೆ. ಮೊದಲ ಹಂತವಾಗಿ ಇದೀಗ ಆರ್‌ಪಿ ಮೈನ್ಸ್‌ ಕಂಪನಿಯ ಕಾರ್ಮಿಕರಿಗೆ ಸ್ವಂತ ಸೂರಿನ ಕನಸು ನನಸಾಗುವ ಹಂತ ತಲುಪಿದೆ’ ಎಂದು ನಗರಸಭೆಯ ಪ್ರಭಾರ ಆಯುಕ್ತ ಮನೋಹರ್ ತಿಳಿಸಿದರು.

ಶಾಸಕ ಎಚ್.ಆರ್.ಗವಿಯಪ್ಪ ಮತ್ತು ಗಣಿ ಕಂಪನಿಯ ಮಾಲೀಕ ಆರ್.ಶರಣಬಸವೇಶ್ವರ ಅವರ ಕಾಳಜಿಯಿಂದ ನಿವೇಶನ ಸಿಗುವಂತಾಗಿದೆ
-ಶಿವರಾಜ್‌ ಆರ್‌ಪಿ, ಮೈನ್ಸ್‌ ಕಾರ್ಮಿಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.