ADVERTISEMENT

ಬೋಗಸ್‌ ಹಕ್ಕುಪತ್ರ ಕೊಟ್ಟು ಮೋಸ ಮಾಡುತ್ತಿರುವ ಆನಂದ್‌ ಸಿಂಗ್‌: ಆರೋಪ

ಕಾಂಗ್ರೆಸ್‌ ಮುಖಂಡ ರಾಜಶೇಖರ್‌ ಹಿಟ್ನಾಳ್‌ ಗಂಭೀರ ಆರೋಪ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2023, 11:08 IST
Last Updated 2 ಮಾರ್ಚ್ 2023, 11:08 IST
ಆನಂದ್‌ ಸಿಂಗ್‌‌
ಆನಂದ್‌ ಸಿಂಗ್‌‌   

ಹೊಸಪೇಟೆ (ವಿಜಯನಗರ): ‘ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಅವರು ವಿಜಯನಗರ ಕ್ಷೇತ್ರದಲ್ಲಿ ಬೋಗಸ್‌ ಹಕ್ಕುಪತ್ರ ಕೊಟ್ಟು ಜನರಿಗೆ ಮೋಸ ಮಾಡುತ್ತಿದ್ದಾರೆ’ ಎಂದು ಕೊಪ್ಪಳ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ, ಕಾಂಗ್ರೆಸ್‌ ಮುಖಂಡ ರಾಜಶೇಖರ್‌ ಹಿಟ್ನಾಳ್‌ ಗಂಭೀರ ಆರೋಪ ಮಾಡಿದರು.

ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆನಂದ್‌ ಸಿಂಗ್‌ ಅವರು 12 ಸಾವಿರ ಜನರಿಗೆ ಹಕ್ಕುಪತ್ರ ಕೊಡುತ್ತೇನೆ ಎಂದು ಹೇಳಿದ್ದರು. ಇದುವರೆಗೆ ಎಷ್ಟು ಜನರಿಗೆ ಕೊಟ್ಟಿದ್ದಾರೆ? ಲಗ್ನ ಪತ್ರದಂತೆ ತಮ್ಮ ಭಾವಚಿತ್ರಗಳನ್ನು ಹಾಕಿಕೊಂಡು ಹಕ್ಕುಪತ್ರಗಳನ್ನು ಹಂಚುತ್ತಿದ್ದಾರೆ. ಹಕ್ಕುಪತ್ರ ಕೊಟ್ಟು ಹತ್ತು ದಿನಗಳಾಗಿವೆ. ಇದುವರೆಗೆ ಒಬ್ಬರಾದರೂ ನೋಂದಣಿ ಮಾಡಿಸಿಕೊಂಡಿದ್ದಾರೆಯೇ? ಒಂದೆರಡು ವಾರಗಳಲ್ಲಿ ವಿಧಾನಸಭೆ ಚುನಾವಣೆಗೆ ಅಧಿಸೂಚನೆ ಹೊರಬೀಳಲಿದೆ. ನೀತಿ ಸಂಹಿತೆ ಜಾರಿಗೆ ಬಂದ ನಂತರ ಏನೂ ಮಾಡಲು ಆಗುವುದಿಲ್ಲ. ಆಗ ಹಕ್ಕುಪತ್ರ ಪಡೆದವರು ಅದರಲ್ಲಿ ಒಗ್ಗರಣೆ, ಮಿರ್ಚಿ ತಿನ್ನಬೇಕಾ? ಎಂದು ಪ್ರಶ್ನಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್‌ ಮುಖಂಡ ರಾಜಶೇಖರ್‌ ಹಿಟ್ನಾಳ್‌ (ಬಲದಿಂದ ಮೂರನೆಯವರು) ಮಾತನಾಡಿದರು

ಬಳ್ಳಾರಿಯಲ್ಲಿ 500 ಜನರಿಗೆ ಹಕ್ಕುಪತ್ರ ಕೊಡಲಾಗಿದೆ. ಈಗಾಗಲೇ ಎಲ್ಲರೂ ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ. ಈ ಕೆಲಸ ವಿಜಯನಗರ ಕ್ಷೇತ್ರದಲ್ಲೇಕೇ ಆಗುತ್ತಿಲ್ಲ. ಸಚಿವರು ಅರಮನೆಯಲ್ಲಿ ವಾಸವಾಗಿರಬಹುದು. ಆದರೆ, 30 ವರ್ಷಗಳಿಂದ ಹಕ್ಕುಪತ್ರಕ್ಕಾಗಿ ಜನ ಕಾಯುತ್ತಿದ್ದಾರೆ. ನಾಲ್ಕು ಸಲ ಚುನಾವಣೆಯಲ್ಲಿ ಗೆಲ್ಲಿಸಿದ್ದಾರೆ. ಈಗ ಬೋಗಸ್‌ ಹಕ್ಕುಪತ್ರಗಳನ್ನು ಕೊಟ್ಟು ಜನರಿಗೆ ಮೋಸ ಮಾಡುತ್ತಿರುವುದು ಎಷ್ಟು ಸರಿ. ಹಕ್ಕುಪತ್ರ ಪಡೆದವರು ಸಚಿವರು ಹಾಗೂ ಸ್ಲಂ ಬೋರ್ಡ್‌ ಅಧಿಕಾರಿಗಳ ಬೆನ್ನು ಹತ್ತಿ ನೋಂದಣಿ ಮಾಡಿಸಿಕೊಳ್ಳಬೇಕು. ನೀತಿ ಸಂಹಿತೆ ಬಂದ ನಂತರ ಕೆಲಸ ಆಗುವುದಿಲ್ಲ ಎಂದರು.

ADVERTISEMENT

ಎಲ್ಲ ಸುಳ್ಳು:

‘ಸಚಿವರು ಈಗ ಬಹಳಷ್ಟು ಕಾರ್ಯಕ್ರಮ ಮಾಡಿ, ಕಾಮಗಾರಿಗಳಿಗೆ ಚಾಲನೆ ಕೊಡುತ್ತಿದ್ದಾರೆ. 15 ವರ್ಷಗಳಲ್ಲಿ ಇಷ್ಟು ಮಾಡಿರಲಿಲ್ಲ. ಇತ್ತೀಚೆಗೆ ₹283.94 ಕೋಟಿ ಮೊತ್ತದ ಕಾಮಗಾರಿಗಳಿಗೆ ಚಾಲನೆ ಕೊಟ್ಟಿದ್ದಾರೆ. ಎಂಟು ತಿಂಗಳ ಹಿಂದೆ ₹2.08 ಕೋಟಿ ಕಾಮಗಾರಿಗೆ ಚಾಲನೆ ಕೊಟ್ಟಿದ್ದರು. ಅದರಲ್ಲಿ ಎಷ್ಟು ಕೆಲಸಗಳು ನಡೆಯುತ್ತಿವೆ? ಈಗ ಒಂದೆರಡು ವಾರದಲ್ಲಿ ನೀತಿ ಸಂಹಿತೆ ಜಾರಿಗೆ ಬರುತ್ತದೆ. ಈಗ ಚಾಲನೆ ಕೊಟ್ಟಿರುವ ಕೆಲಸಗಳು ಆರಂಭವಾಗುತ್ತವೆಯೇ? ನಾಲ್ಕೈದು ವರ್ಷಗಳಿಂದ ಕೆಲಸವೇಕೆ ಮಾಡಿಲ್ಲ. ವಿಜಯನಗರದಲ್ಲಷ್ಟೇ ಕೋವಿಡ್‌ ಇತ್ತಾ? ಇದೆಲ್ಲ ಚುನಾವಣೆ ಪ್ರಚಾರದ ಗಿಮಿಕ್‌. ಅವರು ಹೇಳುತ್ತಿರುವುದೆಲ್ಲ ಸುಳ್ಳು ಎಂದು ಆರೋಪಿಸಿದರು.

ವಿಜಯನಗರ ಕ್ಷೇತ್ರದ ಅನೇಕ ವಾರ್ಡ್‌ಗಳಿಗೆ ಕುಡಿಯಲು ನೀರಿಲ್ಲ. 25 ವಾರ್ಡ್‌ಗಳಿಗೆ ಕಲುಷಿತ ನೀರು ಪೂರೈಕೆಯಾಗುತ್ತಿದೆ. ಕಲುಷಿತ ನೀರು ಸೇವಿಸಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ. ಕುಡಿಯುವ ನೀರಿನ ಕಾಮಗಾರಿಗೆ ಬಂದಿದ್ದ ಅನುದಾನ ಎಲ್ಲಿಗೆ ಹೋಯಿತು. ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಏಕೆ ದಾಖಲಿಸಲಿಲ್ಲ ಎಂದು ಕೇಳಿದರು.

ಕಾಂಗ್ರೆಸ್‌ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಮಹಮ್ಮದ್‌ ಇಮಾಮ್‌ ನಿಯಾಜಿ, ಹೊಸಪೇಟೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವಿನಾಯಕ ಶೆಟ್ಟರ್‌, ಕಮಲಾಪುರದ ಅಧ್ಯಕ್ಷ ಖಾಜಾ ಹುಸೇನಿ, ಸಾಮಾಜಿಕ ಜಾಲತಾಣ ವಿಭಾಗದ ಕಲ್ಯಾಣ ಕರ್ನಾಟಕ ಭಾಗದ ಉಸ್ತುವಾರಿ ನಿಂಬಗಲ್‌ ರಾಮಕೃಷ್ಣ, ಮುಖಂಡರಾದ ಎಂ.ಸಿ. ವೀರಸ್ವಾಮಿ, ಸೋಮಶೇಖರ್‌ ಬಣ್ಣದಮನೆ, ಗುಜ್ಜಲ್‌ ನಾಗರಾಜ್‌ ಹಾಜರಿದ್ದರು.

‘ಮಹಾನಗರ ಪಾಲಿಕೆ ಕೇಳಿದವರ್‍ಯಾರು?’
‘ಹೊಸಪೇಟೆ ನಗರಸಭೆಯನ್ನು ಮಹಾನಗರ ಪಾಲಿಕೆ ಮಾಡಬೇಕೆಂದು ಕೇಳಿದವರ್‍ಯಾರು. ಸಚಿವರು ಹಿಂದೆ ನಗರದಲ್ಲಿ 300 ಎಕರೆ ಜಾಗ ಹೊಂದಿದ್ದರು. ಈಗ ಸಾವಿರ ಎಕರೆ ಆಗಿದೆ. ಪಾಲಿಕೆ ಮಾಡಿದರೆ ಅದರ ಮೌಲ್ಯ ಹೆಚ್ಚಾಗುತ್ತದೆ. ಇವರ ಆಸ್ತಿ ಬೆಲೆ ಮೂರು ಪಟ್ಟು ಹೆಚ್ಚಾಗಿದೆ. ಜಿಲ್ಲೆ ಆಗಿರುವುದರಿಂದ ಜನರ ಮೇಲೆ ಮೂರು ಪಟ್ಟು ತೆರಿಗೆ ಹೆಚ್ಚಾಗಿದೆ. ಜಿಲ್ಲೆಗೆ ಏನು ಬಂದಿದೆ. ಕುಡಿಯುವ ನೀರು, ರಸ್ತೆ ಸೇರಿದಂತೆ ಕನಿಷ್ಠ ಮೂಲಸೌಕರ್ಯಗಳಿಲ್ಲ. ಇನ್ನೂ ಅನೇಕ ಕಚೇರಿಗಳು ಬಂದಿಲ್ಲ. ಹೊಸ ಜಿಲ್ಲೆ ರಚನೆಗೆ ನಮ್ಮ ವಿರೋಧವಿಲ್ಲ. ಆದರೆ, ಜಿಲ್ಲೆಗೆ ತಕ್ಕಂತೆ ಕೆಲಸಗಳಾಗಿವೆಯೇ?’ ಎಂದು ರಾಜಶೇಖರ್‌ ಹಿಟ್ನಾಳ್‌ ಪ್ರಶ್ನಿಸಿದರು.
ಅನೇಕ ಕೆಲಸಗಳು ಬೋಗಸ್‌ ಆಗುತ್ತಿವೆ. ಧ್ವಜಸ್ತಂಭದ ಕಾಮಗಾರಿಯೇ ಅದಕ್ಕೆ ನಿದರ್ಶನ. ಇನ್ನು, ಜೋಳದರಾಶಿ ಗುಡ್ಡದ ಅಭಿವೃದ್ಧಿಗೆ ₹28 ಕೋಟಿ ಬೇಕಾ? ಇದರ ಬಗ್ಗೆ ಮಾಹಿತಿ ಕೇಳಿದರೆ ಕೊಡುತ್ತಿಲ್ಲ. ವಿಜಯನಗರಕ್ಕೆ ಪ್ರತಿವರ್ಷ ₹500 ಕೋಟಿ ಅನುದಾನ ಬರುತ್ತದೆ. ಅದೆಲ್ಲ ಎಲ್ಲಿಗೆ ಹೋಗುತ್ತಿದೆ ಎಂದು ಕೇಳಿದರು.

‘ಸಕ್ಕರೆ ಕಾರ್ಖಾನೆ ಯಾವಾಗ?’

‘ಡಿಸೆಂಬರ್‌, ಜನವರಿ, ಫೆಬ್ರುವರಿ ಹೀಗೆ ತಿಂಗಳು ಕಳೆದು ಹೋಗುತ್ತಿವೆ. ಸಚಿವರು ಸಕ್ಕರೆ ಕಾರ್ಖಾನೆ ಯಾವಾಗ ಆರಂಭಿಸುತ್ತಾರೆ. ಐಎಸ್‌ಆರ್‌ ಕಾರ್ಖಾನೆ ಮುಚ್ಚದಂತೆ ಕಾಳಜಿ ವಹಿಸಲಿಲ್ಲ. ಸಕ್ಕರೆ ಕಾರ್ಖಾನೆ ಜೊತೆಗೆ ಬಿಸ್ಕತ್‌, ಡಿಸ್ಟಿಲರಿ, ಆಯಿಲ್‌ ಫ್ಯಾಕ್ಟರಿ ಕೂಡ ಬಂದ್‌ ಆಗಿವೆ. ಇದಕ್ಕೆ ಕಾರಣ ಯಾರು? ಈ ಸಲ ನೂರಕ್ಕೆ ನೂರು ಜನ ಬದಲಾವಣೆ ಮಾಡುತ್ತಾರೆ. ಇವರ ಮೋಸಕ್ಕೆ ಜನ ನಂಬುವುದಿಲ್ಲ’ ಎಂದು ರಾಜಶೇಖರ್‌ ಹಿಟ್ನಾಳ್‌ ಹೇಳಿದರು.

‘ಕೊಂಡಯ್ಯ ವಿಚಾರ, ಕೆಪಿಸಿಸಿ ಪರಿಶೀಲನೆ’

‘ಕಾಂಗ್ರೆಸ್‌ ಮುಖಂಡ ಕೆ.ಸಿ. ಕೊಂಡಯ್ಯನವರು ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ ವಿರುದ್ಧ ಕೆಲವರನ್ನು ಎತ್ತಿಕಟ್ಟಿದ್ದಾರೆ ಎಂಬ ಆರೋಪಗಳ ಬಗ್ಗೆ ಕೆಪಿಸಿಸಿ ಶಿಸ್ತುಸಮಿತಿ ಪರಿಶೀಲಿಸಿ, ಸೂಕ್ತ ಕ್ರಮ ಜರುಗಿಸಲಿದೆ. ಇನ್ನು, ಮುಖಂಡರಾದ ಐಗೋಳ ಚಿದಾನಂದಪ್ಪ ಅವರು ವೈಯಕ್ತಿಕ ಕಾರಣದಿಂದ ರಾಜೀನಾಮೆ ಕೊಟ್ಟಿದ್ದಾರೆ. ಆದರೆ, ಅದನ್ನು ಅಂಗೀಕರಿಸಿಲ್ಲ’ ಎಂದು ಜಿಲ್ಲಾ ಗ್ರಾಮೀಣ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ. ಶಿವಯೋಗಿ ತಿಳಿಸಿದರು.

‘ಪ್ರತಿ ಮನೆಗೆ 200 ಯೂನಿಟ್‌ ಉಚಿತ ವಿದ್ಯುತ್‌, ಮನೆಯ ಯಜಮಾನಿಗೆ ಪ್ರತಿ ತಿಂಗಳು ₹2000, ಬಿಪಿಎಲ್‌ ಕುಟುಂಬದ ಪ್ರತಿ ವ್ಯಕ್ತಿಗೆ 10 ಕೆ.ಜಿ. ಅಕ್ಕಿ ಭರವಸೆಯ ‘ಗ್ಯಾರಂಟಿ ಕಾರ್ಡ್‌’ ಬಿಡುಗಡೆ ಸಮಾರಂಭ ಮಾ. 4ರಂದು ಸಂಜೆ 6.30ಕ್ಕೆ ನಗರದ ಉಮರ್‌ ಫಂಕ್ಷನ್‌ ಹಾಲ್‌ನಲ್ಲಿ ನಡೆಯಲಿದೆ. ಕರ್ನಾಟಕ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೆವಾಲಾ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಸೇರಿದಂತೆ ಹಲವು ನಾಯಕರು ಪಾಲ್ಗೊಳ್ಳುವರು’ ಎಂದು ಮಾಹಿತಿ ಹಂಚಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.