ADVERTISEMENT

ಸಣ್ಣ ಕೈಗಾರಿಕೆಗಳಲ್ಲಿ ಆರ್ಥಿಕ ಶಿಸ್ತು ತರಲು ICAI ಒತೆ ಒಪ್ಪಂದ: ಸಚಿವ ದರ್ಶನಾಪೂರ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2023, 11:11 IST
Last Updated 12 ಅಕ್ಟೋಬರ್ 2023, 11:11 IST
   

ಹೊಸಪೇಟೆ (ವಿಜಯನಗರ): ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳಲ್ಲಿ ಆರ್ಥಿಕ ಶಿಸ್ತು ತರಲು ಸಣ್ಣ ಕೈಗಾರಿಕೆಗಳ ಸಚಿವಾಲಯ ಭಾರತೀಯ ಚಾರ್ಟರ್ಡ್‌ ಅಕೌಂಟಂಟ್ಸ್‌ ಸಂಸ್ಥೆಯೊಂದಿಗೆ (ಐಸಿಎಐ) ಒಪ್ಪಂದ ಮಾಡಿಕೊಳ್ಳಲು ಮಾಡಿಕೊಳ್ಳಲು ಮುಂದಾಗಿದೆ, ಈಗಾಗಲೇ ಮೌಖಿತ ಮಾತುಕತೆ ನಡೆದಿದೆ ಎಂದು ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.

ಇಂದು ಇಲ್ಲಿ ಐಸಿಎಐಯ ದಕ್ಷಿಣ ಭಾರತ ಪ್ರಾಂತೀಯ ಪರಿಷತ್ತಿನ (ಎಸ್‌ಐಆರ್‌ಸಿ) ಬಳ್ಳಾರಿ ಶಾಖೆಯ ಆಶ್ರಯದಲ್ಲಿ ಆರಂಭಗೊಂಡ ಎರಡು ದಿನಗಳ 55ನೇ ದಕ್ಷಿಣ ಭಾರತ ಮಟ್ಟದ ಚಾರ್ಟರ್ಡ್‌ ಅಕೌಂಟೆಂಟ್‌ಗಳ ಸಮಾವೇಶದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಸಮಾವೇಶಕ್ಕೆ ‘ಜ್ಞಾನ ಸಂಪನ್ನ–ಅರಿವಿನಿಂದ ವಿಕಾಸದೆಡೆ’ ಎಂಬ ಹೆಸರಿಡಲಾಗಿದೆ.

‘ಸಣ್ಣ ಕೈಗಾರಿಕೆಗಳು ರಾಜ್ಯದ ಮತ್ತು ರಾಷ್ಟ್ರದ ಆರ್ಥಿಕ ಬೆನ್ನೆಲುಬು. ಆದರೆ ಹಲವು ಕೈಗಾರಿಕೆಗಳಿಗೆ ಆರ್ಥಿಕ ನಿಯಮಗಳ ಅರಿವಿಲ್ಲ. ಆರ್ಥಿಕ ಶಿಸ್ತು ಅನುಸರಿಸುತ್ತಿಲ್ಲ. ಚಾರ್ಟರ್ಡ್‌ ಅಕೌಂಟೆಂಟ್‌ಗಳು ಸರಿ ತಪ್ಪನ್ನು ಕಂಡು ತಿದ್ದುವವರು. ಅವರ ತಜ್ಞ ಕೌಶಲ ಸಣ್ಣ ಕೈಗಾರಿಕೆಗಳಿಗೆ ಸಹಕಾರಿಯಾಗುತ್ತವೆ. ಐಸಿಎಐ ಜೊತೆಗಿನ ಒಪ್ಪಂದದ ರೂಪುರೇಷೆ ಅಂತಿಮ ಹಂತದಲ್ಲಿದ್ದು, ಶೀಘ್ರ ಕಾರ್ಯಗತಗೊಳ್ಳಲಿದೆ’ ಎಂದು ಸಚಿವರು ತಿಳಿಸಿದರು.

ADVERTISEMENT

‘ಭಾರತ ಎಲ್ಲ ಕ್ಷೇತ್ರದಲ್ಲಿ ದಾಪುಗಾಲು ಹಾಕುತ್ತಿರುವಂತೆಯೇ ಹಲವು ಕಾರಣಗಳಿಗಾಗಿ ಎಲ್ಲ ರಾಜ್ಯಗಳು ಯಾವುದೇ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸುವ ಮುನ್ನ ಕರ್ನಾಟಕದತ್ತ ನೋಡುತ್ತಿವೆ. ಜನಕಲ್ಯಾಣ ಯೋಜನೆಗಳಲ್ಲಿ ಕರ್ನಾಟಕ ರಾಷ್ಟ್ರಕ್ಕೆ ಮಾದರಿಯಾಗಿದೆ. ಹಣಕಾಸಿನ ವ್ಯವಸ್ಥೆಯಲ್ಲಿ ಶಿಸ್ತು ಇದ್ದರೆ ಯಾವುದನ್ನೂ ಸಾಧಿಸಬಹುದು’ ಎಂದು ಸಚಿವರು ಅಭಿಪ್ರಾಯಪಟ್ಟರು.

ಸಮಾವೇಶ ಉದ್ಘಾಟಿಸಿ ಮಾತನಾಡಿದ ಐಸಿಎಐ ಅಧ್ಯಕ್ಷ ಅನಿಕೇತ್‌ ಸುನೀಲ್‌ ತಲಾಟಿ, ‘ಚಾರ್ಟರ್ಡ್‌ ಅಕೌಂಟೆಂಟ್‌ಗಳ ವ್ಯಾಪ್ತಿ ಬಹಳ ತ್ವರಿತವಾಗಿ ವಿಸ್ತರಿಸುತ್ತಿದೆ. ಲೆಕ್ಕಪರಿಶೋಧನೆಯಲ್ಲಿ ತಂತ್ರಜ್ಞಾನ ಬಳಕೆಗೆ ಐಸಿಎಐ ಒತ್ತು ನೀಡುತ್ತಿದೆ. ಸುಮಾರು ಎಂಟೂವರೆ ಲಕ್ಷ ಸಿಎ ವಿದ್ಯಾರ್ಥಿಗಳಿಗೆ ಕೇವಲ ಆಡಿಟ್‌ ಜ್ಞಾನವನ್ನು ನೀಡದೇ, ಕಲಿಕೆಯ ಅರಿವನ್ನು ವಿಸ್ತರಿಸಿ ಅವರು ಲೆಕ್ಕಕ್ಕೆ ಸಂಬಂಧಿಸಿದ ಹುದ್ದೆಗೆ ಮಾತ್ರ ಸೀಮಿತಗೊಳ್ಳದೇ ಸಿಇಒ, ಎಂಡಿ ಹುದ್ದೆಯನ್ನೂ ನಿರ್ವಹಿಸುವ ಸಾಮರ್ಥ್ಯ ಹೊಂದುವಂತೆ ಪ್ರಯತ್ನಿಸಲಾಗುತ್ತಿದೆ’ ಎಂದು ಹೇಳಿದರು.

ಗ್ರಾಮೀಣ ಮಟ್ಟದ ಆಡಳಿತದಲ್ಲಿ ಆರ್ಥಿಕ ಶಿಸ್ತನ್ನು ಸುಧಾರಿಸಲು ಐಸಿಎಐ, ಕೇಂದ್ರ ಲೆಕ್ಕಪರಿಶೋಧನಾ ಸಂಸ್ಥೆ ಸಿಎಜಿ ಜೊತೆಗೆ ಒಪ್ಪಂದಕ್ಕೆ ಮಾತುಕತೆ ನಡೆಸುತ್ತಿದೆ. ಪ್ರಸ್ತುತ ಸರ್ಕಾರದ ಬೃಹತ್‌ ಹಣಕಾಸು ವ್ಯವಹಾರಗಳ ಮೇಲೆ ನಿಗಾ ಇಡಲು ಸಿಎಜಿಯಲ್ಲಿ ಮೂಲಸೌಕರ್ಯದ ಕೊರತೆ ಇದೆ. ಐಸಿಎಐ ತನ್ನ ಕೌಶಲವನ್ನು ಒದಗಿಸಲು ಸಿದ್ಧವಿದೆ’ ಎಂದು ಅವರು ತಿಳಿಸಿದರು.

ಐಸಿಎಐ ಉಪಾಧ್ಯಕ್ಷ  ರಂಜಿತ್‌ ಕುಮಾರ್‌ ಅಗರವಾಲ್‌ ಮಾತನಾಡಿ, ಭಾರತ ಆರ್ಥಿಕವಾಗಿ ಶಕ್ತಿಶಾಲಿ ರಾಷ್ಟ್ರವಾಗಿ ಬೆಳೆಯುತ್ತಿದೆ. 2049ರ ವೇಳೆಗೆ ಭಾರತದ ಆರ್ಥಿಕತೆ 40 ಟ್ರಿಲಿಯನ್‌ ಡಾಲರ್‌ಗಳಾಗಬಹುದು ಎಂದು ಅಂದಾಜಿಸಲಾಗಿದೆ. ಆಗ ಭಾರತಕ್ಕೆ 40 ಲಕ್ಷ ಸಿಎಗಳ ಅಗತ್ಯವಿದೆ. ಈ ಗುರಿಯನ್ನು ತಲುಪಲು ಐಸಿಎಐ ಪರಿಣಾಮಕಾರಿ ಕಾರ್ಯತಂತ್ರ ರೂಪಿಸುತ್ತಿದೆ ಎಂದರು.

ಎಸ್‌ಆರ್‌ಐಸಿ ಅಧ್ಯಕ್ಷ ಪನ್ನಾರಾಜ್‌ ಸಿರಿಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಎ.ವಿ. ಅರುಣ್‌, ರಾಜ್ಯ ಘಟಕದ ಅಧ್ಯಕ್ಷ ಕೋತಾ ಶ್ರೀನಿವಾಸ್‌, ಎಆರ್‌ಐಸಿ ಉಪಾಧ್ಯಕ್ಷರಾದ ಎ.ಬಿ.ಗೀತಾ, ಬಳ್ಳಾರಿ ಶಾಖೆ ಅಧ್ಯಕ್ಷ ನಾಗನಗೌಡ ಕೆ. ಇದ್ದರು. ದಕ್ಷಿಣ ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸುಮಾರು ಎರಡು ಸಾವಿರ ಮಂದಿ ಚಾರ್ಟರ್ಡ್‌ ಅಕೌಂಟೆಂಟ್‌ಗಳು ಸಮಾವೇಶದಲ್ಲಿ ಭಾಗವಹಿಸಿದ್ದರು. ಸಮಾವೇಶ ಶುಕ್ರವಾರ ಕೊನೆಕೊಳ್ಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.