ಹೊಸಪೇಟೆ (ವಿಜಯನಗರ): ‘ನಾನು ಜನರಿಗಾಗಿ ನನ್ನ ಧ್ವನಿ ಎತ್ತುತ್ತೇನೆ, ನಮ್ಮದೇ ಸರ್ಕಾರ ಇದ್ದರೂ ನಾನು ಅದಕ್ಕೆಲ್ಲ ಅಂಜಿ ಕುಳಿತುಕೊಳ್ಳುವುದಿಲ್ಲ. ಹಠ ಮಾಡಿಯಾದರೂ ಕ್ಷೇತ್ರಕ್ಕೆ ಅನುದಾನ ತಂದು ಕೆಲಸ ಮಾಡಿಸಿ ತೋರಿಸುತ್ತೇನೆ’ ಎಂದು ಶಾಸಕ ಎಚ್.ಆರ್.ಗವಿಯಪ್ಪ ಹೇಳಿದರು.
ತಾಲ್ಲೂಕಿನ ಬೈಲುವದ್ದಿಗೇರಿ ಗ್ರಾಮ ಮತ್ತು ಇಪ್ಪಿತೇರಿಗಳಲ್ಲಿ ಕ್ರಮವಾಗಿ ₹20.24 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿ ಮತ್ತು ₹7.40 ಕೋಟಿ ವೆಚ್ಚದ ಬೆಲ್ಲ ಕಾಲುವೆ ಆಧುನೀಕರಣ ಕಾಮಗಾರಿ, ರಸ್ತೆ ದುರಸ್ತಿ ಕಾಮಗಾರಿಗಳಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
‘ಸಣ್ಣಪುಟ್ಟ ಸಮಸ್ಯೆಗಳಿಗೂ ಜಿಲ್ಲಾಧಿಕಾರಿ ಅವರ ಬಳಿಗೇ ಏಕೆ ಹೋಗುತ್ತೀರಿ? ಅವರಿಗೆ ಸಾಕಷ್ಟು ಕೆಲಸಗಳಿರುತ್ತವೆ. ತಹಶೀಲ್ದಾರ್, ಎ.ಸಿ ಹಂತದಲ್ಲೇ ಹಲವು ಸಮಸ್ಯೆಗಳನ್ನು ಬಗೆಹರಿಸುವುದು ಸಾಧ್ಯವಿದೆ. ಸ್ಥಳೀಯ ಜನಪ್ರತಿನಿಧಿಯಾದ ನನ್ನನ್ನೂ ಸಂಪರ್ಕಿಸಿದರೆ ನಿಮ್ಮ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಗುತ್ತಿಗೆದಾರರು, ಅಧಿಕಾರಿಗಳು ಈ ವಿಧಾನ ಅನುಸರಿಸಿದರೆ ಕೆಲಸ ಬೇಗ ಮುಗಿಯುತ್ತದೆ. ಬಳ್ಳಾರಿ–ಹೊಸಪೇಟೆ ಹೆದ್ದಾರಿ ಕಾಮಗಾರಿ ಸಹಿತ ಹಲವು ಕಾಮಗಾರಿಗಳ ವಿಳಂಬಕ್ಕೆ ಇದೇ ಕಾರಣವಾಗಿದೆ’ ಎಂದು ಅವರು ಹೇಳಿದರು.
ಪ್ರವಾಸಿಗರಿಗೆ ಅನುಕೂಲ: ‘ಬೈಲುವದ್ದಿಗೇರಿಯಿಂದ ಹೊಸ ಚಿನ್ನಾಪುರಕ್ಕೆ 6.90 ಕಿ.ಮೀ.ಹೊಸ ಎಂಡಿಆರ್ ರಸ್ತೆ ಅಭಿವೃದ್ಧಿ ಕಾಮಗಾರಿ ನಾನಾ ಕಾರಣಗಳಿಂದ ವಿಳಂಬವಾಗಿತ್ತು. ಈಗ ಈ ಕಾಮಗಾರಿಗೆ ಚಾಲನೆ ಸಿಕ್ಕಿದೆ. ಬಳ್ಳಾರಿಯಿಂದ ಹೊಸಪೇಟೆ ಕಡೆಗೆ ಬರುವ ಪ್ರವಾಸಿಗರಿಗೆ ಹಂಪಿ, ಕಮಲಾಪುರ, ಮೃಗಾಲಯ ಸೇರಿದಂತೆ ವಿವಿಧ ಪ್ರವಾಸಿ ಸ್ಥಳಗಳಿಗೆ ತಲುಪಲು ಒಳ ರಸ್ತೆಯಿಂದ ಅನುಕೂಲವಾಗುತ್ತದೆ. ಮತ್ತು ಈ ಭಾಗದ ರೈತರಿಗೂ ಸಹ ತಮ್ಮ ಹೊಲಗಳಿಗೆ ನಿರಾಯಾಸವಾಗಿ ತಲುಪಲು ಸಹಕಾರಿಯಾಗುತ್ತದೆ’ ಎಂದು ಶಾಸಕರು ತಿಳಿಸಿದರು.
ಬೈಲುವದ್ದಿಗೇರಿ ಗ್ರಾಮ ಪಂಚಾಯತಿಯ ಅಧ್ಯಕ್ಷೆ ಶಾಂತಮ್ಮ ಮಾತನಾಡಿ, ಗ್ರಾಮದಲ್ಲಿ ಬಸ್ ನಿಲ್ದಾಣ, ಬಡವರಿಗೆ ಮನೆಗಳು ಹಾಗೂ ಸುಡಗಾಡಪ್ಪ ದೇವಸ್ಥಾನಕ್ಕೆ ಬಹಳ ಸಂಖ್ಯೆಯಲ್ಲಿ ಭಕ್ತರು ಆಗಮಿಸುವುದರಿಂದ ಶೌಚಾಲಯದ ವ್ಯವಸ್ಥೆ ಮಾಡಿಕೊಡಬೇಕು ಎಂದರು. ಇದಕ್ಕೆ ಸ್ಪಂದಿಸಿದ ಶಾಸಕರು, ಬಸ್ ನಿಲ್ದಾಣಕ್ಕೆ ₹5 ಲಕ್ಷ ನೀಡಲಾಗುವುದು ಮತ್ತು ಮನೆಗಳಿಗೆ, ಶೌಚಾಲಯ ನಿರ್ಮಾಣಕ್ಕೆ ಮುಂದಿನ ದಿನಗಳಲ್ಲಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದರು.
ಕಾಳಘಟ್ಟದಲ್ಲೇ ಸಕ್ಕರೆ ಕಾರ್ಖಾನೆ: ಇಪ್ಪಿತ್ತೇರಿಯಲ್ಲಿ ಮಾತನಾಡಿದ ಶಾಸಕರು, ಕಾಳಘಟ್ಟದಲ್ಲೇ ಸಕ್ಕರೆ ಕಾರ್ಖಾನೆ ಸ್ಥಾಪಿಸಲಾಗುತ್ತದೆ, ಇನ್ನು ಮೂರು ತಿಂಗಳಲ್ಲಿ ರೈತರಿಗೆ ಶುಭ ಸುದ್ದಿ ಸಿಗಲಿದೆ. ರಾಜ್ಯದ ಬದಲಿಗೆ ಮಹಾರಾಷ್ಟ್ರ, ಆಂಧ್ರಪ್ರದೇಶಗಳ ಉದ್ಯಮಿಗಳೊಂದಿಗೆ ಈ ನಿಟ್ಟಿನಲ್ಲಿ ಸಮಾಲೋಚನೆ ನಡೆಯುತ್ತಿದೆ ಎಂದರು.
ತಹಶೀಲ್ದಾರ್ ಶೃತಿ ಎಂ.ಎಂ, ಇಪ್ಪಿತೇರಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಕಿಚಡಿ ಜಯಪದ್ಮ, ಬೈಲವದ್ದಗೇರಿ ಗ್ರಾಮ ಪಂಚಾಯತಿ ಪಿಡಿಓ ಹನುಮಂತಪ್ಪ, ಶಾಂತಾ ಕಂಸ್ಟ್ರಕ್ಷನ್‌ನ, ಆತ್ರೇಯ ಕಂಸ್ಟ್ರಕ್ಷನ್‌ನ ಸಿಬ್ಬಂದಿ ಇದ್ದರು.
ಸಜ್ಜಾಗುತ್ತಿದೆ ₹100 ಕೋಟಿಯ ಕ್ರಿಯಾಯೋಜನೆ ಬೈಲವದ್ದಿಗೇರಿಯಲ್ಲಿ 2 ತಿಂಗಳೊಳಗೆ ವಿದ್ಯುತ್ ಸಬ್‌ಸ್ಟೇಷನ್ ಹಂಪಿ ಉತ್ಸವಕ್ಕೆ ಮೊದಲು ರಸ್ತೆ ಕಾಮಗಾರಿ ಪೂರ್ಣ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.