ADVERTISEMENT

ಹೊಸಪೇಟೆ: ಬಸವ ಕಾಲುವೆಯಲ್ಲಿ 10 ಸಾವಿರಕ್ಕೂ ಅಧಿಕ ಮದ್ಯದ ಬಾಟಲ್‌!

ರಸ್ತೆಗೆ ನೀರು ಧುಮುಕಿದ್ದರ ಅಸಲಿ ಕಾರಣ ಬಹಿರಂಗ– ಎದುರಾದ ಭಾರಿ ಸವಾಲು

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2024, 14:32 IST
Last Updated 7 ನವೆಂಬರ್ 2024, 14:32 IST
ಹೊಸಪೇಟೆಯ ಮೂರಂಗಡಿ ವೃತ್ತದ ಬಳಿ ಬಸವ ಕಾಲುವೆಯ ಹೂಳು ಮತ್ತು ರಸ್ತೆಗೇ ಹರಿಯುತ್ತಿರುವ ನೀರು  –ಪ್ರಜಾವಾಣಿ ಚಿತ್ರ
ಹೊಸಪೇಟೆಯ ಮೂರಂಗಡಿ ವೃತ್ತದ ಬಳಿ ಬಸವ ಕಾಲುವೆಯ ಹೂಳು ಮತ್ತು ರಸ್ತೆಗೇ ಹರಿಯುತ್ತಿರುವ ನೀರು  –ಪ್ರಜಾವಾಣಿ ಚಿತ್ರ   

ಹೊಸಪೇಟೆ (ವಿಜಯನಗರ): ನಗರದ ಹೃದಯ ಭಾಗದಲ್ಲಿ ಹರಿದು ಹೋಗುತ್ತಿರುವ ಬಸವ ಕಾಲುವೆಯಲ್ಲಿ ಮೂರಂಗಡಿ ವೃತ್ತದ ಬಳಿ 10 ಸಾವಿರಕ್ಕೂ ಅಧಿಕ ಮದ್ಯದ ಬಾಟಲ್‌ಗಳು ಸಿಕ್ಕಿದ್ದು, ಹಲವು ಲೋಡ್‌ ಹೂಳನ್ನು ಮೇಲೆತ್ತಲಾಗಿದೆ, ಹೀಗಿದ್ದರೂ ನೀರು ಸರಾಗವಾಗಿ ಹರಿಯದೆ ಭಾರಿ ಸಂಕಷ್ಟ ಎದುರಾಗಿದೆ.

ಸತತ ಮೂರು ದಿನಗಳ ಕಾಲ ರಾಮಕೃಷ್ಣ ಲಾಡ್ಜ್ ಮುಂಭಾಗದಲ್ಲಿ ಕಾಲುವೆಯ ನೀರು ದಂಡೆ ಮೀರಿ ರಸ್ತೆಗೆ ಹರಿದಿತ್ತು. ಇದರಿಂದ ಜನರಿಗೆ ಭಾರಿ ತೊಂದರೆ ಉಂಟಾಗಿತ್ತು. ಈ ಕುರಿತು ‘ಪ್ರಜಾವಾಣಿ’ ವರದಿ ಪ್ರಕಟಿಸಿದ್ದು, ತಕ್ಷಣವೇ ಸ್ಪಂದಿಸಿ ಕಾಲುವೆಯಲ್ಲಿ ಹರಿಯುತ್ತಿದ್ದ ನೀರನ್ನು ಸ್ಥಗಿತಗೊಳಿಸಲಾಗಿತ್ತು. ಬುಧವಾರ ರಾತ್ರಿಯಿಡೀ ಹೂಳು ತೆಗೆಯುವ ಕೆಲಸ ನಡೆಯಿತು. ಆಗ ಈ ಬಾಟಲಿಗಳ ರಾಶಿಯೇ ಸಿಕ್ಕಿದೆ.

ಈ ಭಾಗದಲ್ಲಿ ಸುಮಾರು 30 ಮೀಟರ್‌ನಷ್ಟು ದೂರ ಕಬ್ಬಿಣದ ಕವಚದೊಂದಿಗೆ ತೂಬನ್ನು ನಿರ್ಮಿಸಿ ರಸ್ತೆಯ ಕೆಳಭಾಗದಲ್ಲಿ ನೀರು ಹರಿಯುವಂತೆ 20 ವರ್ಷಗಳ ಹಿಂದೆ ವ್ಯವಸ್ಥೆ ಮಾಡಲಾಗಿತ್ತು. ಆದರೆ ನೀರಲ್ಲೇ ಇದ್ದ ಕಾರಣ ಕಬ್ಬಿಣ ತುಕ್ಕು ಹಿಡಿದು ಕವಚಗಳು ಕುಸಿದು ಬಿದ್ದಿವೆ. ಜತೆಗೆ ಭಾರಿ ಪ್ರಮಾಣದಲ್ಲಿ ಹೂಳು ತುಂಬುಕೊಂಡಿದೆ. ಬಾಟಲಿಯ ಮುಚ್ಚಳದ ರೀತಿಯಲ್ಲಿರುವ ಈ ಭಾಗದ ಕಾಲುವೆಯಲ್ಲಿ ರಾಮಕೃಷ್ಣ ಲಾಡ್ಜ್ ಸಮೀಪದಿಂದ ನೀರು ರಭಸವಾಗಿ ಹರಿದು ಹೋಗದೆ ರಸ್ತೆಯ ಮೇಲೆ ಹರಿಯುವಂತಾಗಿದೆ.

ADVERTISEMENT
ಬಸವ ಕಾಲುವೆಗೆ ಪ್ಲಾಸ್ಟಿಕ್‌ ಬಾಟಲಿ ಇತರ ತ್ಯಾಜ್ಯ ಎಸೆಯದಂತೆ ಜನರು ಇನ್ನಾದರೂ ಎಚ್ಚರ ವಹಿಸಬೇಕು. ಕಾಲುವೆ ಸ್ವಚ್ಛವಾಗಿ ಇರುವಂತೆ ಜನರು ಸಹಕಾರ ನೀಡಬೇಕು.
ಎಚ್.ಆರ್.ಗವಿಯಪ್ಪ, ಶಾಸಕ

ಶಾಸಕರ ಮುತುವರ್ಜಿ: ನಗರದ ಹೃದಯ ಭಾಗದಲ್ಲೇ ಇಂತಹ ಸಮಸ್ಯೆ ಎದುರಾಗಿದ್ದನ್ನು ಶೀಘ್ರ ನಿವಾರಿಸುವ ನಿಟ್ಟಿನಲ್ಲಿ ಶಾಸಕ ಎಚ್‌.ಆರ್.ಗವಿಯಪ್ಪ ಮುತುವರ್ಜಿ ವಹಿಸಿದ್ದು, ಎರಡು ಪಂಪ್‌ಗಳನ್ನು ಸ್ವಂತ ಖರ್ಚಿನಲ್ಲಿ ಕೊಡಿಸಿದ್ದು, ನೀರು ಸಂಪೂರ್ಣ ತೆಗೆದ ಬಳಿಕ ಅಗ್ನಿಶಾಮಕ, ನೀರಾವರಿ, ಜಿಲ್ಲಾಡಳಿತಗಳ ಸಹಯೋಗದಲ್ಲಿ ತೂಬಿನ ಒಳಗಿನಿಂದ ಹೂಳು ತೆಗೆಯುವ ಕೆಲಸ ನಡೆಸುವ ಯೋಜನೆ ರೂಪಿಸಲಾಗಿದೆ. ಜೆಸ್ಕಾಂ ಸಿಬ್ಬಂದಿ ಸಹ ಕೆಲಸದಲ್ಲಿ ಕೈಜೋಡಿಸಿದ್ದಾರೆ. ಈ ಎಲ್ಲ ಕೆಲಸಕ್ಕೆ 2ರಿಂದ 3 ದಿನ ಬೇಕಾಗಬಹುದು ಎಂದು ಹೇಳಲಾಗುತ್ತಿದೆ.

20 ವರ್ಷದಿಂದ ನಿರ್ವಹಣೆ ಇಲ್ಲ: ಮೂರಂಗಡಿ ವೃತ್ತದ ಕೆಳಭಾಗದಿಂದ ಹಾದು ಹೋಗಿರುವ ತೂಬನ್ನು ಕೊನೆಯ ಬಾರಿಗೆ ನಿರ್ವಹಣೆ ಮಾಡಿದ್ದು 20 ವರ್ಷದ ಹಿಂದೆ. ಬಳಿಕ ಕಾಲುವೆಯ ಬಾಟಲ್‌ನೆಕ್‌ ಸಮೀಪ ಕಸ, ಕಡ್ಡಿ ಹೂಳು ತೆಗೆಯುತ್ತಿದ್ದುದು ಬಿಟ್ಟರೆ ಬೇರೇನೂ ಮಾಡಿರಲಿಲ್ಲ, ಇದರಿಂದಾಗಿಯೇ ಇದೀಗ ಸಮಸ್ಯೆ ದೊಡ್ಡದಾಗಿದೆ ಎಂದು ಮೂಲಗಳು ತಿಳಿಸಿವೆ.

ನೀರಾವರಿ ಇಲಾಖೆಯ ಎಂಜಿನಿಯರ್‌ ಬಸಪ್ಪ ಜಾನ್ಕರ್‌ ಸಹಿತ ಹಲವು ಅಧಿಕಾರಿಗಳು, ಸಿಬ್ಬಂದಿ ಹಗಲಿರುಳು ಶ್ರಮಿಸಿ ಕಾಲುವೆ ನೀರು ಸರಾಗವಾಗಿ ಹರಿಯಲು ಯತ್ನಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.