ಹೊಸಪೇಟೆ (ವಿಜಯನಗರ): ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿರುವುದಕ್ಕೆ ತೀವ್ರ ಅಸಮಾಧಾನಗೊಂಡಿರುವ ಮಾಜಿ ಉಪಮುಖ್ಯಮಂತ್ರಿ ದಿವಂಗತ ಎಂ.ಪಿ. ಪ್ರಕಾಶ್ ಅವರ ಇಬ್ಬರು ಹೆಣ್ಣು ಮಕ್ಕಳು ಪಕ್ಷೇತರರಾಗಿ ಸ್ಪರ್ಧಿಸಲು ತೀರ್ಮಾನಿಸಿದ್ದಾರೆ.
ಹಿರಿಯ ಮಗಳು ಎಂ.ಪಿ. ಲತಾ ಮಲ್ಲಿಕಾರ್ಜುನ ಹಾಗೂ ಮೂರನೇ ಮಗಳು ಎಂ.ಪಿ. ವೀಣಾ ಮಹಾಂತೇಶ್ ಅವರು ಭಾನುವಾರ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ.
ಹರಪನಹಳ್ಳಿಯಲ್ಲಿ ಭಾನುವಾರ ಕರೆದಿದ್ದ ಸಮಾನ ಮನಸ್ಕ ಸ್ವಾಭಿಮಾನಿ ಕಾರ್ಯಕರ್ತರ ಬಹಿರಂಗ ಸಭೆಯಲ್ಲಿ ಎಂ.ಪಿ. ಲತಾ ತಮ್ಮ ನಿರ್ಧಾರ ತಿಳಿಸಿದರು.
‘ಕಳೆದ ಹಲವು ವರ್ಷಗಳಿಂದ ಕ್ಷೇತ್ರದಾದ್ಯಂತ ಓಡಾಡಿ ಪಕ್ಷ ಸಂಘಟನೆ ಮಾಡಿದವರನ್ನು ಕಡೆಗಣಿಸಿ ಅನ್ಯರಿಗೆ ಕಾಂಗ್ರೆಸ್ ಟಿಕೆಟ್ ಕೊಟ್ಟು ತಪ್ಪು ಮಾಡಿದೆ. ನೀವು (ಲತಾ) ಪಕ್ಷೇತರರಾಗಿ ಸ್ಪರ್ಧಿಸಬೇಕು. ನಾವೆಲ್ಲ ನಿಮ್ಮ ಜೊತೆಗಿರುತ್ತೇವೆ’ ಎಂದು ಬೆಂಬಲಿಗರು ಆಗ್ರಹಿಸಿದರು.
ಮಂಗಳವಾರ ಅಥವಾ ಬುಧವಾರ ನಾಮಪತ್ರ ಸಲ್ಲಿಸಲಾಗುವುದು’ ಎಂದು ಲತಾ ಪತಿ ಮಲ್ಲಿಕಾರ್ಜುನ ಘೋಷಿಸಿದಾಗ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿತ್ತು.
ಇನ್ನು ವೀಣಾ ಮಹಾಂತೇಶ್ ಅವರು, ‘ಸೋಮವಾರ (ಏ.17) ನಾಮಪತ್ರ ಸಲ್ಲಿಸಲು ನಿರ್ಧರಿಸಿದ್ದೇನೆ’ ಎಂದು ವಿಡಿಯೊ ಮೂಲಕ ತಮ್ಮ ತೀರ್ಮಾನ ಪ್ರಕಟಿಸಿದ್ದಾರೆ.
‘ಪ್ರಜಾವಾಣಿ’ಗೂ ವಿಷಯ ಖಚಿತಪಡಿಸಿದ್ದಾರೆ. ಇಬ್ಬರು ಸಹೋದರಿಯರು ಹಲವು ವರ್ಷಗಳಿಂದ ಕಾಂಗ್ರೆಸ್ ಟಿಕೆಟ್ ಮೇಲೆ ಕಣ್ಣಿಟ್ಟು ಕ್ಷೇತ್ರದಾದ್ಯಂತ ಪ್ರಚಾರ ನಡೆಸುತ್ತಿದ್ದರು. ಆದರೆ, ಶನಿವಾರ ಕಾಂಗ್ರೆಸ್ ಪಕ್ಷವು ಎನ್. ಕೊಟ್ರೇಶ್ ಅವರಿಗೆ ಟಿಕೆಟ್ ಘೋಷಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.