ಹರಪನಹಳ್ಳಿ: ಮುಸ್ಲಿಮರ ಮೊಹರಂ ಆಚರಣೆಯ ಮೆರವಣಿಗೆಯಲ್ಲಿ ಕಲಾವಿದರು ಸಮ್ಮಾಳ ನುಡಿಸಿ, ನಂದಿಕೋಲು ಕುಣಿಸುವ ಮೂಲಕ ಸಾಮರಸ್ಯದ ಸಂದೇಶ ಸಾರಿದರು.
ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ನಂದಿಬೇವೂರು ಗ್ರಾಮದಲ್ಲಿ ಸಮ್ಮಾಳ, ನಂದಿಕೋಲು ಕಲಾವಿದರು ಶೈವ ದೇವಸ್ಥಾನಗಳಲ್ಲಿ ಮಾತ್ರ ಪ್ರದರ್ಶನ ನೀಡುವುದು ಸಹಜ. ಆದರೆ ತಮ್ಮ ಗ್ರಾಮದಲ್ಲಿ ಎಲ್ಲರೂ ಒಟ್ಟಾಗಿ ಆಚರಿಸುವ ಮೊಹರಂ ಆಚರಣೆಯಲ್ಲೂ ವಾದ್ಯಗಳನ್ನು ಮಾರ್ದನಿಸುವ ಮೂಲಕ ಸೌಹಾರ್ದ ಮೆರೆದಿದ್ದಾರೆ.
ಗ್ರಾಮದಲ್ಲಿ ಪ್ರತಿ ವರ್ಷ ಎರಡು ಕಡೆ ಪಕ್ಕೀರಸ್ವಾಮಿ (ಅಲೆದೇವರು) ಪ್ರತಿಷ್ಠಾಪಿಸಲಾಗುತ್ತದೆ. ಕೊನೆಯ ದಿನವಾದ ಬುಧವಾರ ಪೀರಲು ದೇವರ ಮೆರವಣಿಗೆಯಲ್ಲಿ ಸಮ್ಮಾಳ ಕಲಾವಿದರು ಭಕ್ತಿ ಭಾವದಿಂದ ನಂದಿಕೋಲು, ಸಮ್ಮಾಳ ಬಾರಿಸಿ ಹಬ್ಬದ ಮೆರುಗು ಹೆಚ್ಚಿಸಿದರು.
ದಾರಿಯುದ್ದಕ್ಕೂ ವಿವಿಧ ಸಮುದಾಯದ ಹುಲಿವೇಷಧಾರಿಗಳ ಮಜಲು ಕುಣಿತ ಹಾಗೂ ಯಾಮೋಂದಿ ಉದ್ಘೋಷ ಮೊಳಗಿತು. ಮಸೀದಿಯಿಂದ, ಬಸವೇಶ್ವರ ದೇವಸ್ಥಾನ ಮುಖ್ಯದ್ವಾರದ ಮೂಲಕ ಗ್ರಾಮದ ಹೊರವಲಯದ ಬಯಲು ಜಾಗದಲ್ಲಿ ಸಾಂಪ್ರದಾಯಿಕ ವಿಧಿವಿಧಾನ ನೆರವೇರಿಸಿ ಹಬ್ಬಕ್ಕೆ ತೆರೆ ಎಳೆಯಲಾಯಿತು.
‘ಯಾವುದೇ ಕಾರ್ಯಕ್ರಮಗಳಿರಲಿ ಭೇದವಿಲ್ಲದೇ, ಒಗ್ಗಟ್ಟಿನಿಂದ ಪಾಲ್ಗೊಳ್ಳುತ್ತೇವೆ. ನಮ್ಮೂರಿನ ಹಿರಿಯರ ಮಾರ್ಗದರ್ಶನದಿಂದ ಎಲ್ಲ ಜನಾಂಗದ ಸ್ನೇಹಿತರು ಒಗ್ಗಟ್ಟಿನಿಂದ ಮೊಹರಂ ಸಹ ಆಚರಿಸುತ್ತೇವೆ’ ಎಂದು ಯುವ ಮುಖಂಡ ಹಸೇನ್ ಅಲಿ ಹೇಳಿದರು.
ಸಮ್ಮಾಳ ಮತ್ತು ನಂದಿಕೋಲು ಕಲಾವಿದರಾದ ನಂದಿಬೇವೂರು ವೀರೇಶ್, ಕಾಳಿಂಗಪ್ಪ, ಚಿಂಪಿಗರ ವೀರೇಶ್, ರಮೇಶ್, ಕೊಟ್ರೇಶ್, ಕೆ.ವೀರೇಶ, ಶಿವಮೂರ್ತಪ್ಪ, ಮಹಾಜನದಹಳ್ಳಿ ವೀರೇಶ್, ಬಸವರಾಜ್, ಮೊಹರಂ ಆಚರಣೆ ಸಮಿತಿಯ ಮುಖಂಡರಾದ ಜಾಲವಾಡಗಿ ಹುಸೇನ್, ಮುತಾಲಿ, ಕೊಟ್ಟೂರು ಯಮನೂರು, ಖಾಜಾ, ಕೆ.ಚಾಂದಭಾಷ, ಮುತ್ತಿಗಿ ರಾಜ, ಕೂಲಹಳ್ಳಿ ಜಮಾಲ್, ಹಳ್ಳಿ ಭಾಷಸಾಬ್, ಮೊಹ್ಮದ್ ರಫಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.