ADVERTISEMENT

ಹೂವಿನಹಡಗಲಿ: ಮೈಲಾರ ಜಾತ್ರೆ ಸಡಗರ, ಕಾರ್ಣಿಕಕ್ಕೆ ಭಕ್ತರ ಕಾತುರ

ದೈವವಾಣಿ ಆಲಿಸಲು ಕ್ಷೇತ್ರಕ್ಕೆ ರಾಜ್ಯ, ಹೊರರಾಜ್ಯಗಳಿಂದ ಸಾಗಿಬಂದ ಭಕ್ತರ ಮಹಾಪೂರ

ಪ್ರಜಾವಾಣಿ ವಿಶೇಷ
Published 26 ಫೆಬ್ರುವರಿ 2024, 6:34 IST
Last Updated 26 ಫೆಬ್ರುವರಿ 2024, 6:34 IST
ಮೈಲಾರ ಸುಕ್ಷೇತ್ರದ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಭಕ್ತರು ಹರಕೆ ತೀರಿಸುತ್ತಿರುವುದು
ಮೈಲಾರ ಸುಕ್ಷೇತ್ರದ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಭಕ್ತರು ಹರಕೆ ತೀರಿಸುತ್ತಿರುವುದು   

ಹೂವಿನಹಡಗಲಿ: ದಿಗಂತದಲ್ಲಿ ಸೂರ್ಯ ಮರೆಯಾಗುವ ಸಮಯ, ಮೈಲಾರ ಡೆಂಕನಮರಡಿ ಸುತ್ತುವರಿದ ಲಕ್ಷಾಂತರ ಭಕ್ತರಿಗೆ ದೈವವಾಣಿ ಕೇಳಿಸಿಕೊಳ್ಳುವ ಕಾತುರ, ಗೊರವಯ್ಯನ ‘ಸದ್ದಲೇ…’ ಉದ್ಘಾರಕ್ಕೆ ಸ್ತಬ್ದಗೊಳ್ಳುವ ಜೀವ ಸಂಕುಲ, ಶುಭ್ರ ನೀಲಾಕಾಶ ದಿಟ್ಟಿಸಿ, ಕಾರ್ಣಿಕ ಉಕ್ತಿ ನುಡಿದು ಮೇಲಿಂದ ಜಿಗಿಯುವ ಗೊರವಯ್ಯ..

ನಾಡಿನ ಪ್ರಸಿದ್ಧ ಧಾರ್ಮಿಕ ಸುಕ್ಷೇತ್ರ ಮೈಲಾರದಲ್ಲಿ ಅಸಂಖ್ಯ ಭಕ್ತಗಣದ ಮಧ್ಯೆ ಮೊಳಗುವ ಮೈಲಾರಲಿಂಗೇಶ್ವರ ಕಾರ್ಣಿಕ ಮಹೋತ್ಸವ ಚಿತ್ರಣವಿದು. ಕೆಲ ನಿಮಿಷಗಳಲ್ಲಿ ಮುಗಿದು ಹೋಗುವ ದೈವವಾಣಿ ನುಡಿಯುವ ಈ ಧಾರ್ಮಿಕ ಆಚರಣೆಯನ್ನು ಕಣ್ತುಂಬಿಕೊಳ್ಳಲು ರಾಜ್ಯ, ಹೊರ ರಾಜ್ಯಗಳಿಂದ ಅಪಾರ ಭಕ್ತರು ಮೈಲಾರಕ್ಕೆ ಬರುತ್ತಾರೆ.

ಮೈಲಾರ ಸುಕ್ಷೇತ್ರದಲ್ಲಿ ನಡೆಯುವ ಕಾರ್ಣಿಕ ಮಹೋತ್ಸವಕ್ಕೆ ಪೌರಾಣಿಕ ಹಿನ್ನೆಲೆ ಇದೆ. ಭೂಲೋಕದಲ್ಲಿ ಈ ಹಿಂದೆ ರಾಕ್ಷಸರ ಉಪಟಳ ಹೆಚ್ಚಾದಾಗ ಸಾಕ್ಷಾತ್ ಶಿವನು ಮೈಲಾರಲಿಂಗನ ಅವತಾರವೆತ್ತಿ ಮೈಲಾರದ ಡೆಂಕನಮರಡಿಯಲ್ಲಿ ರಾಕ್ಷಸರ ಮರ್ದನ ಮಾಡಿದ್ದನೆಂಬ ಪ್ರತೀತಿ ಇದೆ. ಅದರ ವಿಜಯೋತ್ಸವದ ಸಂಕೇತವಾಗಿ ಪ್ರತಿವರ್ಷ ಕಾರ್ಣಿಕ ಮಹೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ ಎಂಬುದು ಇಲ್ಲಿನ  ಜನರ ನಂಬಿಕೆ.

ADVERTISEMENT

ಗೂಡಾರ್ಥದಿಂದ ಕೂಡಿರುವ ಸ್ವಾಮಿಯ ನುಡಿಯು ಭವಿಷ್ಯವಾಣಿ ಆಗಿರಲಿದೆ. ಕಾರ್ಣಿಕ ಉಕ್ತಿಯನ್ನು ಮಳೆ, ಬೆಳೆ, ರಾಜಕೀಯ, ವಾಣಿಜ್ಯ ಕ್ಷೇತ್ರಗಳ ಮೇಲೆ ತಾಳೆ ಹಾಕಿ ವಿಶ್ಲೇಷಿಸಲಾಗುತ್ತದೆ.

ಮೈಲಾರಲಿಂಗನ ಪರಂಪರೆ ದೇಶದಲ್ಲೇ ವಿಶಿಷ್ಟವಾಗಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಮೈಲಾರಲಿಂಗೇಶ್ವರ ದೇವಸ್ಥಾನಗಳಿದ್ದರೂ ತಾಲ್ಲೂಕಿನ ಮೈಲಾರ ಸುಕ್ಷೇತ್ರವೇ ಸ್ವಾಮಿಯ ಮೂಲ ನೆಲೆಯಾಗಿದೆ. ಕೋರಿ ಅಂಗಿ, ಕುಂಚಿಗೆ ತೊಟ್ಟು, ಒಂದು ಕೈಯಲ್ಲಿ ಡಮರುಗ, ಮತ್ತೊಂದು ಕೈಯಲ್ಲಿ ಭಂಡಾರದ ಬಟ್ಟಲು ಹಿಡಿದು ಧಾರ್ಮಿಕ ನೆಲೆಗಳನ್ನು ಹೊತ್ತು ತಿರುಗುವ ಗೊರವ ಪರಿವಾರವು ಮೈಲಾರ ಜಾತ್ರೆಯ ಕೇಂದ್ರ ಬಿಂದುವಾಗಿದ್ದಾರೆ. ಇವರು ಇಲ್ಲದಿದ್ದರೆ ಜಾತ್ರೆಯ ವಿಧಿ–ವಿಧಾನ, ಆಚರಣೆಗಳು ಪೂರ್ಣಗೊಳ್ಳುವುದಿಲ್ಲ.

ಇಷ್ಟಾರ್ಥ ನೆರವೇರಿಸುವ ದೇವರು

ಮೈಲಾರಲಿಂಗ ಸ್ವಾಮಿಯನ್ನು ಇಷ್ಟಾರ್ಥ ನೆರವೇರಿಸುವ ದೈವ ಎಂದು ಭಕ್ತರು ನಂಬಿದ್ದಾರೆ. ಹಿಂದುಳಿದ ಸಮುದಾಯಗಳು ಸೇರಿದಂತೆ ವೀರಶೈವರು ಬ್ರಾಹ್ಮಣರು ಮನೆದೇವರಾಗಿ ಪೂಜಿಸುತ್ತಾರೆ. ಮುಸಲ್ಮಾನರು ಲಂಬಾಣಿಗರು ಸ್ವಾಮಿಯ ಭಕ್ತರಾಗಿರುವುದರಿಂದ ಮೈಲಾರಲಿಂಗ ಸ್ವಾಮಿಯನ್ನು ‘ಜಾತ್ಯತೀತ ದೇವರು’ ಎನ್ನಲಾಗುತ್ತಿದೆ. ಕರ್ನಾಟಕ ಸೇರಿದಂತೆ ನೆರೆಯ ಮಹಾರಾಷ್ಟ್ರ ಕೇರಳ ತಮಿಳುನಾಡು ತೆಲಂಗಾಣ ಆಂಧ್ರ ಪ್ರದೇಶದಲ್ಲಿಯೂ ಸ್ವಾಮಿಯ ಭಕ್ತರಿದ್ದಾರೆ. ಗ್ರಾಮೀಣ ಸೊಗಡಿನ ಮೈಲಾರ ಜಾತ್ರೆ ಆಧುನಿಕ ತಂತ್ರಜ್ಞಾನ ಎಷ್ಟೇ ಮುಂದುವರಿದ್ದರೂ ಮೈಲಾರ ಜಾತ್ರೆ ಅಪ್ಪಟ ಗ್ರಾಮೀಣ ಸೊಗಡು ಉಳಿಸಿಕೊಂಡು ಬಂದಿದೆ. ರೈತರು ಇಡೀ ಪರಿವಾರದೊಂದಿಗೆ ಎತ್ತಿನ ಬಂಡಿ ಟ್ರ್ಯಾಕ್ಟರ್‌ನಲ್ಲಿ ಬಂದು ಜಾತ್ರಾ ಮೈದಾನ ಹೊಲ ಗದ್ದೆಗಳಲ್ಲಿ ವಾಸ್ತವ್ಯ ಹೂಡುತ್ತಾರೆ. ಸುಶಿಕ್ಷಿತ ಭಕ್ತ ಸಮುದಾಯಗಳೂ ಇಲ್ಲಿನ ಧಾರ್ಮಿಕ ಆಚರಣೆ ಹರಕೆಯ ಭಕ್ತಿ ಸೇವೆಯನ್ನು ಚಾಚು ತಪ್ಪದೇ ನಡೆಸಿಕೊಂಡು ಬಂದಿರುವುದು ವಿಶೇಷ.

ಮೈಲಾರ ಸುಕ್ಷೇತ್ರದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಸಿಕೊಡುವ ಗೊರವ ಪರಿವಾರ
ಮೈಲಾರಲಿಂಗೇಶ್ವರ ಸ್ವಾಮಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.