ಹೂವಿನಹಡಗಲಿ: ‘ಮುತ್ತಿನರಾಶಿ ಮೂರು ಪಾಲು ಆತಲೇ ಪರಾಕ್’ ಇದು ತಾಲ್ಲೂಕಿನ ಐತಿಹಾಸಿಕ ಪ್ರಸಿದ್ಧ ಧಾರ್ಮಿಕ ಸುಕ್ಷೇತ್ರ ಮೈಲಾರದಲ್ಲಿ ಮೊಳಗಿದ ಮೈಲಾರಲಿಂಗೇಶ್ವರ ಸ್ವಾಮಿಯ ಕಾರಣಿಕ ನುಡಿ.
ಮೈಲಾರದ ಡೆಂಕನ ಮರಡಿಯಲ್ಲಿ ಸೋಮವಾರ ಸಂಜೆ ಅಪಾರ ಭಕ್ತರ ಜಯಘೋಷ ಹರ್ಷೋದ್ಘಾರದ ನಡುವೆ ಪ್ರಸಕ್ತ ಸಾಲಿನ ಕಾರಣಿಕ ನುಡಿ ಅನುರಣಿಸಿತು.
ದೇವಸ್ಥಾನ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಅಶ್ವರೂಢರಾಗಿ ಡೆಂಕನ ಮರಡಿಗೆ ಆಗಮಿಸಿ ಕಾರಣಿಕ ಸ್ಥಳದಲ್ಲಿ ಪ್ರದಕ್ಷಿಣೆ ಹಾಕಿದರು. ವಿಜಯನಗರದ ಅರಸರು ಈ ಹಿಂದೆ ಮೈಲಾರಲಿಂಗ ಸ್ವಾಮಿಗೆಅರ್ಪಿಸಿದ್ದ ಮೂರ್ತಿಗಳೊಂದಿಗೆ 11 ದಿನಗಳ ಉಪವಾಸ ವ್ರತ ಆಚರಿಸಿದ ಗೊರವಯ್ಯ ರಾಮಣ್ಣನನ್ನು ಸಿಂಹಾಸನ ಕಟ್ಟೆಯಿಂದ ಕಾರಣೀಕ ಸ್ಥಳಕ್ಕೆ ಗೊರವ ಸಮೂಹ ಭವ್ಯ ಮೆರವಣಿಗೆಯಲ್ಲಿ ಕರೆತಂದಿತು. ಈ ವೇಳೆ ‘ಏಳು ಕೋಟಿ ಏಳು ಕೋಟಿಗೂ....ಚಹಾಂಗ ಬಲೋ’ ಎಂಬ ಸ್ವಾಮಿಯ ಜಯಘೋಷ ಮುಗಿಲು ಮುಟ್ಟಿತು.
ಸುಕ್ಷೇತ್ರದ ಪರಂಪರೆಯ ಸಂಕೇತವಾಗಿರುವ ಬಿಲ್ಲು ಏರಿದ ಗೊರವಯ್ಯ ‘ಸದ್ದಲೇ’ ಎಂದು ಕೂಗುತ್ತಿದ್ದಂತೆ ಕ್ಷಣಕಾಲ ಜೀವಸಂಕುಲ ಸ್ತಬ್ದವಾಯಿತು. ಆಗ ಗೊರವಯ್ಯ ಮೇಲಿನಂತೆ ಕಾರಣಿಕ ನುಡಿದು ದಕ್ಷಿಣ ದಿಕ್ಕಿಗೆ ಹಿಮ್ಮುಖವಾಗಿ ಜಿಗಿದರು. ನೆರೆದಿದ್ದ ಗೊರವ ಸಮೂಹ ಅವರನ್ನು ಕಂಬಳಿಯಲ್ಲಿ ಹಿಡಿದರು.
ಪ್ರಸಕ್ತ ವರ್ಷದ ಕಾರಣಿಕ ನುಡಿಯಲ್ಲಿ ಶುಭ ಫಲ ಕಾಣಿಸುತ್ತಿಲ್ಲ ಎಂದು ಭಕ್ತರು ಅರ್ಥೈಸುತ್ತಿದ್ದರು. ರಾಜಕೀಯ, ಕೃಷಿ, ವ್ಯವಹಾರಿಕ ಕ್ಷೇತ್ರದಲ್ಲಿ ಏರುಪೇರಾಗುವ ಸೂಚನೆ ಕಾಣಿಸುತ್ತದೆ ಎಂದು ವಿಶ್ಲೇಷಿಸುತ್ತಿದ್ದರು.
ಕೋವಿಡ್ ಸೋಂಕಿನ ಭೀತಿಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮೈಲಾರ ಜಾತ್ರೆಗೆ ನಿರ್ಬಂಧ ಹೇರಿದ್ದರಿಂದ ಭಕ್ತರ ಸಂಖ್ಯೆ ಕಡಿಮೆ ಇತ್ತು. ಪ್ರತಿ ವರ್ಷ ಲಕ್ಷೋಪಲಕ್ಷ ಭಕ್ತರ ನಡುವೆ ಜರುಗುತ್ತಿದ್ದ ಕಾರಣಿಕ ಮಹೋತ್ಸವ ಈ ಬಾರಿ ಸೀಮಿತ ಜನರ ನಡುವೆ ನಡೆಯಿತು.
ಇವುಗಳನ್ನೂ ಓದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.