ಹೊಸಪೇಟೆ (ವಿಜಯನಗರ): ‘ಎಲ್ಲರಿಗೂ ಉನ್ನತ ಶಿಕ್ಷಣ ಕೊಡುವುದು ಹೊಸ ಶಿಕ್ಷಣ ನೀತಿಯ (ಎನ್‌ಇಪಿ) ಮುಖ್ಯ ಉದ್ದೇಶ’ ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್ ತಿಳಿಸಿದರು.
ಗುರುವಾರ ಸಂಜೆ ಇಲ್ಲಿ ನಡೆದ ಹಂಪಿ ಕನ್ನಡ ವಿಶ್ವವಿದ್ಯಾಲಯದ 31ನೇ ಘಟಿಕೋತ್ಸವದಲ್ಲಿ ನಾಡೋಜ ಗೌರವ ಹಾಗೂ ಡಿ.ಲಿಟ್., ಪಿಎಚ್.ಡಿ ಪದವಿ ಪ್ರದಾನ ಮಾಡಿ ಮಾತನಾಡಿದ ಅವರು, ಹೊಸ ಶಿಕ್ಷಣ ನೀತಿ ಉಜ್ವಲ ಭಾರತದ ಭವಿಷ್ಯಕ್ಕೆ ನಾಂದಿ ಹಾಡಲಿದೆ. ಒಂದು ಭಾರತ, ಶ್ರೇಷ್ಠ ಭಾರತ, ನವ ಭಾರತ, ಆತ್ಮನಿರ್ಭರ ಭಾರತ ಕಟ್ಟುವ ಕೆಲಸಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.
ಹೊಸ ಶಿಕ್ಷಣ ನೀತಿಯಿಂದ ಭಾರತಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲು ಸಹಕಾರಿಯಾಗಲಿದೆ. ಪ್ರತಿಯೊಬ್ಬರೂ ದೇಶದ ಹಿತಕ್ಕಾಗಿ ಚಿಂತಿಸಬೇಕು. ದೇಶವನ್ನು ವಿಶ್ವಗುರು ಆಗಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಅದಕ್ಕೆ ಪ್ರತಿಯೊಬ್ಬರ ಪಾಲುದಾರಿಕೆ, ಸಹಭಾಗಿತ್ವ ಅಗತ್ಯ ಎಂದು ಹೇಳಿದರು.
ಬಹು ಆಯಾಮಗಳಲ್ಲಿ ಕನ್ನಡದ ಪಾರಂಪರಿಕ ಜ್ಞಾನದ ಅಧ್ಯಯನಕ್ಕಾಗಿ 1991ರಲ್ಲಿ ಸರ್ಕಾರವು ಹಂಪಿ ಕನ್ನಡ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದೆ. ವಿಶೇಷ ಶೈಕ್ಷಣಿಕ ಶೈಲಿ ರೂಢಿಸಿಕೊಂಡು ಜ್ಞಾನಧಾರೆಯೆರೆಯುತ್ತಿದೆ. ಸಾಹಿತಿ ಚಂದ್ರಶೇಖರ ಕಂಬಾರ ಅವರು ಅದಕ್ಕೆ ಉತ್ತಮ ಅಡಿಪಾಯ ಹಾಕಿ ಶ್ರೇಷ್ಠ ಕೆಲಸ ಮಾಡಿದ್ದಾರೆ. ವಿಶ್ವವಿದ್ಯಾಲಯದ ಹಸ್ತಪ್ರತಿ ಭಂಡಾರದಲ್ಲಿ ಐದು ಸಾವಿರ ಹಸ್ತಪ್ರತಿಗಳ ಸಂಗ್ರಹವಿದೆ. ಇದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ ಎಂದರು.
ಮೂವರಿಗೆ ನಾಡೋಜ ಗೌರವ
ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ (ವೈದ್ಯಕೀಯ ಕ್ಷೇತ್ರ), ಬೆಂಗಳೂರಿನ ಚೋಳನಾಯಕನಹಳ್ಳಿಯ ಸಾಹಿತಿ ಕೃಷ್ಣಪ್ಪ ಜಿ. (ಸಾಹಿತ್ಯ ಕ್ಷೇತ್ರ) ಹಾಗೂ ಚಿಕ್ಕಬಳ್ಳಾಪುರದ ತುಳವನೂರಿನ ಎಸ್. ಷಡಕ್ಷರಿ (ಸಾಹಿತ್ಯ–ಸಮಾಜ ಸೇವೆ ಕ್ಷೇತ್ರ) ಅವರಿಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ನಾಡೋಜ ಗೌರವ ಪದವಿ ಪ್ರದಾನ ಮಾಡಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.