ADVERTISEMENT

ವಿಜಯನಗರ | ಊರಿಗೆ ಮರಳುವಾಗ ದೇವತೆಗಳಿಗೂ ಕಣ್ಣೀರು!

ಕಮಲಾಪುರ ಕೇರಿ ಅಮ್ಮಂದಿರಿಗೆ ಹೊಸಪೇಟೆಯೇ ತವರು

ಎಂ.ಜಿ.ಬಾಲಕೃಷ್ಣ
Published 10 ಅಕ್ಟೋಬರ್ 2024, 4:44 IST
Last Updated 10 ಅಕ್ಟೋಬರ್ 2024, 4:44 IST
ಹೊಸಪೇಟೆಯ ವ್ಯಾಸಕೇರಿ ಸಹಿತ ಹಲವು ಕೇರಿಗಳಲ್ಲಿ ನವರಾತ್ರಿಯ ದೀಪಾಲಂಕಾರ ಕಣ್ಮನ ಸೆಳೆಯುತ್ತಿದೆ   –ಪ್ರಜಾವಾಣಿ ಚಿತ್ರ/ ಲವ ಕೆ.
ಹೊಸಪೇಟೆಯ ವ್ಯಾಸಕೇರಿ ಸಹಿತ ಹಲವು ಕೇರಿಗಳಲ್ಲಿ ನವರಾತ್ರಿಯ ದೀಪಾಲಂಕಾರ ಕಣ್ಮನ ಸೆಳೆಯುತ್ತಿದೆ   –ಪ್ರಜಾವಾಣಿ ಚಿತ್ರ/ ಲವ ಕೆ.   

ಹೊಸಪೇಟೆ (ವಿಜಯನಗರ): ಹೊಸಪೇಟೆಯ ಏಳು ಕೇರಿಗಳಲ್ಲಿ, ಕಮಲಾಪುರದ ಏಳು ಕೇರಿಗಳಲ್ಲಿ ಹಾಗೂ ತಾಲ್ಲೂಕಿನ ನಾಗೇನಹಳ್ಳಿಯ ಧರ್ಮದಗುಡ್ಡದ ಚನ್ನಬಸವೇಶ್ವರ ದೇವಸ್ಥಾನದಲ್ಲಿ ಶಕ್ತಿ ದೇವತೆಯ ಆರಾಧನೆ ವಿಶಿಷ್ಟ ರೀತಿಯಲ್ಲಿ ನಡೆಯುತ್ತ ಬಂದಿದ್ದು, ಕಮಲಾಪುರದ ಅಮ್ಮಂದಿರಿಗೆ ಹೊಸಪೇಟೆಯೇ ತವರು. ಮರಳಿ ಊರಿಗೆ ತೆರಳುವಾಗ ದೇವತೆಗಳೂ ಕಣ್ಣೀರು ಹಾಕುವಂತಹ ಸನ್ನಿವೇಶ ಸೃಷ್ಟಿಯಾಗುವುದು ಇಲ್ಲಿನ ವಿಶೇಷ.

‘ಅಪ್ಪಟ ಬುಡಕಟ್ಟು ಸಂಸ್ಕೃತಿಯ ರೂಪವಾಗಿ ಇಲ್ಲಿ ನಡೆಯುವ ಶಕ್ತಿ ದೇವತೆಯ ಆರಾಧನೆ ಆಧುನಿಕ ಕಾಲಘಟ್ಟದಲ್ಲೂ ತನ್ನ ಪುರಾತನ ಪರಂಪರೆಯನ್ನು ಉಳಿಸಿಕೊಂಡೇ ಬಂದಿದ್ದು, ನಾಲ್ಕಾರು ದಿನ ಹೊಸಪೇಟೆಯ ಏಳು ಕೇರಿಗಳ ಒಳಗೆ ಸುತ್ತಾಡುವ ಕಮಲಾಪುರದ ದೇವತೆಗಳ ಪಲ್ಲಕಿಗಳು ತವರಲ್ಲೇ ಇದ್ದಂತಹ ಖುಷಿಯಲ್ಲಿ ಇರುತ್ತವೆ. ನವರಾತ್ರಿಯ ಕೊನೆಯ ಐದು ದಿನ ಅವುಗಳು ಮತ್ತೆ ಕಮಲಾಪುರಕ್ಕೇ ತೆರಳುತ್ತವೆ. ಹೀಗೆ ತೆರಳುವಾಗ ದೇವತೆಗಳ ಮುಖ ಬಾಡಿದಂತಹ, ದುಃಖದಲ್ಲಿರುವಂತಹ ಭಾವ ಕಾಣಿಸುತ್ತದೆ’ ಎಂದು ಈ ಸಂಪ್ರದಾಯವನ್ನು ಹಲವು ವರ್ಷಗಳಿಂದ ಹತ್ತಿರದಿಂದ ನೋಡುತ್ತ ಬಂದಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ತಾರಿಹಳ್ಳಿ ಹನುಮಂತಪ್ಪ ಹೇಳುತ್ತಾರೆ.

ನಾಲ್ಕು ದೇವತೆಗಳಿಗೆ ತವರು: ಕಮಲಾಪುರದಲ್ಲಿ ಸಹ ಏಳು ಕೇರಿಗಳಿವೆ. ಈ ಪೈಕಿ ಸದ್ಯ ನಾಲ್ಕು ಕೇರಿಗಳ ದೇವತೆಗಳು ಮಾತ್ರ ಹೊಸಪೇಟೆಯ ತವರು ಮನೆಗೆ ಬರುತ್ತಿವೆ. ಕಮಲಾಪುರದ ಬಂಡೆಕೇರಿಯ ಹುಲಿಗೆಮ್ಮ, ತಿಮಲತ್ ಕೇರಿಯ ತಾಯಮ್ಮ, ಗೋನಾಳಕೇರಿ ನಿಜಲಿಂಗಮ್ಮ ಹಾಗೂ ಮನ್ಮಥಕೇರಿಯ ನರಗೆಲ್ಲಮ್ಮ ಅವರ ಪಲ್ಲಕಿಗಳು ಕಮಲಾಪುರ ಕೆರೆಯ ಗಡಿ ದಾಟಿ ಗಾಳೆಮ್ಮನಗುಡಿಯಲ್ಲಿ ಸ್ವಲ್ಪ ವಿಶ್ರಾಂತಿ ಪಡೆದು ಹೊಸಪೇಟೆಗೆ ಬರುವುದು, ಇಲ್ಲಿ ನಾಲ್ಕಾರು ದಿನ ಸುತ್ತಾಡುವುದು, ಪುನಃ ಗಾಳೆಮ್ಮಗುಡಿಯಲ್ಲಿ ಸ್ವಲ್ಪ ವಿಶ್ರಾಂತಿ ಪಡೆದು ಕಮಲಾಪುರಕ್ಕೆ ತೆರಳುವ ಪರಿಯೇ ವಿಶಿಷ್ಟ. 

ADVERTISEMENT

ತವರು ಮನೆಗೆ ಬರುವ ದೇವತೆಗಳಿಗೆ ದೃಷ್ಟಿ ನೀವಾಳಿಸುವುದು, ಅರಶಿನ ಕುಂ‍ಕುಮ ನೀಡುವುದು ಸಹಿತ ಮದುಮಕ್ಕಳು ತವರು ಮನೆಗೆ ಬಂದಾಗ ಮಾಡುವ ಎಲ್ಲಾ ಪದ್ಧತಿಯನ್ನೂ ಅನುಸರಿಸಲಾಗುತ್ತದೆ. ಹೊಸಪೇಟೆಯ ಏಳು ಕೇರಿಗಳ ತಾಯಂದಿರೂ ಈ ಅತಿಥಿಗಳಿಗೆ ತಮ್ಮ ಗುಡಿಯ ಪಕ್ಕದಲ್ಲೇ ನಾಲ್ಕಾರು ದಿನ ಆಸರೆ ನೀಡಿ ಪ್ರೀತಿಯಿಂದ ನೋಡುತ್ತವೆ.

ಕೇರಿಗಳಲ್ಲಿ ಸಂಭ್ರಮ: ಹೊಸಪೇಟೆಯ ಮ್ಯಾಸಕೇರಿ, ತಳವಾರಕೇರಿ, ಚಿತ್ರಕೇರಿ, ಜಂಬಾನಹಳ್ಳಿಕೇರಿ, ಉಕ್ಕಡಕೇರಿ, ಬಾಣದಕೇರಿ ಹಾಗೂ ಬಂಡೆಕೇರಿಗಳಲ್ಲಿ ನಡೆಯುವ ದಸರಾ ಆಚರಣೆ, ಪೂಜಾ ಕೈಂಕರ್ಯಗಳು ಸಾಂಪ್ರದಾಯಿಕವಾಗಿ ನಡೆಯುತ್ತಿದ್ದು, ಎಲ್ಲೆಡೆ ತಳಿರು ತೋರಣ, ವಿದ್ಯುತ್ ದೀಪಾಲಂಕಾರ ಗಮನ ಸೆಳೆಯುತ್ತಿದೆ. ಮ್ಯಾಸಕೇರಿಯ ಹುಲಿಗೆಮ್ಮ, ಕೊಂಗಮ್ಮ, ತಳವಾರಕೇರಿಯ ರಾಂಪುರ ದುರ್ಗಮ್ಮ, ಚಿತ್ರಕೇರಿಯ ತಾಯಮ್ಮ, ಬಾಣದಕೇರಿಯ ನಿಜಲಿಂಗಮ್ಮ ಹಾಗೂ ಉಕ್ಕಡಕೇರಿಯ ಜಲದುರ್ಗಮ್ಮ ದೇವಿಯ ಪಲ್ಲಕ್ಕಿ ಮೆರವಣಿಗೆ ನೋಡುವುದೇ ಚೆಂದ.

ಪಲ್ಲಕ್ಕಿ ಮೆರವಣಿಗೆ ಮನೆಗೆ ತೆರಳಿ, ಭಕ್ತರಿಗೆ ಆಶೀರ್ವಾದ ಮಾಡುತ್ತದೆ. ಈ ವೇಳೆ ಭಕ್ತರು, ಮನೆಯಲ್ಲಿರುವ ದವಸ-ಧಾನ್ಯ, ಹೂಹಣ್ಣು ಹಾಗೂ ಕಾಣಿಕೆ ಸಲ್ಲಿಸಿ, ಭಕ್ತಿ ಸಮರ್ಪಣೆ ಮಾಡುತ್ತಾರೆ. ಈ ವೇಳೆ ಮಹಿಳೆಯರು ಸೋಬಾನ ಪದಗಳು ಹಾಡಿ, ಭಕ್ತಿಭಾವ ಮೆರೆಯುತ್ತಾರೆ. 

ಮಹಾಲಯ ಅಮಾವಾಸ್ಯೆಯಂದು ಶಕ್ತಿ ದೇವತೆಗೆಳನ್ನು ತೊಟ್ಟಿಲ ಸೇವೆಗೆ ಕೂಡಿಸುವುದು, ತೊಟ್ಟಿಲು ತೂಗುವುದು, ಒಂಭತ್ತೂ ದಿನ ದೇವಿಯೆ ಪ್ರತಿಮೆಗಳಿಗೆ ನಿತ್ಯ ಒಂದು ಹೊಸ ರೇಷ್ಮೆ ಸೀರೆ ತೊಡಿಸಿ ಅಲಂಕಾರ ಮಾಡುವುದು, ಇಡೀ ರಾತ್ರಿ ದೇವಿಯ ಮುಂದೆ ಸಾಂಪ್ರದಾಯಿಕ ಹಾಡುಗಳಿಂದ ದೇವಿಯನ್ನು ಆರಾಧಿಸುವುದನ್ನು ನೋಡುವುದೇ ಕಣ್ಣಿಗೆ ಹಬ್ಬ.

ಆಯುಧ ಪೂಜೆಯ ದಿನ ಹೊಸಪೇಟೆ ಏಳುಕೇರಿ, ಕಮಲಾಪುರ ಸುತ್ತಮುತ್ತಲಿನ ಶಕ್ತಿದೇವತೆಗಳನ್ನು ಬೃಹತ್ ಮೆರವಣಿಗೆ ಮೂಲಕ ನಾಗೇನಹಳ್ಳಿಯ ಧರ್ಮದಗುಡ್ಡಕ್ಕೆ ಪಲ್ಲಕ್ಕಿಗಳಲ್ಲಿ ಕರೆತರುವುದು, ಶಮಿವೃಕ್ಷಕ್ಕೆ ಪ್ರದಕ್ಷಿಣೆ ಹಾಕುವುದು, ದೇವಿಗೆ ಬನ್ನಿ ಮುಡಿಸುವುದು, ವಿಜಯದಶಮಿ ದಿನ ಊರಬನ್ನಿ ಆಚರಣೆ, ಬಂಧು ಮಿತ್ರರೊಂದಿಗೆ ಬನ್ನಿ ವಿನಿಮಯ ಮಾಡುವುದು ನಡೆಯುತ್ತ ಬಂದಿದ್ದು, ಈ ಬಾರಿಯೂ ಅದಕ್ಕೆ ಸಕಲ ಸಿದ್ಧತೆ ನಡೆದಿದೆ.

ಕಮಲಾಪುರದ ಗೋನಾಳಕೇರಿಯ ನಿಜಲಿಂಗಮ್ಮಳನ್ನು ಪಲ್ಲಕಿಯಲ್ಲಿ ತವರುಮನೆ ಹೊಸಪೇಟೆಗೆ ಕರೆತರುವಾಗ ಕಾಣಿಸುವ ಸಂಭ್ರಮ  –ಪ್ರಜಾವಾಣಿ ಚಿತ್ರ
ಹೊಸಪೇಟೆಯ ಬುಡಕಟ್ಟು ನವರಾತ್ರಿ ಆಚರಣೆ ಆಧುನಿಕತೆಯ ಭರಾಟೆಯಲ್ಲೂ ತನ್ನ ಮೂಲ ಸಂಸ್ಕೃತಿಯನ್ನು ಉಳಿಸಿಕೊಂಡಿರುವುದು ವಿಶಿಷ್ಟ. ಈ ಸಂಪ್ರದಾಯ ಮುಂದಿನ ಪೀಳಿಗೆಯೂ ಮುಂದುವರಿಸುವಂತಾಗಬೇಕು
ಪ್ರೊ.ತಾರಿಹಳ್ಳಿ ಹನುಮಂತಪ್ಪ ಹಂಪಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ

‘ಕೇರಿ ಬಿಟ್ಟವರು ಮತ್ತೆ ಕೇರಿಗೆ’

‘ಬೇರೆ ಬೇರೆ ಕಾರಣಗಳಿಗೆ ಕೇರಿಗಳನ್ನು ತೊರೆದವರು ನವರಾತ್ರಿ ಸಂದರ್ಭದಲ್ಲಿ ಮತ್ತೆ ತಮ್ಮ ಕೇರಿಗೇ ಬಂದು ದೇವಿಯ ಆರಾಧನೆಯಲ್ಲಿ ತೊಡಗುವುದು ಈಚಿನ ದಿನಗಳಲ್ಲಿ ಹೆಚ್ಚಾಗಿ ಕಾಣಿಸತೊಡಗಿದೆ. ತಮ್ಮ ಜಾತಿ ಕೇರಿಗಳ ಬಗ್ಗೆ ಹೇಳಿಕೊಳ್ಳಲು ಹಿಂಜರಿಯುತ್ತಿದ್ದವರಿಗೆ ‘ದೋಷ’ ಕಂಡುಬಂದುದೇ ಈ ಬದಲಾವಣೆಗೆ ಕಾರಣ ಎಂದು ಹೇಳಲಾಗುತ್ತಿದೆ. ಎಲ್ಲಾ ಕೇರಿಗಳಲ್ಲೂ ಇದೀಗ ಸಾರ್ವಜನಿಕರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಆರಂಭವಾಗಿದೆ.ಲ ಬೇರೆ ಕೇರಿಗಳಿಗೆ ಹೋದರೆ ಅವರಿಗೆ ವಿಶೇಷ ಆತಿಥ್ಯ ನೀಡುವ ವ್ಯವಸ್ಥೆಯೂ ಇದೀಗ ಆರಂಭವಾಗಿದೆ. ಈ ಮೂಲಕ ನಗರದಲ್ಲಿನ ಕೇರಿಗಳ ದಸರಾ ಆಚರಣೆಯಲ್ಲಿ ಬಹಳ ಬದಲಾವಣೆಗಳು ಕಾಣಿಸತೊಡಗಿವೆ’ ಎಂದು ಪ್ರೊ.ತಾರಿಹಳ್ಳಿ ಹನುಮಂತಪ್ಪ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.