ADVERTISEMENT

ಹೊಸಪೇಟೆ | ನೇಹಾ ಕೊಲೆ ಖಂಡಿಸಿ ಪ್ರತಿಭಟನೆ: ಸಿಬಿಐ ತನಿಖೆಗೆ ಶ್ರೀರಾಮುಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2024, 6:58 IST
Last Updated 22 ಏಪ್ರಿಲ್ 2024, 6:58 IST
<div class="paragraphs"><p>ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ನೇತೃತ್ವದಲ್ಲಿ&nbsp;ಪ್ರತಿಭಟನೆ ನಡೆಸಲಾಯಿತು.</p></div>

ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

   

ಹೊಸಪೇಟೆ (ವಿಜಯನಗರ): ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣವನ್ನು ಖಂಡಿಸಿ ನಗರದಲ್ಲಿ ಬಿಜೆಪಿ ಮತ್ತು ಇತರ ಹಲವು ಸಂಘಟನೆಗಳು ಸೋಮವಾರ ಸರಣಿ ಪ್ರತಿಭಟನೆ ನಡೆಸಿದ್ದು, ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂಬ ಒಕ್ಕೊರಲ ಒತ್ತಾಯ ಮಾಡಲಾಯಿತು.

ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು, ರಾಜ್ಯ ಎಸ್‌ಟಿ ಮೋರ್ಚಾ ಅಧ್ಯಕ್ಷ ಬಂಗಾರಿ ಹನುಮಂತು ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಶ್ರೀರಾಮುಲು, ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.

ADVERTISEMENT

‘ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷವಾಗುತ್ತ ಬಂದಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಮಹಿಳೆಯರಿಗೆ ರಕ್ಷಣೆ ಇಲ್ಲವಾಗಿದೆ. ಆಡಳಿತ ನಡೆಸಲು ಸಾಧ್ಯವಿಲ್ಲದಿದ್ದರೆ ಸಿದ್ದರಾಮಯ್ಯ ಸರ್ಕಾರ ತಕ್ಷಣ ರಾಜೀನಾಮೆ ಸಲ್ಲಿಸಬೇಕು’ ಎಂದು ಅವರು ಆಗ್ರಹಿಸಿದರು.

‘ಈಚಿನ ದಿನಗಳಲ್ಲಂತೂ ಹಿಂದೂಗಳನ್ನು ಗುರಿಯಾಗಿಸಿ ದಾಳಿಗಳು ಹೆಚ್ಚುತ್ತಿವೆ. ಸರ್ಕಾರದ ರಕ್ಷಣೆ ಇದೆ ಎಂಬ ಕಾರಣಕ್ಕೆ ಸಮಾಜ ಘಾತುಕ ಶಕ್ತಿಗಳಿಗೂ ಧೈರ್ಯ ಹೆಚ್ಚುವಂತಾಗಿದೆ. ಇದು ರಾಜಕಾರಣ ಮಾಡುವ ವಿಷಯವಲ್ಲ, ಬದಲಿಗೆ ಹಿಂದೂಗಳ ಮತ್ತು ಹೆಣ್ಣುಮಕ್ಕಳ ರಕ್ಷಣೆಯ ವಿಚಾರವಾಗಿದೆ. ಸರ್ಕಾರ ತಕ್ಷಣ ತಪ್ಪಿತಸ್ಥರಿಗೆ ತಕ್ಷ ಶಿಕ್ಷೆ ಕೊಡಿಸುವ ವ್ಯವಸ್ಥೆ ಮಾಡಬೇಕು ಹಾಗೂ ಬೇಜವಾಬ್ದಾರಿ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು’ ಎಂದು ಅವರು ಒತ್ತಾಯಿಸಿದರು.

ಬಳಿಕ ತಹಶೀಲ್ದಾರ್ ಶ್ರುತಿ ಎಂ.ಎಂ. ಅವರ ಮೂಲಕ ರಾಜ್ಯಪಾಲರಿಗೆ ಮನವಿ ಕಳುಹಿಸಿಕೊಡಲಾಯಿತು. ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ್‌ ಅವರು ಮನವಿ ಓದಿ ಹೇಳಿ, ಈಗಿನ ಕಾಂಗ್ರೆಸ್ ಸರ್ಕಾರ ಕಾನೂನು ಸುವ್ಯವಸ್ಥೆಯನ್ನು ಮತಾಂಧರ ಕೈಯಲ್ಲಿ ನೀಡಿದೆ. ಹೀಗಾಗಿ ಸದಾ ಹಿಂದೂ ಭಾವನೆಗಳಿಗೆ ಧಕ್ಕೆ ತಂದರೂ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ. ಹಿಂದೂಗಳ ರಕ್ಷಣೆ ಮಾಡುವಲ್ಲಿ ವಿಫಲವಾದ ಕಾಂಗ್ರೆಸ್ ಸರ್ಕಾರವನ್ನು ಮುಕ್ತಮಾಡಿ ರಾಷ್ಟ್ರಪತಿ ಆಡಳಿತ ಹೇರಲು ಶಿಫಾರಸು ಮಾಡಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಮೊದಲು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಬಿಜೆಪಿ ಕಚೇರಿಯಿಂದ ತಹಶೀಲ್ದಾರ್ ಕಚೇರಿ ವರೆಗೆ ಮೆರವಣಿಗೆ ನಡೆಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಮುಖಂಡರಾದ ಸಿದ್ಧಾರ್ಥ ಸಿಂಗ್‌, ಶಂಕರ್ ಮೇಟಿ, ಸಾಲಿ ಸಿದ್ದಯ್ಯ ಸ್ವಾಮಿ, ಅಶೋಕ್‌ ಜೀರೆ, ಕಿಚಡಿ ಕೊಟ್ರೇಶ್‌ ಇತರರು ಇದ್ದರು.

ವೀರಶೈವ ಲಿಂಗಾಯತ ಸಮುದಾಯದ ಪ್ರತಿಭಟನೆ: ಇದಕ್ಕೆ ಮೊದಲು ವೀರಶೈವ ಲಿಂಗಾಯತ ಸಮುದಾಯದವರಿಂದ ಬೃಹತ್ ಪ್ರತಿಭಟನೆ ನಡೆಯಿತು. ವಿಜಯನಗರ ಕಾಲೇಜು ಬಳಿಯಿಂದ ಪುನೀತ್‌ ರಾಜ್‌ಕುಮಾರ್ ವೃತ್ತದವರೆಗೆ ಮೆರವಣಿಗೆಯಲ್ಲಿ ಬಂದ ನೂರಾರು ಕಾರ್ಯಕರ್ತರು, ನೇಹಾ ಹಂತಕರಿಗೆ ಗಲ್ಲುಶಿಕ್ಷೆ ಆಗಲೇಬೇಕು ಎಂದು ಒತ್ತಾಯಿಸಿದರು.

ಸಮುದಾಯದ ಮುಖಂಡ ಎನ್‌.ಎಂ.ಪಂಪಾಪತಿ ಮಾತನಾಡಿ, ನೇಹಾ ಕೊಲೆ ನಡೆದ ಬಳಿಕ ಸರ್ಕಾರದಲ್ಲಿರುವ ಜವಾಬ್ದಾರಿಯುತ ನಾಯಕರು ಬೇಜವಬ್ದಾರಿ ಹೇಳಿಕೆ ನೀಡಿರುವುದು ಖಂಡನಾರ್ಹ. ಕೊಲ್ಲುವ ಅಧಿಕಾರ ಯಾರಿಗೂ ಇಲ್ಲದಿರುವಾಗ ಕೊಲೆ ಕೃತ್ಯವನ್ನು ಸಮರ್ಥಸುವಂತಹ ಹೇಳಿಕೆಯನ್ನು ಯಾರೂ ನೀಡಬಾರದು. ಸರ್ಕಾರ ತಕ್ಷಣ ಆರೋಪಿಗಳಿಗೆ ಉಗ್ರ ಶಿಕ್ಷೆ ಕೊಡಿಸಬೇಕು ಹಾಗೂ ರಾಜ್ಯದಲ್ಲಿ ಹೆಣ್ಣುಮಕ್ಕಳಿಗೆ ರಕ್ಷಣೆ ಒದಗಿಸಬೇಕು ಎಂದರು. ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡದ್ದು ವಿಶೇಷವಾಗಿತ್ತು.

ಮಹಿಳಾ ಶಕ್ತಿ ಸಂಘ: ಮಾರಿಕಾಂಬಾ ಗ್ರಾಮೀಣ ಅಭಿವೃದ್ಧಿ ಮತ್ತು ಮಹಿಳಾ ಶಕ್ತಿ ಸಂಘದ ವತಿಯಿಂದ ನೇಹಾ ಕೊಲೆ ಖಂಡಿಸಿ ಪುನೀತ್ ರಾಜ್‌ಕುಮಾರ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು ಹಾಗೂ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಸಿ.ಎ.ಗಾಳೆಪ್ಪ, ಸರಳಕಾವ್ಯ ನೇತೃತ್ವ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.