ADVERTISEMENT

ತುಂಗಭದ್ರಾ ಡ್ಯಾಂಗೆ ಕ್ರಸ್ಟ್‌ಗೇಟ್: ಮುಂದಿನ ತಿಂಗಳು ವಿನ್ಯಾಸ, ಜನವರಿಗೆ ಟೆಂಡರ್

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2024, 16:08 IST
Last Updated 22 ನವೆಂಬರ್ 2024, 16:08 IST
   

ಹೊಸಪೇಟೆ (ವಿಜಯನಗರ): ತುಂಗಭದ್ರಾ ಅಣೆಕಟ್ಟೆಗೆ ಹೊಸ ಕ್ರಸ್ಟ್‌ಗೇಟ್‌ಗಳನ್ನು ಅಳವಡಿಸುವ ಸಂಬಂಧ ಮುಂದಿನ ತಿಂಗಳು ರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಪ್ರಾಧಿಕಾರದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಲಿದ್ದು, ವಿನ್ಯಾಸ ಅಂತಿಮಗೊಳಿಸಲಿದ್ದಾರೆ, ಜನವರಿ ವೇಳೆಗೆ ಟೆಂಡರ್ ಅಂತಿಮಗೊಂಡು ಗೇಟ್ ಅಳವಡಿಕೆಗೆ ವೇದಿಕೆ ಸಿದ್ಧಗೊಳ್ಳಲಿದೆ.

ಶುಕ್ರವಾರ ಇಲ್ಲಿನ ತುಂಗಭದ್ರಾ ಮಂಡಳಿಯ ಕಚೇರಿಯಲ್ಲಿ ಮಂಡಳಿಯ ಅಧ್ಯಕ್ಷ ಎಸ್.ಎನ್‌.ಪಾಂಡೆ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹತ್ವದ ಸಭೆಯಲ್ಲಿ ಈ ಕುರಿತಂತೆ ಚರ್ಚೆ ನಡೆದಿದ್ದು, ಎರಡೂ ರಾಜ್ಯಗಳು ನಿಗದಿಪಡಿಸುವ ಬಜೆಟ್‌ ನೋಡಿಕೊಂಡು, ಹಂತ ಹಂತವಾಗಿ ಗೇಟ್‌ ಅಳವಡಿಸುವ ಸಾಧ್ಯತೆ ಕುರಿತು ಚರ್ಚಿಸಿದ್ದಾರೆ.

‘ಇದು 70 ವರ್ಷ ಹಳೆಯ ಅಣೆಕಟ್ಟೆ, ಇದಕ್ಕೆ ಈ ಹಿಂದಿನಂತೆಯೇ ಇರುವ ಕ್ರಸ್ಟ್‌ಗೇಟ್ ನಿರ್ಮಿಸಬೇಕೋ, ಆಧುನಿಕ ವಿನ್ಯಾಸದ ಗೇಟ್ ಅಳವಡಿಸಬೇಕೋ ಎಂಬುದನ್ನು ಮೊದಲಾಗಿ ನಿರ್ಧರಿಸಬೇಕು. ಪ್ರಾಧಿಕಾರ ಇದನ್ನು ತೀರ್ಮಾನಿಸಲಿದೆ. ಅದರ ಆಧಾರದಲ್ಲೇ ಮುಂದಿನ ಎಲ್ಲಾ ಪ್ರಕ್ರಿಯೆಗಳು ನಡೆಯುಲಿವೆ, ವಿನ್ಯಾಸ ಲಭ್ಯವಾದ ಬಳಿಕ ಮಾಡಬೇಕಾದ ಕೆಲಸಗಳ ಕುರಿತಂತೆ ಸಭೆಯಲ್ಲಿ ಚರ್ಚೆ ನಡೆಯಿತು. ಮಾರ್ಚ್ ವೇಳೆಗೆ ಕರ್ನಾಟಕ ಮತ್ತು ಆಂಧ್ರಪ್ರದೇಶ ಸರ್ಕಾರಗಳು ಬಜೆಟ್‌ನಲ್ಲಿ ಎಷ್ಟು ಹಣ ಇಡಲಿವೆ ಎಂಬುದು ತಿಳಿಯಲಿದೆ. ಅದರ ಪ್ರಕಾರ ಕೆಲವು ಗೇಟ್‌ಗಳನ್ನು ಮೇ ಅಂತ್ಯದೊಳಗೆ ಅಳವಡಿಸುವ ಕ್ರಮ ಕೈಗೊಳ್ಳಬಹುದಾಗಿದೆ ಎಂಬ ಚರ್ಚೆ ನಡೆಯಿತು’ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ADVERTISEMENT

‘ಅಣೆಕಟ್ಟೆಗೆ ಸಂಬಂಧಿಸಿದಂತೆ ಎಲ್ಲಾ ನಿರ್ಧಾರಗಳನ್ನೂ ತುಂಗಭದ್ರಾ ಮಂಡಳಿಯೇ ಮೊದಲಿಗೆ ತೆಗೆದುಕೊಳ್ಳಬೇಕು, ಅದಕ್ಕೆ ತಕ್ಕಂತೆ ನಾವು ಬಜೆಟ್ ನೀಡಲು ಸಿದ್ಧ’ ಎಂದು ರಾಜ್ಯವನ್ನು ಪ್ರತಿನಿಧಿಸಿದ ಮಂಡಳಿಯ ಸದಸ್ಯರು ಹೇಳಿದರು ಎನ್ನಲಾಗಿದೆ.

ಕೆಲವೇ ಗೇಟ್ ಅಳವಡಿಕೆ?: ಎಲ್ಲಾ 33 ಗೇಟ್‌ಗಳನ್ನು ಕಳಚಿ ಹೊಸ ಗೇಟ್ ಅಳವಡಿಸಲು ಹಣ ಬೇಕು, ಮೇಲಾಗಿ ಮುಂದಿನ ಜೂನ್ ಒಳಗೆಯೇ ಕಾಮಗಾರಿ ಕೊನೆಗೊಳ್ಳಬೇಕು. ಅದು ಸವಾಲಿನ ಕೆಲಸವೂ ಆಗಿರಲಿದೆ. ಹೀಗಾಗಿ ಹಂತ ಹಂತವಾಗಿ ಕೆಲವೇ ಕೆಲವು ಗೇಟ್‌ಗಳನ್ನು ಅಳವಡಿಸುವ ಕುರಿತಂತೆ ಸಭೆಯಲ್ಲಿ ಚರ್ಚೆ ನಡೆಯಿತು ಎಂದು ಹೇಳಲಾಗಿದೆ.

ನವಲಿಗೆ ತೆಲಂಗಾಣ ತಗಾದೆ: ‘ಸಭೆಯಲ್ಲಿ ನವಲಿ ಸಮತೋಲನ ಜಲಾಶಯದ ಕುರಿತು ಸಹ ಚರ್ಚೆ ನಡೆಯಿತು. ಇದಕ್ಕೆ ಬಹುತೇಕ ಸಮ್ಮತಿ ಸೂಚಿಸಿದ ಆಂಧ್ರದ ಪ್ರತಿನಿಧಿ, ಬಲದಂಡೆ ಮೇಲ್ಮಟ್ಟದ ಕಾಲುವೆಯ (ಎಚ್‌ಎಲ್‌ಸಿ) ಪಕ್ಕದಲ್ಲೇ ಪ್ರವಾಹ ಕಾಲುವೆ ನಿರ್ಮಿಸುವ ತಮ್ಮ ರಾಜ್ಯದ ಪ್ರಸ್ತಾಪವೂ ಇದೆ ಎಂಬುದನ್ನು ಸಭೆಯ ಗಮನಕ್ಕೆ ತಂದರು. ಆದರೆ ಈ ಹಂತದಲ್ಲಿ ತೆಲಂಗಾಣ ಮಧ್ಯಪ್ರವೇಶಿಸಿ, ಹೂಳು ತುಂಬುವ ಸಮಸ್ಯೆ ಪ್ರತಿ ವರ್ಷ ಇದ್ದುದೇ, ಪ್ರತ್ಯೇಕ ಜಲಾಶಯ, ಕಾಲುವೆ ಬದಲಿಗೆ ಹೂಳು ತೆಗೆಯಲು ಕ್ರಮ ಕೈಗೊಳ್ಳಬಹುದಲ್ಲ ಎಂದು ಪ್ರಶ್ನಿಸಿದರು’ ಎಂದು ಮೂಲಗಳು ಹೇಳಿವೆ.

ಸಭೆಯಲ್ಲಿ ಮಂಡಳಿ ಕಾರ್ಯದರ್ಶಿ ಒ.ಆರ್‌.ಕೆ.ರೆಡ್ಡಿ, ಮಂಡಳಿಯಲ್ಲಿರುವ ಕರ್ನಾಟಕದ ಸದಸ್ಯ ಕೃಷ್ಣಮೂರ್ತಿ ಕುಲಕರ್ಣಿ, ಆಂಧ್ರದ ಸದಸ್ಯ ನಾಗರಾಜ್‌, ಕೇಂದ್ರ ಸರ್ಕಾರದ ಹಣಕಾಸು ಇಲಾಖೆಯ ಜಂಟಿ ಕಾರ್ಯದರ್ಶಿ ರಿಚಾ ಮಿಶ್ರಾ, ತೆಲಂಗಾಣದ ಸದಸ್ಯ ಅನಿಲ್‌ ಕುಮಾರ್‌ (ಇಬ್ಬರೂ ವಿಡಿಯೊ ಕಾನ್ಫರೆನ್ಸ್), ಮುನಿರಾಬಾದ್‌ನಲ್ಲಿರುವ ಕರ್ನಾಟಕ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್‌ ಹನುಮಂತಪ್ಪ ದಾಸರ್‌, ಅಧೀಕ್ಷಕ ಎಂಜಿನಿಯರ್‌ ಬಸವರಾಜ್‌, ಮಂಡಳಿಯ ಪ್ರಭಾರ ಕಾರ್ಯಪಾಲಕ ಎಂಜಿನಿಯರ್ ನೀಲಕಂಠ ರೆಡ್ಡಿ, ವಿಭಾಗೀಯ ಕಾರ್ಯಪಾಲಕ ಎಂಜಿನಿಯರ್‌ ಜಿ.ಟಿ.ರವಿಚಂದ್ರ ಇತರರು ಇದ್ದರು.

ಮೂಡಿದ ಭರವಸೆ
ತುಂಗಭದ್ರಾ ಅಣೆಕಟ್ಟೆಯ 19ನೇ ಕ್ರಸ್ಟ್‌ಗೇಟ್ ಕೊಚ್ಚಿಹೋಗಲು ಕಾರಣ ಏನು ಎಂಬುದನ್ನು ತಿಳಿದುಕೊಳ್ಳಲು ಬಂದಿದ್ದ ಕೇಂದ್ರ ಜಲ ಆಯೋಗದ (ಸಿಡಬ್ಲ್ಯುಸಿ) ಮಾಜಿ ಅಧ್ಯಕ್ಷ ಎ.ಕೆ.ಬಜಾಜ್‌ ನೇತೃತ್ವದ ತಜ್ಞರ ತಂಡ ಸೆಪ್ಟೆಂಬರ್ 20ರಂದು ತನ್ನ ವರದಿ ನೀಡಿತ್ತು. ಎಲ್ಲ 33 ಗೇಟ್‌ಗಳನ್ನೂ ಬದಲಿಸಿ ಹೊಸ ಗೇಟ್ ಅಳವಡಿಸಲು ಸಲಹೆ ನೀಡಿತ್ತು. ಅದರಂತೆ ನವೆಂಬರ್ 5ರಂದು ಮಂಡಳಿಯ ಅಧ್ಯಕ್ಷ ಎಸ್.ಎನ್‌.ಪಾಂಡೆ ಅವರು ಅಣೆಕಟ್ಟೆಗೆ ಭೇಟಿ ನೀಡಿದ್ದರು. ಇದೀಗ ಮಹತ್ವದ ಸಭೆ ನಡೆಸುವ ಮೂಲಕ ಮುಂದಿನ ಮಳೆಗಾಲಕ್ಕೆ ಮೊದಲಾಗಿಯೇ ಕೆಲವು ಹೊಸ ಕ್ರಸ್ಟ್‌ಗೇಟ್ ಅಳವಡಿಸುವ ಸಾಧ್ಯತೆ ಬಹುತೇಕ ಖಚಿತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.