ವಿಜಯನಗರ (ಹೊಸಪೇಟೆ): ನೂತನ ವಿಜಯನಗರ ಜಿಲ್ಲೆಗೆ ಆದ್ಯತೆ ಮೇರೆಗೆ ಮೂಲಸೌಕರ್ಯ ಕಲ್ಪಿಸಲಾಗುವುದು ಎಂದು ರಾಜ್ಯ ಸರ್ಕಾರವು ಬಜೆಟ್‌ನಲ್ಲಿ ಘೋಷಿಸಿದೆ. ಆದರೆ, ಬಿಡಿಗಾಸೂ ನೀಡಿಲ್ಲ. ಇದು ಸಹಜವಾಗಿಯೇ ಜಿಲ್ಲೆಯ ಜನತೆಯಲ್ಲಿ ನಿರಾಸೆ ಮೂಡಿಸಿದೆ.
ಹೊಸ ಜಿಲ್ಲೆ ವ್ಯಾಪ್ತಿಯ ತಾಲ್ಲೂಕುಗಳಿಗೂ ಯಾವುದೇ ಕೊಡುಗೆ ಬಜೆಟ್‌ನಲ್ಲಿ ಸಿಕ್ಕಿಲ್ಲ. ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ವಿಜಯನಗರ ಜಿಲ್ಲೆ ಕಟ್ಟಲು ಬಜೆಟ್‌ನಲ್ಲಿ ಅನುದಾನ ಸಿಗಬಹುದು ಎನ್ನುವುದು ಈ ಭಾಗದ ಜನರ ನಿರೀಕ್ಷೆಯಾಗಿತ್ತು. ಮೂಲಸೌಕರ್ಯ ಅಭಿವೃದ್ಧಿ, ಹಜ್ ಮತ್ತು ವಕ್ಫ್ ಖಾತೆ ಸಚಿವ ಆನಂದ್ ಸಿಂಗ್ ಕೂಡ ₹50 ಕೋಟಿ ಅನುದಾನ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಮನವಿ ಸಲ್ಲಿಸಿದ್ದರು. ಆದರೆ, ಸಿ.ಎಂ., ಸಚಿವರ ಮನವಿಗೆ ಕಿವಿಗೊಟ್ಟಿಲ್ಲ.
ಜಿಲ್ಲೆಗೆ ಈಗಾಗಲೇ ವಿಶೇಷ ಅಧಿಕಾರಿ ನೇಮಕಗೊಂಡಿದ್ದಾರೆ. ಇನ್ನಷ್ಟೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೇರಿದಂತೆ ಇತರೆ ಜಿಲ್ಲಾಮಟ್ಟದ ಅಧಿಕಾರಿಗಳು ಬರಬೇಕಿದೆ. ಇವರಿಗೆಲ್ಲ ಪ್ರತ್ಯೇಕ ಕಚೇರಿ, ವಾಸಕ್ಕೆ ಮನೆ ಬೇಕು. ತುಂಗಭದ್ರಾ ಸ್ಟೀಲ್ಸ್ ಪ್ರಾಡಕ್ಟ್ಸ್‌ಗೆ (ಟಿಎಸ್‌ಪಿ) ಸೇರಿದ ಜಾಗದಲ್ಲಿ ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ಭವನ ನಿರ್ಮಾಣ ಆಗುವವರೆಗೆ ಅಲ್ಲಿರುವ ಹಳೆಯ ಕಟ್ಟಡದಲ್ಲಿ ವಿಶೇಷ ಅಧಿಕಾರಿ ಕಚೇರಿ ಆರಂಭಿಸಲು ನಿರ್ಧರಿಸಲಾಗಿದೆ. ಹಳೆಯ ಕಟ್ಟಡದ ನವೀಕರಣ ಪೂರ್ಣಗೊಳ್ಳುವವರೆಗೆ ಅಮರಾವತಿ ಅತಿಥಿ ಗೃಹದಿಂದ ಕೆಲಸ ನಿರ್ವಹಿಸುವರು. ನವೀಕರಣ ಸೇರಿದಂತೆ ಯಾವುದರ ಬಗ್ಗೆಯೂ ಸರ್ಕಾರ ಚಕಾರ ಎತ್ತಿಲ್ಲ. ಅನುದಾನವೂ ಘೋಷಿಸಿಲ್ಲ.
ಜಿಲ್ಲೆಯ ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಕೊಟ್ಟೂರು, ಹರಪನಹಳ್ಳಿ ಹಾಗೂ ಹೂವಿನಹಡಗಲಿಯ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತೀವ್ರ ಸಮಸ್ಯೆ ಇದೆ. ದಶಕಗಳ ಈ ಸಮಸ್ಯೆಗೆ ಹೊಸ ಜಿಲ್ಲೆ ಘೋಷಣೆಯಾದ ನಂತರ ಮುಕ್ತಿ ಸಿಗಬಹುದು ಎಂದು ಆ ಭಾಗದ ಜನ ಭಾವಿಸಿದ್ದರು. ಆದರೆ, ರಾಜ್ಯ ಸರ್ಕಾರ ಸ್ಪಂದಿಸಿಲ್ಲ. ಹೂವಿನಹಡಗಲಿಯಲ್ಲಿ ಮಲ್ಲಿಗೆ ಸಂಶೋಧನಾ ಕೇಂದ್ರ ಆರಂಭಿಸಬೇಕೆಂಬ ದಶಕಗಳ ಬೇಡಿಕೆಗೂ ಮನ್ನಣೆ ಸಿಕ್ಕಿಲ್ಲ. ಬಜೆಟ್‌ನಲ್ಲಿ ಜಿಲ್ಲೆಗೆ ಏನೂ ದಕ್ಕದ ಕಾರಣ ವಿಜಯನಗರ ಜಿಲ್ಲೆಯ ಜನ ಸದ್ಯದ ಮಟ್ಟಿಗೆ ಜಿಲ್ಲೆ ಘೋಷಣೆ ಬಗೆಗಷ್ಟೇ ಖುಷಿ ಪಟ್ಟುಕೊಂಡು ಇರಬೇಕಿದೆ.
‘ಹೊಸ ಜಿಲ್ಲೆಯ ಬಗೆಗೆ ಬಜೆಟ್‌ನಲ್ಲಿ ಸಾಕಷ್ಟು ನಿರೀಕ್ಷೆ ಇತ್ತು. ಆದರೆ, ಅದೆಲ್ಲ ಹುಸಿಯಾಗಿದೆ. ವಿಜಯನಗರ ವ್ಯಾಪ್ತಿಯ ತಾಲ್ಲೂಕುಗಳಿಂದ ಅತಿ ಹೆಚ್ಚು ಜನ ಕೆಲಸ ಅರಸಿಕೊಂಡು ಗುಳೇ ಹೋಗುತ್ತಾರೆ. ಅದನ್ನು ತಪ್ಪಿಸಲು ಕಾರ್ಯಕ್ರಮಗಳಿಲ್ಲ. ನೀರಾವರಿ ಯೋಜನೆಗಳಿಗೆ ಒತ್ತು ಸಿಕ್ಕಿಲ್ಲ. ಜಿಲ್ಲೆಯ ಪಾಲಿಗೆ ನಿರಾಶಾದಾಯಕ ಬಜೆಟ್’ ಎಂದು ವಿಜಯನಗರ ಜಿಲ್ಲಾ ಹೋರಾಟ ಸಮಿತಿ ಸಂಚಾಲಕ ವೈ.ಯಮುನೇಶ್ ಅಸಮಾಧಾನ ಹೊರಹಾಕಿದರು.
ಹಂಪಿಗೂ ಸಿಗದ ಅನುದಾನ
ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಬಜೆಟ್‌ನಲ್ಲಿ ಸರ್ಕಾರ ₹500 ಕೋಟಿ ಮೀಸಲಿರಿಸಿದೆ. ಆದರೆ, ಅದರಲ್ಲಿ ಹಂಪಿ ಸೇರಿದಂತೆ ಜಿಲ್ಲೆಯ ಯಾವ ಪ್ರವಾಸಿ ತಾಣದ ಬಗ್ಗೆ ಉಲ್ಲೇಖವಿಲ್ಲ.
ಹಂಪಿಯಲ್ಲಿ ಶೌಚಾಲಯ, ಸ್ನಾನಗೃಹ, ಪ್ರವಾಸಿಗರಿಗೆ ಕಡಿಮೆ ಬೆಲೆಯಲ್ಲಿ ಬಾಡಿಗೆ ಕೊಠಡಿ ಸೇರಿದಂತೆ ಮೂಲಸೌಕರ್ಯ ಕಲ್ಪಿಸಬೇಕು ಎನ್ನುವುದು ದಶಕಗಳ ಬೇಡಿಕೆ ಇದೆ. ಆದರೆ, ಅದಕ್ಕೆ ಸ್ಪಂದನೆ ಸಿಕ್ಕಿಲ್ಲ.
ತುಂಗಭದ್ರಾ ಜಲಾಶಯದ ಹೆಚ್ಚುವರಿ ನೀರಿನ ಸಂಗ್ರಹಕ್ಕೆ ಸಮನಾಂತರ ಜಲಾಶಯ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದಷ್ಟೇ ಬಜೆಟ್‌ನಲ್ಲಿ ಹೇಳಲಾಗಿದೆ ಹೊರತು ನಿರ್ದಿಷ್ಟವಾಗಿ ಏನನ್ನೂ ಹೇಳಿಲ್ಲ.
***
ವಿಜಯನಗರ ಜಿಲ್ಲಾ ಕೇಂದ್ರದ ಅಭಿವೃದ್ಧಿಗೆ ಯಾವುದೇ ಅನುದಾನ ಕೊಡದಿರುವುದು ಅಸಮಾಧಾನದ ಸಂಗತಿ. ನೂತನ ಜಿಲ್ಲೆಯ ಅಭಿವೃದ್ಧಿಗೆ ಅನುದಾನ ಕೊಡಬೇಕಿತ್ತು.
–ವೈ. ಯಮುನೇಶ್, ಸಂಚಾಲಕ, ವಿಜಯನಗರ ಜಿಲ್ಲಾ ಹೋರಾಟ ಸಮಿತಿ
***
ವಿಜಯನಗರ ಜಿಲ್ಲೆ ಘೋಷಿಸಿದ ನಂತರ ಕನಿಷ್ಠ ಅನುದಾನವಾದರೂ ಸರ್ಕಾರ ಘೋಷಿಸಬೇಕಿತ್ತು. ಸರ್ಕಾರ ಏಕೆ ನಿರ್ಲಕ್ಷ್ಯ ತಾಳಿದೆಯೋ ಗೊತ್ತಿಲ್ಲ.
–ಕೆ.ಎಂ. ಸಂತೋಷ್ ಕುಮಾರ್, ಸಾಮಾಜಿಕ ಹೋರಾಟಗಾರ
***
ನಿರಾಸೆ ಪಡಬೇಕಿಲ್ಲ: ಆನಂದ್ ಸಿಂಗ್
‘ವಿಜಯನಗರಕ್ಕೆ ಬಜೆಟ್‌ನಲ್ಲಿ ಅನುದಾನ ಘೋಷಿಸಿಲ್ಲ ಎಂದು ಯಾರೂ ನಿರಾಸೆ ಪಡಬೇಕಿಲ್ಲ. ಈಗಷ್ಟೇ ಜಿಲ್ಲೆ ಅಭಿವೃದ್ಧಿಗೆ ನೀಲನಕಾಶೆ ಸಿದ್ಧಪಡಿಸಲಾಗುತ್ತಿದೆ. ಅದು ಸಿದ್ಧಪಡಿಸಿದ ನಂತರ ಮುಂದಿನ ಬಜೆಟ್‌ನಲ್ಲಿ ಪ್ರಸ್ತಾವ ಸಲ್ಲಿಸಿ, ಅಗತ್ಯ ಅನುದಾನ ಪಡೆಯಲಾಗುವುದು’ ಎಂದು ಮೂಲಸೌಕರ್ಯ ಅಭಿವೃದ್ಧಿ, ಹಜ್ ಮತ್ತು ವಕ್ಫ್ ಖಾತೆ ಸಚಿವ ಆನಂದ್ ಸಿಂಗ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.
‘ಆಡಳಿತಾತ್ಮಕವಾಗಿ ಜಿಲ್ಲೆ ಕಾರ್ಯನಿರ್ವಹಿಸಲು ₹10ರಿಂದ ₹20 ಕೋಟಿ ಬೇಕು. ಅಷ್ಟು ಅನುದಾನ ನಮಗೆ ಸಿಕ್ಕೇ ಸಿಗುತ್ತದೆ. ಒಂದುವೇಳೆ ಹೆಚ್ಚಿಗೆ ಅನುದಾನ ತಂದರೂ ಸದ್ಯದಮಟ್ಟಿಗೆ ಅದನ್ನು ಖರ್ಚು ಮಾಡಲು ಆಗುವುದಿಲ್ಲ’ ಎಂದು ಹೇಳಿದ್ದಾರೆ.
ನೀಗದ ಕನ್ನಡ ವಿ.ವಿ. ಆರ್ಥಿಕ ಸಮಸ್ಯೆ
ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಬಜೆಟ್‌ನಲ್ಲಿ ಯಾವುದೇ ಅನುದಾನ ಘೋಷಿಸಿಲ್ಲ. ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿರುವ ವಿಶ್ವವಿದ್ಯಾಲಯಕ್ಕೆ ₹70 ಕೋಟಿ ಅನುದಾನ ನೀಡುವಂತೆ ಕುಲಪತಿ ಪ್ರೊ.ಸ.ಚಿ. ರಮೇಶ, ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರು.
ಸಂಶೋಧನೆ, ಭಾಷೆಗಾಗಿಯೇ ಹುಟ್ಟಿಕೊಂಡಿರುವ ರಾಜ್ಯದ ಏಕೈಕ ವಿಶ್ವವಿದ್ಯಾಲಯವಾಗಿರುವ ಕನ್ನಡ ವಿಶ್ವವಿದ್ಯಾಲಯಕ್ಕೆ ಅಗತ್ಯ ಅನುದಾನ ಬಜೆಟ್‌ನಲ್ಲಿ ಘೋಷಿಸಬೇಕೆಂದು ವಿವಿಧ ಸಂಘ ಸಂಸ್ಥೆಗಳು ಪ್ರತಿಭಟನೆ ನಡೆಸಿದ್ದವು. ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಕೂಡ ನಡೆಸಿದ್ದವು. ಆದರೆ, ಯಾವುದೂ ಫಲ ನೀಡಿಲ್ಲ. ಈ ಸಂಬಂಧ ಕುಲಪತಿ ಪ್ರೊ.ಸ.ಚಿ. ರಮೇಶ ಅವರನ್ನು ಸಂಪರ್ಕಿಸಿದಾಗ ಅವರು ಮಾಹಿತಿಗೆ ಲಭ್ಯರಾಗಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.